ADVERTISEMENT

ಹುಬ್ಬಳ್ಳಿಯಲ್ಲಿ ರಾಷ್ಟ್ರಮಟ್ಟದ ಮಕ್ತ ಕರಾಟೆ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2021, 7:18 IST
Last Updated 27 ನವೆಂಬರ್ 2021, 7:18 IST
ಹುಬ್ಬಳ್ಳಿಯಲ್ಲಿ ನಡೆದ ರಾಷ್ಟ್ರಮಟ್ಟದ ಮುಕ್ತ ಕರಾಟೆ ಸ್ಪ‍ರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳು
ಹುಬ್ಬಳ್ಳಿಯಲ್ಲಿ ನಡೆದ ರಾಷ್ಟ್ರಮಟ್ಟದ ಮುಕ್ತ ಕರಾಟೆ ಸ್ಪ‍ರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳು   

ಹುಬ್ಬಳ್ಳಿ: ಕ್ರೀಡೆಯಲ್ಲಿ ಸೋಲು– ಗೆಲುವನ್ನು ಸಮನಾಗಿ ಸ್ವೀಕರಿಸಿ ಎಂದು ಸ್ವರ್ಣ ಗ್ರುಪ್ ಆಫ್‌ ಕಂಪನೀಸ್‌ನ ವ್ಯವಸ್ಥಾಪಕ ನಿರ್ದೇಶನ ವಿ.ಎಸ್‌.ವಿ. ಪ್ರಸಾದ್ ಹೇಳಿದರು.

ಚೈತನ್ಯ ಸ್ಪೋರ್ಟ್ಸ್‌ ಫೌಂಡೇಷನ್‌ ಆಯೋಜಿಸಿರುವ ಎರಡು ದಿನಗಳ ರಾಷ್ಟ್ರಮಟ್ಟದ ಮಕ್ತ ಕರಾಟೆ ಸ್ಪರ್ಧೆಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ಕ್ರೀಡೆಯಲ್ಲಿ ಭಾಗಹಿವುಸುವುದೇ ಮೊದಲ ಸಾಧನೆ. ಗೆದ್ದಾಗ ಬೀಗದಿರಿ, ಸೋತಾಗ ಕುಗ್ಗದಿರಿ ಎಂದು ಹೇಳಿದರು.

ಜೀವನದಲ್ಲಿ ದೊಡ್ಡ ಗುರಿ ಸಾಧಿಸುವ ಹಂಬಲ ಇರಲಿ, ಸತತ ಪರಿಶ್ರಮದ ಮೂಲಕ ಅದರ ಸಾಧನೆಗೆ ಪ್ರಯತ್ನಿಸಿ. ಸಾಮಾನ್ಯ ಕುಟುಂಬದಲ್ಲಿ ಜನಿಸಿದರೂ ಅಬ್ದುಲ್ ಕಲಾಂ, ಲಾಲ್‌ಬಹದ್ದೂರ್‌ ಶಾಸ್ತ್ರಿ ಅವರು ದೊಡ್ಡ ಸಾಧನೆ ಮಾಡಿದ್ದಾರೆ. ಅಂತಹ ಮಹಾನ್ ವ್ಯಕ್ತಿಗಳ ಸಾಧನೆ ಎಲ್ಲರಿಗೂ ಸ್ಫೂರ್ತಿಯಾಗಲಿ. ಹುಬ್ಬಳ್ಳಿಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ಆಯೋಜಿಸಿದರೆ, ಅದಕ್ಕೆ ಬೆಂಬಲ ನೀಡಲಾಗುವುದು ಎಂದು ಭರವಸೆ ನೀಡಿದರು.

ADVERTISEMENT

ಅಖಿಲ ಭಾರತ ಶಿಕ್ಷಕರ ಸಂಘಟನೆಯ ಉಪಾಧ್ಯಕ್ಷ ಬಸವರಾಜ ಗುರಿಕಾರ, ಹಿರಿಯ ಕರಾಟೆ ತರಬೇತುದಾರ ಶ್ರೀಕಾಂತ್ ಮಲ್ಲೂರ್, ಹುಬ್ಬಳ್ಳಿ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷ ವಿಶ್ವನಾಥ ಪಾಟೀಲ, ಸಂಘಟಕ ದುರ್ಗಾನಂದ ಇದ್ದರು.

‘ಗ್ರೆನೇಡ್ ಕೈಯಲ್ಲಿ ಎಸೆದೆ’

ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ನವೀನ್ ನಾಗಪ್ಪ ಅವರು ಕಾರ್ಗಿಲ್ ಹೋರಾಟದ ಕ್ಷಣಗಳನ್ನು ನೆನಪು ಮಾಡಿಕೊಂಡರು. ‘ಭಾರತದ ಭೂಪ್ರದೇಶವನ್ನು ಪಾಕಿಸ್ತಾನ ಸೈನಿಕರು ಆಕ್ರಮಿಸಿಕೊಂಡಿದ್ದಾರೆ ಎಂದು ಗೊತ್ತಾದ ತಕ್ಷಣ ಕಾರ್ಯಾಚರಣೆ ಆರಂಭವಾಯಿತು. ಆರಂಭದಲ್ಲಿ ಸತತ 60 ಗಂಟೆಗಳ ಕಾಲ ಶತ್ರುಗಳ ವಿರುದ್ಧ ಯುದ್ಧ ನಡೆಯಿತು. ಈ ಸಂದರ್ಭದಲ್ಲಿ ಪಾಕಿಸ್ತಾನದ ಸೈನಿಕರು ಎಸೆದ ಹ್ಯಾಂಡ್ ಗ್ರೆನೇಡ್‌ ಒಂದು ನನ್ನ ಪಕ್ಕದಲ್ಲೇ ಬಂದು ಬಿತ್ತು, ಕ್ಷಣಾರ್ಧದಲ್ಲೇ ಅದನ್ನು ಎತ್ತಿ ದೂರಕ್ಕೆ ಎಸೆದೆ. ಬಂಡೆಗೆ ಬಡಿದ ಗ್ರೆನೇಡ್ ಮತ್ತೆ ನನ್ನ ಸಮೀಕದಲ್ಲೇ ಬಂದು ಸ್ಫೋಟಿಸಿದ ಪರಿಣಾಮ ತೀವ್ರತರದ ಗಾಯಗಳಾದವು’ ಎಂದು ತಿಳಿಸಿದರು.

‘ಗ್ರೆನೇಡ್ ಪಕ್ಕದಲ್ಲೇ ಬಿದ್ದಾಗ ಸಾವು ಖಚಿತ ಎಂದುಕೊಂಡೆ. ಸಾವಂತೂ ಖಚಿತ, ಆದರೆ ಮುಖಕ್ಕೆ ಗಾಯವಾಗದಿರಲಿ, ನನ್ನ ತಂದೆ– ತಾಯಿ ಅಂತಿಮ ದರ್ಶನ ಪಡೆಯಲಿ ಎಂದು ಮನಸ್ಸಿನಲ್ಲೇ ದೇವರನ್ನು ಬೇಡಿಕೊಂಡೆ ಎಂದರು. ಸೇನಾನಿಯ ಸಾಹಸದ ಕಥೆ ಕೇಳಿದ ಕರಾಟೆ ಪಟುಗಳು, ಸಭಿಕರು ಎದ್ದುನಿಂತು ಚಪ್ಪಾಳೆ ಹೊಡೆದರು. ಜೈಕಾರ ಕೂಗಿದರು. ತಮ್ಮ ಕಾಲಿಗಾದ ಗಾಯವನ್ನು ಆಯೋಜಕರ ಒತ್ತಾಯದ ಮೇರೆಗೆ ನವೀನ್ ಅವರು ತೋರಿಸಿದಾಗ ಜೈಕಾರ ಮುಗಿಲುಮುಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.