ADVERTISEMENT

ನವಲಗುಂದ: ಕಾರ್ತಿಕ ದೀಪೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2023, 15:49 IST
Last Updated 22 ಡಿಸೆಂಬರ್ 2023, 15:49 IST
ಧಾರವಾಡದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿದರು
ಧಾರವಾಡದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿದರು   

ನವಲಗುಂದ: ‘ಕಾರ್ತಿಕ ಮಾಸವು ಅತ್ಯಂತ ಪವಿತ್ರ ಮಾಸ, ಇಂತಹ ಮಾಸದಲ್ಲಿ ದೀಪ ಬೆಳಗಿಸುವ ಮೂಲಕ ಬಾಳಿನ ಕತ್ತಲನ್ನು ಕಳೆಯಬೇಕು‘ ಎಂದು ಶಲವಡಿಯ ಗುರುಶಾಂತೇಶ್ವರ ಸ್ವಾಮೀಜಿ ಹೇಳಿದರು. 

ಶಲವಡಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ನಿಮಿತ್ತ ಹಮ್ಮಿಕೊಂಡಿದ್ದ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 

ಶಾಸಕ ಎನ್.ಎಚ್. ಕೋನರಡ್ಡಿ, ಧಾರ್ಮಿಕ ಕಾರ್ಯಕ್ರಮ ಆಚರಣೆಯಿಂದ ಮನಸ್ಸಿಗೆ ನೆಮ್ಮದಿ ಲಭಿಸುತ್ತಿದೆ ಎಂದರು.

ADVERTISEMENT

ಅಡ್ನೂರ ಗ್ರಾಮದ ಪಂಚಾಕ್ಷರಿ ಶಿವಾಚಾರ್ಯರು ಮಾತನಾಡಿ, ‘ನಾನು ನಮ್ಮವರು ಅನ್ನದೆ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು‘ ಎಂದರು.

ಮಹಿಳೆಯರು, ಮಕ್ಕಳು ದೀಪ ಬೆಳಗಿಸಿದರು. ಪ್ರಮುಖರಿಗೆ ಸನ್ಮಾನ ನಡೆಯಿತು. ಇದೇ ವೇಳೆ ಸಂಗೀತ ಕಾರ್ಯಕ್ರಮ ನಡೆಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಸುತ್ತಮುತ್ತಲಿನ ಗ್ರಾಮಗಳ ಗುರು-ಹಿರಿಯರು ಹಾಗೂ ಶಲವಡಿ ಗ್ರಾಮದ ಮಹಿಳೆಯರು ಪಾಲ್ಗೊಂಡಿದ್ದರು.

‘ಕೋವಿಡ್: ಜಾಗೃತಿ ಮೂಡಿಸಿ’

ಧಾರವಾಡ: ‘ಕೋವಿಡ್ ಹೊಸ ರೂಪಾಂತರಿ ತಳಿ (ಜೆಎನ್‌.1) ಬಗ್ಗೆ ಭಯ ಬೇಡ. ಜನರಲ್ಲಿ ಕೋವಿಡ್ ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕೋವಿಡ್ ಮುನ್ನೆಚ್ಚರಿಕೆ ನಿಟ್ಟಿನಲ್ಲಿ ಸಿದ್ಧತೆ ಕುರಿತು ಆರೋಗ್ಯ ಇಲಾಖೆ ಮಹಾನಗರ ಪಾಲಿಕೆ ಪೊಲೀಸ್ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಕೋವಿಡ್ ಪರೀಕ್ಷೆ ನಿರ್ವಹಣೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಔಷಧಿ ದಾಸ್ತಾನು ಇಟ್ಟುಕೊಳ್ಳಬೇಕು ಮುಂಜಾಗ್ರತೆ ವಹಿಸಬೇಕು ಎಂದರು.

ಜೆಎನ್‌.1 ತಳಿಗೆ ಸಂಬಂಧಿಸಿದಂತೆ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು. ಆರೋಗ್ಯ ಇಲಾಖೆಯೊಂದಿಗೆ ಇತರ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು. ಜಿಲ್ಲಾ ಆರೋಗ್ಯಾಧಿಕಾರಿ ಶಶಿಪಾಟೀಲ ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆ ಮತ್ತು ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪ ಗಾಬಿ ಕಿಮ್ಸ್‌ ವೈದ್ಯಕೀಯ ಅಧೀಕ್ಷಕ ಡಾ. ಸಿ. ಅರುಣಕುಮಾರ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ರೇಖಾ ಡೊಳ್ಳಿನ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.