ADVERTISEMENT

ಹುಬ್ಬಳ್ಳಿ: ಕಿಮ್ಸ್‌ ಹೊರ ರೋಗಿಗಳ ವಿಭಾಗಕ್ಕೆ ಜನಸಾಗರ!

ತಾಸುಗಟ್ಟಲೆ ಸರತಿ ಸಾಲು ಅನಿವಾರ್ಯ; ಜನ, ಸಿಬ್ಬಂದಿ ಹೈರಾಣ

ಹಿತೇಶ ವೈ.
Published 21 ಜೂನ್ 2022, 4:31 IST
Last Updated 21 ಜೂನ್ 2022, 4:31 IST
ಕಿಮ್ಸ್‌ನ ಹೊರರೋಗಿಗಳ ವಿಭಾಗದಲ್ಲಿ ಚೀಟಿ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದ ಜನ ಪ್ರಜಾವಾಣಿಚಿತ್ರ/ ಗುರು ಹಬೀಬ
ಕಿಮ್ಸ್‌ನ ಹೊರರೋಗಿಗಳ ವಿಭಾಗದಲ್ಲಿ ಚೀಟಿ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದ ಜನ ಪ್ರಜಾವಾಣಿಚಿತ್ರ/ ಗುರು ಹಬೀಬ   

ಹುಬ್ಬಳ್ಳಿ: ಕೊರೊನಾ ನಂತರದಲ್ಲಿ ಕಿಮ್ಸ್‌ಗೆ ಬರುವ ಹೊರರೋಗಿಗಳು ಹಾಗೂ ಒಳರೋಗಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಇದಕ್ಕೆ ಪೂರಕವಾಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಸೌಲಭ್ಯ ಕಲ್ಪಿಸದಿರುವ ಕಾರಣ ರೋಗಿಗಳು ಸರತಿ ಸಾಲಿನಲ್ಲಿ ತಾಸುಗಟ್ಟಲೆ ಕಾಯುವ ಪರಿಸ್ಥಿತಿ ಎದುರಾಗಿದೆ.

ಒಳ ಮತ್ತು ಹೊರ ರೋಗಿಗಳ ಸಂಖ್ಯೆಯಲ್ಲಿ ಶೇ 20ರಿಂದ ಶೇ30ರಷ್ಟು ಹೆಚ್ಚಾಗಿದೆ. ಈ ಹಿಂದೆ ಕಿಮ್ಸ್‌ಗೆ ಬರುವ ಹೊರರೋಗಿಗಳ ಸಂಖ್ಯೆಯು ನಿತ್ಯ 1,500ರಿಂದ 2 ಸಾವಿರದ ವರೆಗೆ ಇತ್ತು. ಈಗ 2 ಸಾವಿರದಿಂದ 2,500ರ ವರೆಗೆ ತಲುಪಿದೆ. ಒಳರೋಗಿಗಳ ಸಂಖ್ಯೆ 1,200ರಿಂದ 1,400ರ ವರೆಗೆ ತಲುಪಿದೆ ಎನ್ನುತ್ತಾರೆ ಕಿಮ್ಸ್‌ನ ವೈದ್ಯರು.

ಹನುಮಂತನ ಬಾಲದಂತ ಸಾಲು: ವೈದ್ಯಕೀಯ ಪರೀಕ್ಷೆಗಾಗಿ ಬರುವ ನೂರಾರು ಜನ ಸರತಿ ಸಾಲಿನಲ್ಲಿ ತಾಸುಗಟ್ಟಲೆ ನಿಂತು ಹೈರಾಣಾಗುತ್ತಿದ್ದಾರೆ. ಹೊರರೋಗಿಗಳ ವಿಭಾಗದ ಕಟ್ಟಡ ನೋಂದಣಿ ವಿಭಾಗದಲ್ಲಿ ಒಟ್ಟು ಎಂಟು ಕೌಂಟರ್‌ಗಳಿವೆ. ಇದರಲ್ಲಿ ಒಳರೋಗಿಗಳು, ಹೊರರೋಗಿಗಳು, ಅಂಗವಿಕಲರು ಹಾಗೂ ಹಿರಿಯ ನಾಗರಿಕರಿಗೆ ‌ಪ್ರತ್ಯೇಕ ಕೌಂಟರ್‌ಗಳನ್ನು ಮೀಸಲಿಡಲಾಗಿದೆ. ಆದರೆ, ಕೌಂಟರ್‌ಗಳಲ್ಲೇ ರೋಗಿಗಳ ಹೆಸರು, ಆಧಾರ್‌ ಕಾರ್ಡ್‌ ವಿವರ ಸೇರಿದಂತೆ ಎಲ್ಲ ವಿವರ ಪಡೆಯಲು ಒಬ್ಬರಿಗೆ ಕನಿಷ್ಠ 10ರಿಂದ 15 ನಿಮಿಷವಾಗುತ್ತಿದೆ. ಒಂದೊಂದು ಸಾಲಿನಲ್ಲಿ 50ರಿಂದ 80 ಜನ ಕಾಯುವಂತಾಗಿದೆ. ಚಿಕಿತ್ಸೆ ನೀಡುವ ನಿರ್ದಿಷ್ಟ ವಿಭಾಗಕ್ಕೆ ತೆರಳಿ ಚಿಕಿತ್ಸೆ ಪಡೆಯುತ್ತಾರೆ. ಆದರೆ, ಇಲ್ಲಿಯೂ ತಾಸುಗಟ್ಟಲೆ ಕಾಯುವಂತಾಗಿದೆ.

ADVERTISEMENT

ಔಷಧಿಗೂ ಕಾಯಬೇಕು: ವೈದ್ಯರು ಬರೆದುಕೊಡುವ ಔಷಧಿ ತೆಗೆದುಕೊಳ್ಳುವುದಕ್ಕೂ ಹೊರರೋಗಿಗಳು ಇಲ್ಲಿ ತಾಸುಗಟ್ಟಲೆ ಕಾಯಬೇಕಿದೆ. ಅಲ್ಲದೇ ಇಲ್ಲಿ ಜನ ಸಾಲಿನಲ್ಲಿ ನಿಲ್ಲುತ್ತಿದ್ದಾರೆಯೇ ಇಲ್ಲವೇ ಎಂದು ಮೇಲ್ವಿಚಾರಣೆ ಮಾಡುವುದಕ್ಕೂ ಯಾವುದೇ ಸಿಬ್ಬಂದಿಯನ್ನು ನೇಮಿಸಿಲ್ಲ. ಹೀಗಾಗಿ, ಯಾರಾದರು ಮಧ್ಯೆ ನುಸುಳಿ ಮಾತ್ರೆ, ಔಷಧಿ ಪಡೆಯುವುದು ಇದನ್ನು ವಿರೋಧಿಸಿ ಹೊರ ರೋಗಿಗಳು ಕಿತ್ತಾಡುವುದು ಸಾಮಾನ್ಯವಾಗಿದೆ.

ಬೇಗ ಹೇಳ್ರಿ ಸಮಯ ಇಲ್ಲ:ಕಿಮ್ಸ್‌ಗೆ ಹೊರರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಇಲ್ಲಿನ ವೈದ್ಯರನ್ನೂ ಹೈರಾಣಾಗಿಸಿದೆ. ಒಂದೊಂದು ವಿಭಾಗಕ್ಕೂ ಕನಿಷ್ಠ 200ರಿಂದ 300 ಜನ ಚಿಕಿತ್ಸೆಗೆ ಬರುತ್ತಿದ್ದಾರೆ. ಹೀಗಾಗಿ, ಇಲ್ಲಿನ ವೈದ್ಯರು ರೋಗಿಗಳ ಸಮಸ್ಯೆ ಕೇಳುವುದಕ್ಕೂ ‘ಬೇಗ ಹೇಳ್ರಿ ಸಮಯ ಇಲ್ಲ’ ಎನ್ನುವಂತಾಗಿದೆ. ಇದರಿಂದ ಗುಣಮಟ್ಟದ ಚಿಕಿತ್ಸೆಗೂ ಹಿನ್ನಡೆಯಾಗಿದೆ ಎನ್ನುವುದು ರೋಗಿಗಳ ಅಳಲು.

ವ್ಯವಸ್ಥೆ ಸುಧಾರಿಸಿದೆ: ‘ಇತ್ತೀಚಿನ ವರ್ಷಗಳಲ್ಲಿ ಕಿಮ್ಸ್‌ಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಕಿಮ್ಸ್‌ನಲ್ಲಿ ಚಿಕಿತ್ಸೆಗೆ ದಾಖಲಾಗುವವರಿಗೆ ಎಲ್ಲ ರೀತಿಯ ಸೌಲಭ್ಯ ನೀಡಲಾಗುತ್ತಿದೆ’ ಎಂದು ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ ತಿಳಿಸಿದರು.

‘ಹಾಸಿಗೆಗಳ ಸಂಖ್ಯೆಯನ್ನು 1,400ರಿಂದ 2,400 ಸಾವಿರಕ್ಕೆ ಹೆಚ್ಚಿಸಲಾಗಿದೆ. ಚಿಕಿತ್ಸೆಗೆ ಹೆಚ್ಚು ಜನ ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಈಚೆಗೆ 400 ಜನ ಸ್ಟಾಫ್‌ನರ್ಸ್‌ ಹಾಗೂ 300 ಗ್ರೂ‍ಪ್‌ ಡಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.