ADVERTISEMENT

ಧಾರವಾಡ: ಮನೆಯಲ್ಲೇ ನಮಾಜ್‌, ಸಂಭ್ರಮ

ಕುಟುಂಬ ಸದಸ್ಯರಿಂದ ಶುಭಾಶಯ ವಿನಿಮಯ, ಸಿಹಿ ತಿಂದು ಖುಷಿ ಪಟ್ಟರು

​ಪ್ರಜಾವಾಣಿ ವಾರ್ತೆ
Published 26 ಮೇ 2020, 0:47 IST
Last Updated 26 ಮೇ 2020, 0:47 IST
ಹಳೇ ಹುಬ್ಬಳ್ಳಿಯ ಆಸಾರ ಹೊಂಡಾದ ನಿವಾಸಿ ಜೈಲಾನಿ ಉಳ್ಳಾಗಡ್ಡಿ ಅವರು ಮನೆಯಲ್ಲಿ ಮಕ್ಕಳೊಂದಿಗೆ ಪ್ರಾರ್ಥನೆ ಸಲ್ಲಿಸಿದರು
ಹಳೇ ಹುಬ್ಬಳ್ಳಿಯ ಆಸಾರ ಹೊಂಡಾದ ನಿವಾಸಿ ಜೈಲಾನಿ ಉಳ್ಳಾಗಡ್ಡಿ ಅವರು ಮನೆಯಲ್ಲಿ ಮಕ್ಕಳೊಂದಿಗೆ ಪ್ರಾರ್ಥನೆ ಸಲ್ಲಿಸಿದರು   

ಹುಬ್ಬಳ್ಳಿ: ಮುಸ್ಲಿಮರು ಈ ಬಾರಿಯ ಈದ್‌ ಉಲ್‌ ಫಿತ್ರ್‌ ಸಂಭ್ರಮವನ್ನು ಮನೆಯಲ್ಲಿಯೇ ಸರಳವಾಗಿ ಆಚರಿಸಿದರು. ಕುಟುಂಬ ಸದಸ್ಯರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು, ಸಿಹಿ ತಿಂದು ಖುಷಿ ಪಟ್ಟರು.

ಮಸೀದಿಗಳಲ್ಲಿ ಮತ್ತು ನಗರದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವುದನ್ನು ಸರ್ಕಾರ ನಿಷೇಧಿಸಿದ್ದ ಕಾರಣ ಮುಸ್ಲಿಮರು ಮನೆಗಳಲ್ಲಿಯೇ ನಮಾಜ್‌ ಮಾಡಿದರು. ಆದ್ದರಿಂದ ಹೊರಗಡೆ ಅಷ್ಟೊಂದು ಸಂಭ್ರಮ ಕಂಡುಬರಲಿಲ್ಲ.

ಬಹಳಷ್ಟು ಕುಟುಂಬದವರು ಸುರಕ್ಷತೆಯ ಕಾರಣಕ್ಕಾಗಿ ಸಂಬಂಧಿಕರನ್ನು, ಸ್ನೇಹಿತರನ್ನು ಮನೆಗೆ ಊಟಕ್ಕೆ ಆಹ್ವಾನಿಸಿರಲಿಲ್ಲ. ಭಾವೈಕ್ಯದ ಸಂಕೇತವಾಗಿ ಈ ಹಬ್ಬದ ವೇಳೆ ಮುಸ್ಲಿಮರು ಎಲ್ಲ ಧರ್ಮಗಳ ಸ್ನೇಹಿತರನ್ನು ಮನೆಗೆ ಕರೆದು ಹಬ್ಬದ ವಿಶೇಷ ಖಾದ್ಯ ಶೀರ್‌ ಕುರ್ಮಾ ಕೊಡುತ್ತಿದ್ದರು. ಇನ್ನೂ ಕೆಲವರಿಗೆ ಮನೆಗೂ ಕಳುಹಿಸುತ್ತಿದ್ದರು.

ADVERTISEMENT

ಹಬ್ಬದ ಬಗ್ಗೆ ಪ್ರತಿಕ್ರಿಯಿಸಿದ ಮಾರುತಿ ನಗರದ ನಿವಾಸಿ ಸಂಶಾದ ಪಂತೋಜಿ ‘ಹೊಸ ಬಟ್ಟೆ ಇಲ್ಲದ ಮೊದಲ ಈದ್‌ ಉಲ್‌ ಫಿತ್ರ್‌ ಇದು. ದುಡಿಮೆಯಿಲ್ಲದೆ ಮಕ್ಕಳು ಮನೆಯಲ್ಲೇ ಇದ್ದಾರೆ. ಸರಳವಾಗಿ ಹಬ್ಬ ಮಾಡಲು ಕನಿಷ್ಠ ₹ 5 ಸಾವಿರವಾದರೂ ಬೇಕು. ಅಷ್ಟು ಹಣ ಕೂಡ ಇಲ್ಲ. ಮಾಂಸದ ದರ ದುಬಾರಿ ಆಗಿದೆ. ನೆಪಕ್ಕೆ ಮಾತ್ರ ಮನೆ ಮಂದಿಗಷ್ಟೆ ಶೀರ್‌ ಕುರ್ಮಾ ಮಾಡಿದ್ದೇವೆ. ಹಬ್ಬ ಮಾಡುವ ಖುಷಿಯೂ ಇಲ್ಲ’ ಎಂದು ಹೇಳಿದರು.

ಸೋಂಕು ಹರಡದಂತೆ ಎಚ್ಚರಿಕೆ ವಹಿಸಲು ಮನೆಯಲ್ಲೇ ಹಬ್ಬವನ್ನು ಆಚರಿಸಿ ಎಂದು ನೀಡಿದ್ದ ಕರೆಗೆ ಸಮಾಜದ ಜನ ಸ್ಪಂದಿಸಿದ್ದಾರೆ. ಅನೇಕರು ಹಬ್ಬದ ನೆಪದಲ್ಲಿ ಬಡವರಿಗೆ ನೆರವಾಗಿದ್ದಾರೆ ಎಂದು ಅಂಜುಮನ್‌ ಏ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಯೂಸೂಫ್‌ ಸವಣೂರ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲಾಡಳಿತ ಮಸೀದಿಯಲ್ಲಿ ಐದು ಜನರಿಗಷ್ಟೇ ನಮಾಜ್‌ ಮಾಡಲು ಅವಕಾಶ ಕೊಟ್ಟಿತ್ತು. ಆದ್ದರಿಂದ ಅಲ್ತಾಫ್ ನಗರದ ಮದೀನಾ ಮಸೀದಿಯಲ್ಲಿ ಮೌಲಾನಾ ಅಬ್ದುಲ್ ಹಕೀಮ್ ತಹಶೀಲ್ದಾರ ನೇತೃತ್ವದಲ್ಲಿ ಅಂಜುಮನ್‌ ಸಂಸ್ಥೆಯ ಕೆಲ ಸದಸ್ಯರಷ್ಟೇ ಪ್ರಾರ್ಥನೆ ಸಲ್ಲಿಸಿದರು.

ಬಳಿಕ ಮಾತನಾಡಿದ ಸಂಸ್ಥೆಯ ಉಪಾಧ್ಯಕ್ಷ ಅಲ್ತಾಫ್ ನವಾಜ್‌ ಎಂ. ಕಿತ್ತೂರು ‘ಕೊರೊನಾ ಸೋಂಕಿನಿಂದ ದೇಶ ಎದುರಿಸುತ್ತಿರುವ ಸಂಕಷ್ಟಗಳು ದೂರವಾಗಿ, ಜನರು ನೆಮ್ಮದಿ ಜೀವನ ನಡೆಸುವಂತಾಗಲಿ. ಎಲ್ಲರಿಗೂ ಸುಖ, ಶಾಂತಿ, ಸಮೃದ್ಧಿ ನೀಡಲಿ ದೇವರಲ್ಲಿ ಪ್ರಾರ್ಥಿಸಿದ್ದೇವೆ’ ಎಂದರು. ನಮಾಜ್‌ ವೇಳೆ ಅಲ್ಲಾಭಕ್ಷ್‌ ಸವಣೂರು, ಎ.ಎಂ.ಮಸೂತಿ, ನನ್ನೇಸಾಬ್‌ ನಲ್ಲಿಕೊಪ್ಪ ಇದ್ದರು.

ಶಿರಡಿ ನಗರದ ಮಸೀದಿಯಲ್ಲಿ ಮೌಲಾನಾ ಮೌಸೀನ್‌ ಅವರ ನೇತೃತ್ವದಲ್ಲಿ ಮಾಜಿ ಸಂಸದ ಐ.ಜಿ.ಸನದಿ ಪ್ರಾರ್ಥನೆ ಸಲ್ಲಿಸಿ, ನಾಡಿನ ಜನರಿಗೆ ಆರೋಗ್ಯ ಮತ್ತು ಸಮೃದ್ಧಿಯನ್ನು ನೀಡಲಿ ಎಂದು ಪ್ರಾರ್ಥಿಸಿದರು.

ಮೊದಲ ಬಾರಿಗೆ ನಮಾಜ್‌ ಇಲ್ಲ: ಹಬ್ಬದ ದಿನದಂದು ಪ್ರತಿ ವರ್ಷ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗುತ್ತಿತ್ತು. ಮೊದಲ ಬಾರಿಗೆ ಮೈದಾನ ಖಾಲಿ ಖಾಲಿಯಾಗಿತ್ತು. ಕಣ್ಗಾವಲಿಗಾಗಿ ಪೊಲೀಸರನ್ನು ನೇಮಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.