ಹುಬ್ಬಳ್ಳಿ: ನಗರದ ದುರ್ಗಾದೇವಿ ದೇವಸ್ಥಾನ ಸೇರಿ ವಿವಿಧ ದೇಗುಲಗಳು, ಮನೆಗಳಲ್ಲಿ ಘಟ ಸ್ಥಾಪನೆ ಮಾಡಿ ನವರಾತ್ರಿ ಉತ್ಸವಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಕಲ್ಯಾಣನಗರದ ವಿವೇಕಾನಂದ ರಾಮಕೃಷ್ಣ ಆಶ್ರಮದಲ್ಲಿ ಬೃಹತ್ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪಿಸಿ ಮೊದಲ ದಿನದ ಪೂಜೆ ನೆರವೇರಿಸಲಾಯಿತು.
ದಾಜೀಬಾನ ಪೇಟೆಯ ತುಳಜಾಭವಾನಿ, ದುರ್ಗಾದೇವಿ ದೇವಸ್ಥಾನ, ದೇಶಪಾಂಡೆ ನಗರದ ಕಾಮಾಕ್ಷಿ ದೇವಸ್ಥಾನ ಸೇರಿದಂತೆ ಬಹುತೇಕ ಗುಡಿಗಳಲ್ಲಿ ದೇವಿ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.
ಬೆಳಿಗ್ಗೆಯಿಂದ ಸಂಜೆವರೆಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ದೇವಿ ಪುರಾಣ, ಸ್ತೋತ್ರ, ಅಭಿಷೇಕ ಹಾಗೂ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರು ದೇವಿಯ ದರ್ಶನ ಪಡೆದು, ಪೂಜೆ ಸಲ್ಲಿಸಿದರು.
ಕಲ್ಯಾಣನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಶರನ್ನವರಾತ್ರಿ ಉತ್ಸವ ಉದ್ಘಾಟಿಸಿ ಮಾತನಾಡಿದ ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಕಳೆದ 18 ವರ್ಷಗಳಿಂದ ದೇವಿಯ ಆರಾಧನೆ ಮಾಡುತ್ತಾ ಬರಲಾಗುತ್ತಿದೆ. ಹಿಂದಿನ ಸ್ವಾಮೀಜಿಯ ಪರಂಪರೆಯನ್ನು ಮುಂದುವರಿಸುತ್ತಿರುವುದು ಉತ್ತಮಕಾರ್ಯ ಎಂದರು.
‘ದೇವರನ್ನು ನಂಬದವರು ಯಾರೂ ಇಲ್ಲ. ಧರ್ಮದಿಂದಲೇ ಎಲ್ಲೆಡೆ ಶಾಂತಿ ನೆಲೆಸಿದೆ’ ಎಂದು ಹೇಳಿದರು.
ಆಶ್ರಮದ ಅಧ್ಯಕ್ಷ ಸ್ವಾಮಿ ತೇಜಸಾನಂದ ಮಹಾರಾಜರು, ಉದ್ಯಮಿ ಸಂತೋಷ ಶೆಟ್ಟಿ ಮಾತನಾಡಿದರು. ಸ್ವಾಮಿ ಗೀರಿವಾನಂದ ಮಹರಾಜರು, ಮಹಾನಗರ ಪಾಲಿಕೆ ಸದಸ್ಯ ಉಮೇಶಗೌಡ ಕೌಜಗೇರಿ, ಸಂಭಾಜಿ ಕಲಾಲ, ದಯಾನಂದ ರಾವ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.