ADVERTISEMENT

ನಮ್ಮ ನಗರ– ಸ್ವಚ್ಛ ನಗರ ಅಭಿಯಾನ: ‘ಬ್ಲ್ಯಾಕ್‌ ಸ್ಪಾಟ್‌’ ಈಗ ಶುಚಿ ಸ್ಥಳ

ಶ್ರೀಕಾಂತ ಕಲ್ಲಮ್ಮನವರ
Published 25 ಜನವರಿ 2025, 5:40 IST
Last Updated 25 ಜನವರಿ 2025, 5:40 IST
ಹುಬ್ಬಳ್ಳಿಯ ವಿದ್ಯಾನಗರದ ವಿಘ್ನೇಶ್ವರ ಪ್ರೌಢಶಾಲೆಯ ಹಿಂಬದಿ ಸ್ಥಳ ಆಕರ್ಷಣೀಯ ಕೇಂದ್ರವಾಗಿದೆ   –ಪ್ರಜಾವಾಣಿ ಚಿತ್ರ/ ಗುರು ಹಬೀಬ
ಹುಬ್ಬಳ್ಳಿಯ ವಿದ್ಯಾನಗರದ ವಿಘ್ನೇಶ್ವರ ಪ್ರೌಢಶಾಲೆಯ ಹಿಂಬದಿ ಸ್ಥಳ ಆಕರ್ಷಣೀಯ ಕೇಂದ್ರವಾಗಿದೆ   –ಪ್ರಜಾವಾಣಿ ಚಿತ್ರ/ ಗುರು ಹಬೀಬ   

ಹುಬ್ಬಳ್ಳಿ: ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದ ಸ್ಥಳಗಳೀಗ ಸ್ವಚ್ಛವಾಗಿ ನಳನಳಿಸುತ್ತಿವೆ. ಕಸ ಎಸೆಯುತ್ತಿದ್ದ ಸ್ಥಳಗಳಲ್ಲೀಗ ‘ಹೂವು’ಗಳು ಅರಳಿವೆ.    ಹಿಂದೊಮ್ಮೆ ‘ಬ್ಲ್ಯಾಕ್‌ಸ್ಪಾಟ್‌’ಗಳಾಗಿದ್ದ ಸ್ಥಳಗಳೀಗ ಆಕರ್ಷಣೀಯ ಕೇಂದ್ರವಾಗಿ ರೂಪುಗೊಂಡಿವೆ.

ಅವಳಿ ನಗರವನ್ನು ಸ್ವಚ್ಛ– ಸುಂದರವಾಗಿಸಲು ಮಹಾನಗರ ಪಾಲಿಕೆ ಕೈಗೊಂಡಿರುವ ‘ನಮ್ಮ ನಗರ– ಸ್ವಚ್ಛ ನಗರ’ ಅಭಿಯಾನದ ಫಲಶ್ರುತಿ ಇದು.  ವಿದ್ಯಾನಗರದ ವಿಘ್ನೇಶ್ವರ ಶಾಲೆಯ ಹಿಂಬದಿ ಕಸದ ಗುಡ್ಡೆಯಾಗಿದ್ದ ಸ್ಥಳವೀಗ ಸ್ವಚ್ಛವಾಗಿ ನಳನಳಿಸುತ್ತಿದೆ. ಇದೇ ಮಾದರಿಯಲ್ಲಿ ನಗರದ 50ಕ್ಕೂ ಹೆಚ್ಚು ಬ್ಲ್ಯಾಕ್‌ಸ್ಪಾಟ್‌ಗಳನ್ನು (ಕಸ ಎಸೆಯುತ್ತಿದ್ದ ಸ್ಥಳ) ಸುಂದರವಾಗಿಸುವ ಪ್ರಯತ್ನ ಮಾಡಲಾಗಿದೆ.

ಹುಬ್ಬಳ್ಳಿ– ಧಾರವಾಡ ಅವಳಿ ನಗರವನ್ನು ಸುಂದರವಾಗಿಸಬೇಕೆಂದು ಮಹಾನಗರ ಪಾಲಿಕೆ ಹಗಲಿರುಳು ಶ್ರಮಿಸುತ್ತಿದೆ. ನಗರ ಸೌಂದರ್ಯಕ್ಕೆ ಮಾರಕವಾಗಿರುವ ಕಸ ವಿಲೇವಾರಿ ಸಮಸ್ಯೆ ಬಗೆಹರಿಸಲು ಶ್ರಮವಹಿಸುತ್ತಿದೆ. ಇದರ ಭಾಗವಾಗಿ ಮನೆಗಳಿಂದಲೇ ಕಸ ಸಂಗ್ರಹಿಸುತ್ತಿದೆ. ಇಷ್ಟಾಗಿಯೂ ಜನರು ಅಲ್ಲಲ್ಲಿ ಕಸ ಎಸೆಯುವುದು ನಿಂತಿಲ್ಲ. ಕಸ ಎಸೆಯುವ ಇಂತಹ ಸ್ಥಳಗಳನ್ನು ‘ಬ್ಲ್ಯಾಕ್ ಸ್ಪಾಟ್‌’ಗಳೆಂದು ಗುರುತಿಸಿದ ಪಾಲಿಕೆಯು, ಇವುಗಳ ಸುಧಾರಣೆಗೆ ಕ್ರಮಕೈಗೊಂಡಿದೆ.

ADVERTISEMENT

ಬ್ಲ್ಯಾಕ್‌ಸ್ಪಾಟ್‌ ಸ್ಥಳಗಳನ್ನು ಸ್ವಚ್ಛಗೊಳಿಸಿ, ಸುತ್ತಮುತ್ತಲಿನ ಗೋಡೆಗಳಿಗೆ ಸುಣ್ಣ– ಬಣ್ಣ ಬಳಿಯಲಾಗಿದೆ. ಮಕ್ಕಳು, ಹೂವು–ಗಿಡಗಳ ಸುಂದರ ಚಿತ್ರ ಬಿಡಿಸಲಾಗಿದೆ. ನಿಜವಾದ ಹೂಕುಂಡಗಳನ್ನು ಇಡಲಾಗಿದೆ. ಸುತ್ತಲೂ ನೆಟ್‌ ಹಾಕಿ ದನ–ಕರುಗಳು ಬಾರದಂತೆ ತಡೆಯಲಾಗಿದೆ. ಸ್ವಚ್ಛತೆಯ ಮಹತ್ವ ಸಾರು ಘೋಷವಾಕ್ಯಗಳನ್ನು ಬರೆಯಲಾಗಿದೆ. ಇವು ದಾರಿಹೋಕರನ್ನು ಆಕರ್ಷಿಸುತ್ತಿವೆ.

ಆಕರ್ಷಕ ಘೋಷವಾಕ್ಯ:

ಕನ್ನಡದ ವರ್ಣಮಾಲೆ ‘ಅ’ ದಿಂದ ‘ಅಂ, ಅಃ..’ವರೆಗೆ ಸ್ವಚ್ಛತೆಗೆ ಸಂಬಂಧಿಸಿದಂತೆ ಆಕರ್ಷಕ ಘೋಷವಾಕ್ಯಗಳನ್ನು ಇಲ್ಲಿ ಬರೆಯಿಸಲಾಗಿದೆ. ಅ– ಅಲ್ಲಿ ಇಲ್ಲಿ ಕಸ ಎಸೆಯಬೇಡಿ, ಆ– ಆ ಕಸ ಜೀವಿಗಳ ಆರೋಗ್ಯ ಕೆಡಿಸುತ್ತದೆ, ಇ– ಇರುವ ಕಸ ವಿಂಗಡಿಸಿ ಕಸದ ವಾಹನಕ್ಕೆ ನೀಡಿ, ಈ– ಈ ರೀತಿ ಕಸ ವಿಲೇವಾರಿಯಲ್ಲಿ ಸಹಕರಿಸಿ, ಉ– ಉತ್ತಮವಾದ ಸ್ವಚ್ಛ ಪರಿಸರ ನಮ್ಮದಾಗಲಿ, ಊ–ಊರಿನ ಸೌಂದರ್ಯ ಕಸಮುಕ್ತ ಪರಿಸರದಲ್ಲಿದೆ, ಋ– ಋಣಾತ್ಮಕ ಪರಿಣಾಮ ಬೀರುವ ಪ್ಲಾಸ್ಟಿಕ್‌ ಬಳಕೆ ಬೇಡ, ಎ–ಎಲ್ಲೆಡೆ ಸ್ವಚ್ಛತೆಯ ಅರಿವು ಮೂಡಿಸೋಣ, ಏ– ಏರುತ್ತಿರುವ ಮಾಲಿನ್ಯ ತಡೆಯಲು ಕಸ ಸುಡದಿರೋಣ, ಐ– ಐಶ್ವರ್ಯಕ್ಕಿಂತ ಮಿಗಿಲು ಸ್ವಚ್ಛತೆ ಮತ್ತು ಆರೋಗ್ಯ, ಒ– ಒಂದು ಹೆಜ್ಜೆ ಸ್ವಚ್ಛತೆಯ ಕಡೆಗೆ, ಓ: ಓದು ಬರಹದಷ್ಟೇ ಸ್ವಚ್ಛತೆಯೂ ಮುಖ್ಯ, ಔ– ಔಷಧಗಳಿಂದ ದೂರವಿರಲು ಸ್ವಚ್ಛತೆಯೇ ದಾರಿದೀಪ, ಅಂ– ಅಂಗಡಿಗಳಿಗೆ ಬಟ್ಟೆಚೀಲ ಒಯ್ಯೋಣ, ಅಃ– ಆಹಾ ಸ್ವಚ್ಛ ಸುಂದರ ಪರಿಸರ ನಿರ್ಮಿಸೋಣ.

ಅರಿವು ಮೂಡಿಸುವ ಯತ್ನ:

‘ಸ್ವಚ್ಛತೆಯ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಇಂತಹ ಪ್ರಯತ್ನ ಮಾಡಲಾಗಿದೆ. ಕಸ ಎಸೆಯುತ್ತಿದ್ದ ಸ್ಥಳಗಳನ್ನು ‘ಬ್ಲ್ಯಾಕ್‌ಸ್ಪಾಟ್‌’ ಎಂದು ಗುರುತಿಸಿ, ಅವುಗಳನ್ನು ಸುಂದರ ತಾಣವನ್ನಾಗಿ ಬದಲಾಯಿಸಲಾಗುತ್ತಿದೆ. ಸ್ಥಳೀಯ ಕಂಟ್ರಾಕ್ಟರ್‌ ಮೂಲಕ ಮಾಡಿಸಲಾಗುತ್ತಿದೆ. ಇದಕ್ಕಾಗಿ ಪಾಲಿಕೆಯಿಂದ ಯಾವುದೇ ವಿಶೇಷ ಅನುದಾನ ಖರ್ಚು ಮಾಡುತ್ತಿಲ್ಲ’ ಎಂದು ಮಹಾನಗರ ಪಾಲಿಕೆಯ ಸೂಪರಿಟೆಂಡೆಂಟ್‌ ಎಂಜಿನಿಯರ್‌ ವಿಜಯಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಅವರು ದೂರವಾಣಿ ಕರೆ ಸ್ವೀಕರಿಸಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.