ADVERTISEMENT

ಧಾರವಾಡ: ವಿದ್ಯಾಗಮದಲ್ಲಿ ಮಗ್ಗಿ ಕಲಿಕೆ, ಆಟ, ಪಾಠ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2020, 14:25 IST
Last Updated 4 ಸೆಪ್ಟೆಂಬರ್ 2020, 14:25 IST
ಹುಬ್ಬಳ್ಳಿಯ ವಿಶ್ವೇಶ್ವರ ನಗರದ ಉದ್ಯಾನದಲ್ಲಿ ವಿದ್ಯಾಗಮ ತರಗತಿಯಲ್ಲಿ ಪಾಠ ಹೇಳಿಕೊಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು –ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯ ವಿಶ್ವೇಶ್ವರ ನಗರದ ಉದ್ಯಾನದಲ್ಲಿ ವಿದ್ಯಾಗಮ ತರಗತಿಯಲ್ಲಿ ಪಾಠ ಹೇಳಿಕೊಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಕೋವಿಡ್‌ ಹರಡುವಿಕೆ ತಡೆಗಟ್ಟುವ ಭಾಗವಾಗಿ ಸರ್ಕಾರ ಶಾಲೆಗಳ ಆರಂಭಕ್ಕೆ ಅನುಮತಿ ಕೊಟ್ಟಿಲ್ಲ. ಆದರೆ, ಕಲಿಕೆ ನಿರಂತರವಾಗಿರಬೇಕು ಎನ್ನುವ ಉದ್ದೇಶದಿಂದ ಆರಂಭಿಸಿರುವ ’ವಿದ್ಯಾಗಮ’ದಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ.

ರಾಜ್ಯದಾದ್ಯಂತ ನಡೆಯುತ್ತಿರುವ ಈ ಯೋಜನೆಗೆ ಹುಬ್ಬಳ್ಳಿಯಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವಿಶ್ವೇಶ್ವರ ನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 150 ಮಕ್ಕಳು ಓದುತ್ತಿದ್ದಾರೆ. ಈ ಶಾಲೆಯಲ್ಲಿ ಮುಖ್ಯ ಶಿಕ್ಷಕ ಚನ್ನಬಸಪ್ಪ ಅರಕೇರಿ, ಶಿಕ್ಷಕಿಯರಾದ ಮಂಜುಳಾ ವಿ. ಕೆರೂರು, ವೃಂದಾ ಸಿ. ಕುಲಕರ್ಣಿ, ರಾಜೇಶ್ವರಿ ಎಸ್‌. ಕಬಾಡೆ ಮತ್ತು ಎಂ.ಸಿ. ಜೋಶಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಐದೂ ಜನ ಶಿಕ್ಷಕರು ದಿನಕ್ಕೆ ಎರಡು ಅವಧಿಯಂತೆ ತಲಾ ಹತ್ತು ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ.

ಶಾಲೆಯ ಸುತ್ತಮುತ್ತಲಿರುವ ದೇವಸ್ಥಾನ, ವಠಾರ, ಉದ್ಯಾನಗಳಲ್ಲಿ ಮಕ್ಕಳಿಗೆ ಪಠ್ಯ ಮತ್ತು ಪಠ್ಯೇತರ ವಿಷಯಗಳನ್ನು ಹೇಳಿಕೊಡಲಾಗುತ್ತಿದೆ. ಮಗ್ಗಿ, ಹಾಡು, ನೃತ್ಯ ಕಲಿಸಲಾಗುತ್ತಿದೆ. ಅನೇಕ ಕಡೆ ಪೋಷಕರೇ ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ತರಗತಿ ಮುಗಿದ ಬಳಿಕ ಕರೆದುಕೊಂಡು ಹೋಗುತ್ತಿದ್ದಾರೆ.

ADVERTISEMENT

ಮುಖ್ಯ ಶಿಕ್ಷಕ ಚನ್ನಬಸಪ್ಪ ಅರಕೇರಿ ಪ್ರತಿಕ್ರಿಯಿಸಿ ‘ಕೋವಿಡ್‌ ಭೀತಿ ಬಿಟ್ಟು ಮಕ್ಕಳು ಖುಷಿಯಿಂದ ವಿದ್ಯಾಗಮ ತರಗತಿಗಳಿಗೆ ಬರುತ್ತಿದ್ದಾರೆ. ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸಲು ಮನರಂಜನೆ ಜೊತೆ ಪಠ್ಯ ಕಲಿಸಲು ಒತ್ತು ಕೊಡಲಾಗುತ್ತಿದೆ. ಶಿಕ್ಷಕರು ಹಾಗೂ ಮಕ್ಕಳು ಮಾಸ್ಕ್‌ ಧರಿಸಿ ಸುರಕ್ಷತಾ ನಿಯಮಗಳನ್ನೂ ಪಾಲಿಸಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.