ಹುಬ್ಬಳ್ಳಿ: ‘ಆರ್‌ಸಿಬಿ ವಿಜಯೋತ್ಸವ ಮಾಡುವುದು ಬೇಡ ಎಂದು ಪೊಲೀಸ್ ಇಲಾಖೆ ಹೇಳಿದ್ದರೂ, ರಾಜ್ಯ ಸರ್ಕಾರ ಸೊಕ್ಕಿನಿಂದ ಅದಕ್ಕೆ ಅವಕಾಶ ನೀಡಿ ಅಮಾಯಕರನ್ನು ಬಲಿ ಪಡೆದಿದೆ. ಸರ್ಕಾರವು ರಾಜ್ಯದ ಜನರ ಕ್ಷಮೆ ಕೇಳಿ, ಮೃತರ ಕುಟುಂಬಕ್ಕೆ ₹1 ಕೋಟಿ ಪರಿಹಾರ ನೀಡಬೇಕು’ ಎಂದು ಶ್ರೀರಾಮ ಸೇನಾ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ ಆಗ್ರಹಿಸಿದರು.
‘ರಾಜಕೀಯ ಲಾಭಕ್ಕಾಗಿ ವಿವೇಚನೆಯಿಲ್ಲದೆ ರಾಜ್ಯ ಸರ್ಕಾರ, ವಿಜಯೋತ್ಸವ ಸಮಾರಂಭ ನಡೆಸಿತು. ಸೂಕ್ತ ಭದ್ರತೆ ಮತ್ತು ಯೋಜನೆಯಿಲ್ಲದ ಕಾರಣ ಕಾಲ್ತುಳಿತವಾಗಿ 11 ಮಂದಿ ಮೃತಪಟ್ಟರು. ಅಚಾತುರ್ಯದ ಹೊಣೆಯನ್ನು ಸರ್ಕಾರ ತಾನು ಹೊರುವ ಬದಲು, ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಅಮಾನತು ಮಾಡಿದೆ. ತಕ್ಷಣ ಅವರ ಅಮಾನತು ಆದೇಶ ಹಿಂಪಡೆಯಬೇಕು’ ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
‘ಕ್ರಿಕೆಟ್ ಆಟಗಾರರು ಕೋಟಿ ಕೋಟಿ ಸಂಪಾದಿಸುತ್ತಾರೆ. ಐಪಿಎಲ್ ಟೂರ್ನಿ ದೇಶಕ್ಕೋಸ್ಕರ ನಡೆದದ್ದಲ್ಲ, ಅದು ಪಕ್ಕಾ ವ್ಯವಹಾರಿಕ ಟೂರ್ನಿಯಾಗಿದ್ದು, ಆಟಗಾರರು ಕೋಟಿ ಕೋಟಿ ಸಂಪಾದಿಸಿದ್ದಾರೆ. ಅಭಿಮಾನಿಗಳಿಂದಲೇ ಬೆಳೆದ ಅವರು ಹಾಗೂ ಆಯೋಜಕರು, ದುರಂತದಲ್ಲಿ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ತಲಾ ₹1 ಕೋಟಿಯನ್ನಾದರೂ ನೀಡಬೇಕು’ ಎಂದು ಅವರು ಒತ್ತಾಯಿಸಿದರು.
‘ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಸರಣಿ ಕೊಲೆಗಳು ನಡೆಯುತ್ತಿದ್ದು, ಹಿಂದೂಗಳಿಗೆ ಭಯೋತ್ಪಾದನೆಯ ಭೀತಿ ಸೃಷ್ಟಿಸಿದ್ದಾರೆ. ಪೊಲೀಸರು ರಾತ್ರಿ ವೇಳೆ ಆರ್‌ಎಸ್‌ಎಸ್ ಕಾರ್ಯಕರ್ತರ ಮಮೆ ಬಾಗಿಲು ಬಡಿದು, ಹೆದರಿಸುತ್ತಿದ್ದಾರೆ. ತಪ್ಪು ಮಾಡಿದ್ದರೆ ವಿಚಾರಣೆ ನಡೆಸಲಿ, ಪ್ರಕರಣ ದಾಖಲಿಸಲಿ. ಆದರೆ, ಅನಗತ್ಯವಾಗಿ ಹೆದರಿಸುವುದು, ಪ್ರಕರಣ ದಾಖಲಿಸುವುದು ಸರಿಯಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.