ADVERTISEMENT

ಹಿಂದೂಗಳಿಗೆ ಕಿರುಕುಳ ಆರೋಪ, ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 15:36 IST
Last Updated 6 ಜೂನ್ 2025, 15:36 IST
ಹುಬ್ಬಳ್ಳಿಯಲ್ಲಿ ಶುಕ್ರವಾರ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಕಾರ್ಯಕರ್ತರು ಪ್ರಮೋದ್ ಮುತಾಲಿಕ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು
–ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯಲ್ಲಿ ಶುಕ್ರವಾರ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಕಾರ್ಯಕರ್ತರು ಪ್ರಮೋದ್ ಮುತಾಲಿಕ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂಗಳಿಗೆ ಹಾಗೂ ರಾಜ್ಯದಾದ್ಯಂತ ಹಿಂದೂ ಸಂಘಟನೆಗಳ ಕಾರ್ಯಕರ್ತರಿಗೆ ರಾಜ್ಯ ಸರ್ಕಾರದ ಒತ್ತಡದಿಂದ ಪೊಲೀಸರು ಕಿರುಕುಳ, ಹಿಂಸೆ ನೀಡುತ್ತಿದ್ದಾರೆ’ ಎಂದು ಆರೋಪಿಸಿ ಶುಕ್ರವಾರ ನಗರದಲ್ಲಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು.

ಶ್ರೀರಾಮ ಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸ್‌ ಕಮಿಷನರ್‌ ಎನ್‌.ಶಶಿಕುಮಾರ ಅವರಿಗೆ ಮನವಿಪತ್ರ ಸಲ್ಲಿಸಿದರು.

‘ಹಿಂದೂ ರಾಷ್ಟ್ರ ಸಮನ್ವಯ ಸಮತಿ ಹೆಸರಲ್ಲಿ 15 ಸಂಘಟನೆಗಳು ಸೇರಿ ಪ್ರತಿಭಟನೆ ನಡೆಸಿದ್ದು, ಸಂಘಟನೆಗಳೆಲ್ಲ ಒಂದಾಗಿವೆ ಎನ್ನುವುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಇದು ಹಿಂದೂಗಳ ರಾಷ್ಟ್ರವಾಗಿದೆಯೇ ಹೊರತು, ಮುಸ್ಲಿಂ ಅಥವಾ ಕ್ರೈಸ್ತರದ್ದಲ್ಲ. ವಿದೇಶಿ ಮೂಲದ ಅವರು, ನಮ್ಮ ರಾಷ್ಟ್ರಕ್ಕೆ ಬಂದು, ನಮ್ಮ ವಿರುದ್ಧ ಕೃತ್ಯ ನಡೆಸಿದರೆ ಸುಮ್ಮನಿರುವುದಿಲ್ಲ. ಮುಸ್ಲಿಮರ ಓಲೈಕೆಗಾಗಿ ಕಾಂಗ್ರೆಸ್‌ ಸರ್ಕಾರ, ಹಿಂದೂಗಳ ಮೇಲೆ ದೌರ್ಜನ್ಯ ಎಸಗುತ್ತಿದೆ. ರೌಡಿ ಪಟ್ಟಿಯಲ್ಲಿ ಹಿಂದೂಗಳ ಹೆಸರು ಸೇರಿಸಿ, ಗಡೀಪಾರು ಮಾಡಲು ಮುಂದಾಗುತ್ತಿದೆ’ ಎಂದು ಪ್ರಮೋದ್ ಮುತಾಲಿಕ್‌ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಕಾಂಗ್ರೆಸ್‌ ಆಡಳಿತದಲ್ಲಿ ಹಿಂದೂ ವಿರೋಧಿ ನೀತಿ ಹೆಚ್ಚಾಗುತ್ತಿದ್ದು, ಇದು ಹೀಗೆ ಮುಂದುವರಿದರೆ ಬ್ರಿಟೀಷರನ್ನು ಹೊಡೆದೋಡಿಸಿದಂತೆ ನಿಮ್ಮನ್ನು ಓಡಿಸಬೇಕಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ಹಿಂದೂಗಳ ಕೊಲೆಯಾಗಿದೆ. ತಾಳ್ಮೆಗೂ ಮಿತಿಯಿದೆ’ ಎಂದು ಎಚ್ಚರಿಸಿದರು.

ವಕೀಲ ಅಶೋಕ ಅಣ್ವೇಕರ, ವಿಶಾಲ ಜಾಧವ, ಯಲ್ಲಪ್ಪ ಶಿರಕೋಳ, ಮೋಹನ ಗುರುಸ್ವಾಮಿ, ಶಿವಾನಂದ ಸತ್ತಿಗೇರಿ, ವಿದಳ, ವೀಣಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.