ADVERTISEMENT

ಧಾರವಾಡ: ಸಡಗರದ ಮುರುಘಾಮಠ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 6:09 IST
Last Updated 27 ಜನವರಿ 2023, 6:09 IST
ಧಾರವಾಡದ ಸವದತ್ತಿ ರಸ್ತೆಯಲ್ಲಿ ನೂರಾರು ಭಕ್ತರ ಹರ್ಷೋದ್ಘಾರಗಳ ನಡುವೆ ಮುರುಘಾಮಠದ ಮುರುಘೇಂದ್ರ ಮಹಾಶಿವಯೋಗಿಗಳ 93ನೇ ರಥೋತ್ಸವವು ಗುರುವಾರ ಜರುಗಿತು
ಧಾರವಾಡದ ಸವದತ್ತಿ ರಸ್ತೆಯಲ್ಲಿ ನೂರಾರು ಭಕ್ತರ ಹರ್ಷೋದ್ಘಾರಗಳ ನಡುವೆ ಮುರುಘಾಮಠದ ಮುರುಘೇಂದ್ರ ಮಹಾಶಿವಯೋಗಿಗಳ 93ನೇ ರಥೋತ್ಸವವು ಗುರುವಾರ ಜರುಗಿತು   

ಧಾರವಾಡ: ಮುರುಘಾಮಠದ ಮುರುಘೇಂದ್ರ ಮಹಾಶಿವಯೋಗಿಗಳ 93ನೇ ರಥೋತ್ಸವವು ಗುರುವಾರ ಸಂಜೆ ನೂರಾರು ಭಕ್ತರ ಹರ್ಷೋದ್ಘಾರದ ನಡುವೆ ವಿಜೃಂಭಣೆಯಿಂದ ನೆರವೇರಿತು.

ಸಂಜೆ 4ರ ಸುಮಾರಿಗೆ ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಅವರ ನೇತೃತ್ವದಲ್ಲಿ ಹುಬ್ಬಳ್ಳಿಯ ಬೃಹನ್ ಹೊಸಮಠದ ಚಂದ್ರಶೇಖರ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಬೆಳಗಾವಿ ನಾಗನೂರ ರುದ್ರಾಕಷಿಮಠದ ಅಲ್ಲಮಪ್ರಭು ಸ್ವಾಮೀಜಿ, ಉಪ್ಪಿನಬೆಟಗೇರಿ ಗ್ರಾಮದ ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ, ಹೊಸರಿತ್ತಿ ಗುದ್ಲೀಶ್ವರಮಠದ ಗುದ್ಲೀಶ್ವರ ಸ್ವಾಮೀಜಿ, ವಿರಕ್ತಮಠದ ಮಸಬಿನಾಳದ ಸಿದ್ದರಾಮ ಸ್ವಾಮೀಜಿ ಅವರು ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.

ರಥೋತ್ಸವಕ್ಕೆ ಚಾಲನೆ ಸಿಗುತ್ತಿದ್ದಂತೆ ‘ಹರ ಹರ ಮಹಾದೇವ’ ಎಂದು ಜಯಘೋಷ ಮೊಳಗಿತು. ಜೈ ಮುರುಘೇಶ, ಜೈ ಅಥಣೇಶ, ಭಾರತದೇಶ, ಜೈ ಬಸವೇಶ, ಮುರುಘೇಂದ್ರ ಉಘೇ ಉಘೇ ಉದ್ಘೋಷಣೆಯೊಂದಿಗೆ ಭಕ್ತರ ನಡುವೆ ಸಾಗಿದ ರಥಕ್ಕೆ ಉತ್ತತ್ತಿ, ನಿಂಬೆಹಣ್ಣು, ಬಾಳೆಹಣ್ಣು ತೂರಿ, ಜನರು ಭಕ್ತಿಯ ನಮನ ಸಲ್ಲಿಸಿದರು. ಹಣ್ಣು, ಕಾಯಿ ಅರ್ಪಿಸಿ ಧನ್ಯರಾದರು.

ADVERTISEMENT

ಮಠದಿಂದ ಹೊರಟ ರಥವು ಸವದತ್ತಿ ಮುಖ್ಯ ರಸ್ತೆ ಮೂಲಕ ತೆರಳಿ ಹಾವೇರಿಪೇಟ ಡಿಪೋ ವರ್ತುಲದಿಂದ ಮಠಕ್ಕೆ ಮರಳಿತು. ಡೊಳ್ಳು ಕುಣಿತ, ಪುರವಂತರ ಕುಣಿತ, ಭಜನಾ ಮೇಳ, ಜಾಂಜ್‌ ಮೇಳದ ತಂಡಗಳು ಪಾಲ್ಗೊಂಡು ಜಾತ್ರೆಯ ಮೆರುಗು ಹೆಚ್ಚಿಸಿದವು. ನಗರ ಪ್ರದೇಶದ ಜನರೂ ಸೇರಿದಂತೆ ಸುತ್ತಲಿನ ಅಮ್ಮಿನಬಾವಿ, ಹೆಬ್ಬಳ್ಳಿ, ಶಿವಳ್ಳಿ, ಉಪ್ಪಿನ ಬೆಟಗೇರಿ, ಕರಡಿಗುಡ್ಡ ಸೇರಿದಂತೆ ಗ್ರಾಮೀಣ ಜನರೂ ಪಾಲ್ಗೊಂಡಿದ್ದರು.

ಹೊರಗೆ ಆಟಿಕೆ ಅಂಗಡಿಗಳು, ತಿಂಡಿ, ತಿನಿಸುಗಳ ಅಂಗಡಿಗಳಲ್ಲಿ ಮಾರಾಟ ಭರಾಟೆ ಜೋರಾಗಿತ್ತು. ಮಕ್ಕಳಿಗಾಗಿ ಹಾಕಲಾಗಿರುವ ಮೋಜಿನ ಆಟದ ಮೇಳದಲ್ಲಿ ಜನರು ಆಟವಾಡಿ ಸಂಭ್ರಮಿಸಿದರು.

ಜಾತ್ರಾ ಮಹೋತ್ಸವದ ಅಂಗವಾಗಿ ಸವದತ್ತಿ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.