ನವಲಗುಂದ: ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆಯಲ್ಲಿ ಒಂದು ಕುಟುಂಬಕ್ಕೆ ಹೆಸ್ಕಾಂನವರು ಅಳವಡಿಸಿರುವ ಯುಎಚ್‍ಐಡಿ ನಂಬರಿನಂತೆ ಸಮೀಕ್ಷೆ ನಡೆಸಿದಾಗಲೂ ಒಂದೇ ಯುಎಚ್‍ಐಡಿ ನಂಬರಿನಲ್ಲಿ ಮೂರಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಆದರೆ, ಹಲವೆಡೆ ಸಮೀಕ್ಷೆದಾರರು ಒಂದೇ ಯುಎಚ್‍ಐಡಿ ನಂಬರಿನಡಿ ಸಮೀಕ್ಷೆ ನಡೆಸಿ ಉಳಿದೆರಡು ಕುಟುಂಬಗಳನ್ನು ಕೈಬಿಟ್ಟ ಘಟನೆಗಳು ತಾಲ್ಲೂಕಿನಲ್ಲಿ ನಡೆಯುತ್ತಿವೆ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ.
ತಾಲ್ಲೂಕಿನಲ್ಲಿ ನಡೆಯುತ್ತಿರುವ ಸಮೀಕ್ಷೆ ಸಂದರ್ಭದಲ್ಲಿ ಮನೆಗಳನ್ನು ಗುರುತಿಸಲು ಹೆಸ್ಕಾಂ ವತಿಯಿಂದ ಮನೆ, ಮನೆಗೆ ಯುಎಚ್‍ಐಡಿ ಸ್ಟಿಕರ್‌ಗಳನ್ನು ಅಂಟಿಸಲಾಗಿದ್ದು, ಅದರನ್ವಯ ಸಮೀಕ್ಷೆದಾರರು ಮಾಹಿತಿ ಸಂಗ್ರಹಿಸುತ್ತಿದ್ದರೆ. ಯುಎಚ್‌ಐಡಿ ಇಲ್ಲದ ಕುಟುಂಬಗಳನ್ನು ‘ನೊ ಯುಎಚ್‌ಐಡಿ’ ಎಂದು ಗುರುತಿಸಿ ಸಮೀಕ್ಷೆ ಮಾಡಲಾಗುತ್ತಿದೆ.
‘ಸರ್ಕಾರ ಇದುವರೆಗೆ 26,400 ಕುಟುಂಬಗಳನ್ನು ಗುರುತಿಸಿ ಸಮೀಕ್ಷೆ ಮಾಡಲು ಸೂಚನೆ ನೀಡಿದೆ. ಸಮೀಕ್ಷೆದಾರರು ಈಗಾಗಲೇ ಯುಎಚ್‍ಐಡಿ ಇಲ್ಲದ ಕುಟುಬಂಗಳನ್ನು ಸೇರಿಸಿ ಒಟ್ಟು 28,519 ಕುಟುಂಬಗಳ ಸಮೀಕ್ಷೆ ಪೂರೈಸಲಾಗಿದೆ ಇನ್ನೂ ಶೇ 10ರಷ್ಟು ಸಮೀಕ್ಷೆ ಬಾಕಿ ಇವೆ‘ ಎಂದು ತಹಶೀಲ್ದಾರ್ ಕಚೇರಿಯ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.
ಪಡಿತರ ಚೀಟಿ ಅಂಕಿ, ಸಂಖ್ಯೆಗಳನ್ವಯ ತಾಲೂಕಿನಾದ್ಯಂತ ಎಪಿಎಲ್, ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿ ಹೊಂದಿರುವ 31,274 ಕುಟುಂಬಗಳಿದ್ದು ಇದರ ಅಂದಾಜಿನಂತೆ ಸಮೀಕ್ಷೆ ನಡಸಿದಲ್ಲಿ ಇನ್ನೂ ಮೂರು ಸಾವಿರಕ್ಕೂ ಹೆಚ್ಚು ಕುಟುಂಬಗಳು ಸಮೀಕ್ಷೆಗೆ ಒಳಪಡಬೇಕಾಗಿದೆ.
ಪಡಿತರ ಚೀಟಿ ಹೊಂದಿರದ ಹಾಗೂ ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರ ಸಂಖ್ಯೆಗಳನ್ನು ಸಮೀಕ್ಷೆ ಸಂದರ್ಭದಲ್ಲಿ ಹೇಗೆ ಗುರುತಿಸುತ್ತಾರೆ ಎಂಬುದು ಪಡಿತರ ಚೀಟಿ ಹೊಂದಿರದ ನಾಗರಿಕರ ಅಳಲಾಗಿದೆ.
’ಯುಎಚ್‍ಐಡಿ ನಂಬರ್‌ನಡಿ ಒಂದೇ ಕುಟುಂಬದಲ್ಲಿ ಮೂರು ಕುಟುಂಬಗಳಿದ್ದರೂ ಕೇವಲ ಒಂದೇ ಕುಟುಂಬವನ್ನು ಮಾತ್ರ ಗಣತಿದಾರರು ಕೆಲವೆಡೆ ಗಣತಿ ಮಾಡುತ್ತಿದ್ದಾರೆ. ಇನ್ನುಳಿದ ಕುಟುಂಬಗಳ ಗಣತಿಗೆ ಮತ್ತೆ ಬರುತ್ತೇವೆ ಎಂದು ಸಮೀಕ್ಷೆದಾರರು ಹೇಳುತ್ತಾರೆ. ಇನ್ನೂ ಬಂದಿಲ್ಲ. ಹಿಂದುಳಿದ ವರ್ಗಗಳ ಕುಟುಂಬಗಳೇ ಹೆಚ್ಚಾಗಿ ಸಮೀಕ್ಷೆಯಿಂದ ಹೊರಗುಳಿಯುವ ಆತಂಕದಲ್ಲಿವೆ’ ಎಂದು ಹೇಳಲಾಗುತ್ತಿದೆ.
‘ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆ ಗೊಂದಲಮಯವಾಗಿದ್ದು, ಪೂರ್ವ ತಯಾರಿಯಿಲ್ಲದೇ ಸಮೀಕ್ಷೆ ಕಾರ್ಯ ಮಾಡಲಾಗುತ್ತಿದೆ’ ಎಂದು ಬಿಜೆಪಿ ಮುಖಂಡ ದೇವರಾಜ ದಾಡಿಭಾವಿ ದೂರುತ್ತಾರೆ.
ಒಂದೇ ಯುಎಚ್‍ಐಡಿ ನಂಬರಿನಲ್ಲಿರುವ ಎಲ್ಲ ಕುಟುಂಬಗಳನ್ನು ಸಮೀಕ್ಷೆಗೆ ಪರಿಗಣಿಸಲಾಗುವುದು. ಒಂದು ವೇಳೆ ಬಿಟ್ಟು ಹೋದಲ್ಲಿ ಮತ್ತೆ ಸಮೀಕ್ಷೆ ಮಾಡುವಂತೆ ಸೂಚಿಸಲಾಗಿದೆಸುಧೀರ ಸಾಹುಕಾರ ತಹಶೀಲ್ದಾರ್ ನವಲಗುಂದ
ನಾನು ಬಾಡಿಗೆ ಮನೆಯಲ್ಲಿದ್ದು ನಮ್ಮ ಮನೆಗೆ ಇದುವರೆಗೂ ಸಮೀಕ್ಷೆದಾರರು ಬಂದಿಲ್ಲ. ನಾವು ಕೂಲಿ ಕೆಲಸಕ್ಕೆ ಹೋಗುವುದು ಬಿಟ್ಟು ಸಮೀಕ್ಷೆದಾರರು ಕಾಯುತ್ತಿದ್ದೇವೆ.ಜಲೀಲ ಕೊಪ್ಪಳ ಕಾರ್ಮಿಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.