ADVERTISEMENT

ರಾಷ್ಟ್ರೀಯ ಯುವಜನೋತ್ಸವ: ಭರದಿಂದ ಸಾಗಿದೆ ಅಂತಿಮ ಹಂತದ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2023, 16:29 IST
Last Updated 10 ಜನವರಿ 2023, 16:29 IST
ಧಾರವಾಡದ ಕೆಲಗೇರಿ ಕೆರೆಯಲ್ಲಿ ಜಲ ಸಾಹಸ ಕ್ರೀಡೆಗಳಿಗೆ ಮೋಟಾರು ಬೋಟುಗಳನ್ನು ಸಿದ್ಧಗೊಳಿಸುತ್ತಿರುವ ಸಿಬ್ಬಂದಿ
ಧಾರವಾಡದ ಕೆಲಗೇರಿ ಕೆರೆಯಲ್ಲಿ ಜಲ ಸಾಹಸ ಕ್ರೀಡೆಗಳಿಗೆ ಮೋಟಾರು ಬೋಟುಗಳನ್ನು ಸಿದ್ಧಗೊಳಿಸುತ್ತಿರುವ ಸಿಬ್ಬಂದಿ   

ಧಾರವಾಡ: ವಿದ್ಯಾಕಾಶಿಯಲ್ಲಿ ಇದೇ ಮೊದಲ ಬಾರಿಗೆ ಯುವ ಜನೋತ್ಸವ ನಡೆಯುತ್ತಿರುವ ಹಿನ್ನೆಲೆ ನಗರವನ್ನು ಸುಂದರಗೊಳಿಸುವ ಕಾರ್ಯ ಭರದಿಂದ ಸಾಗಿದೆ.

ಸರ್ಕಾರಿ ಕಚೇರಿಗಳು, ಐತಿಹಾಸಿಕ ಕಟ್ಟಡಗಳು ಸೇರಿದಂತೆ ನಗರದ ಎಲ್ಲ ರಸ್ತೆಗಳು ವಿದ್ಯುತ್ ದೀಪಾಂಲಕಾರದಿಂದ ಕಂಗೊಳಿಸುತ್ತಿದ್ದು, ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ.

ಹದಿನೈದು ದಿನಗಳಿಂದ ಸಿದ್ಧತೆಯಲ್ಲಿ ತೊಡಗಿದ್ದ ಜಿಲ್ಲಾಡಳಿತವು, ಬಹುತೇಕ ಪ್ರಮುಖ ಮತ್ತು ಒಳ ರಸ್ತೆಗಳನ್ನು ದುರಸ್ತಿಗೊಳಿಸಿದೆ. ಅಲ್ಲದೆ ಕರ್ನಾಟಕ ಕಾಲೇಜು, ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಕೃಷಿ ವಿಶ್ವವಿದ್ಯಾಲಯದ ಆವರಣಗಳನ್ನು ಸ್ವಚ್ಛಗೊಳಿಸಿ, ಅಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಇದೀಗ ನಗರಕ್ಕೆ ಬರುವ ಅತಿಥಿಗಳ ಸ್ವಾಗತಕ್ಕೆ ಸಜ್ಜಾಗಿದ್ದು, ಮಿನಿ ವಿಧಾನಸೌಧದ ಆವರಣದಲ್ಲಿ ಸಾರಿಗೆ ವ್ಯವಸ್ಥೆಯ ನಿಯಂತ್ರಣ ಕೊಠಡಿ ತೆರೆಯಲಾಗಿದೆ.

ADVERTISEMENT

ಕರ್ನಾಟಕ ಕಲಾ ಕಾಲೇಜು ಆವರಣದ ಸೃಜನಾ ರಂಗಮಂದಿರ ಪಕ್ಕದ ಖಾಲಿ ಸ್ಥಳದಲ್ಲಿ ವೈಮಾನಿಕ ತರಬೇತಿಗೆ ಸಣ್ಣ ಪ್ರಮಾಣದ ವಿಮಾನ ನಿಲ್ದಾಣ ಮತ್ತು ಶಿಲಾರೋಹಣ ತರಬೇತಿಗೆ 32 ಅಡಿ ಉದ್ದದ ಕೃತಕ ಗೋಡೆ ನಿರ್ಮಿಸಲಾಗಿದೆ. ಯುವಜನೋತ್ಸವದ 5 ದಿನಗಳ ಅವಧಿಯಲ್ಲಿ ವೈಮಾನಿಕ, ಶಿಲಾರೋಹಣ ಮತ್ತು ಸ್ಕೂಬಾಡೈವಿಂಗ್ ತರಬೇತಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಸಾಹಸ ಕ್ರೀಡೆಗಳಲ್ಲಿ ಹೆಸರಾದ ಮೌಂಟೆನ್ ಬೈಕ್ ರೈಡಿಂಗ್ ಕ್ರೀಡೆಯನ್ನು ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಂಭಾಗದಲ್ಲಿನ ಸಪ್ತ ಗುಡ್ಡಗಳ ಪ್ರದೇಶ, ನಗರದ ಕೆಲಗೇರಿ ಕೆರೆಯಲ್ಲಿ ಜಲ ಸಾಹಸ ಕ್ರೀಡೆಗಳಿಗೆ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಸಿದ್ಧತೆ ಮಾಡಿಕೊಂಡಿದೆ.

ಜಿಲ್ಲೆಗೆ ಬರುವ 7,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಗಣ್ಯರನ್ನು ವಿಶೇಷವಾಗಿ ಸ್ವಾಗತಿಸಲಾಗುತ್ತಿದೆ. ಅತಿಥಿಗಳು ಜಿಲ್ಲೆಗೆ ಬರುತ್ತಿದ್ದಂತೆ ಅವರಿಗೆ ಆರತಿ ಎತ್ತಿ ಸ್ವಾಗತಿಸಿ, ಯುವ ಜನೋತ್ಸವದ ಕಿಟ್ ನೀಡಲಾಗುತ್ತಿದೆ. ಅಲ್ಲದೇ ವಸತಿಗಾಗಿ ಕೃವಿವಿ ಹಾಗೂ ಕವಿವಿ ವಸತಿ ನಿಲಯಗಳಲ್ಲಿ ಸೌಲಭ್ಯ ಕಲ್ಪಸಿದೆ. ಅವರನ್ನು ಕರೆತರಲು ಸಾರಿಗೆ ವ್ಯವಸ್ಥೆ ಹಾಗೂ ಉತ್ತರ ಕರ್ನಾಟಕ ಊಟದ ವ್ಯವಸ್ಥೆ ಕೂಡ ಮಾಡಲಾಗಿದೆ. ಹೀಗೆ ಆರೋಗ್ಯದ ಜೊತೆಗೆ ಅತಿಥಿಗಳಿಗೆ ಮನೆ ವಾತಾವರಣ ನಿರ್ಮಾಣ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.