ADVERTISEMENT

ನೇಹಾ ಕೊಲೆ ಪ್ರಕರಣ | ಫಯಾಜ್‌ ಸಿಐಡಿ ವಶಕ್ಕೆ; ತನಿಖೆ ಚುರುಕು

ಕುಟುಂಬದವರಿಗೆ ಸಾಂತ್ವನ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2024, 22:51 IST
Last Updated 24 ಏಪ್ರಿಲ್ 2024, 22:51 IST
ಹುಬ್ಬಳ್ಳಿ ಬಿವಿಬಿ ಕಾಲೇಜಿನ ಆವರಣಕ್ಕೆ ಸಿಐಡಿ ಅಧಿಕಾರಿಗಳು ಬುಧವಾರ ನೇಹಾ ಕೊಲೆ ಆರೋಪಿ ಫಯಾಜ್‌ನನ್ನು ಕರೆದೊಯ್ದು ಸ್ಥಳ ಮಹಜರು ಮಾಡಿದರು
ಹುಬ್ಬಳ್ಳಿ ಬಿವಿಬಿ ಕಾಲೇಜಿನ ಆವರಣಕ್ಕೆ ಸಿಐಡಿ ಅಧಿಕಾರಿಗಳು ಬುಧವಾರ ನೇಹಾ ಕೊಲೆ ಆರೋಪಿ ಫಯಾಜ್‌ನನ್ನು ಕರೆದೊಯ್ದು ಸ್ಥಳ ಮಹಜರು ಮಾಡಿದರು   

ಹುಬ್ಬಳ್ಳಿ: ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣದ ಆರೋಪಿ ಫಯಾಜ್‌ನನ್ನು ಬುಧವಾರ ಮಧ್ಯಾಹ್ನ ನಗರದ ಬಿವಿಬಿ ಕಾಲೇಜು ಆವರಣಕ್ಕೆ ಕರೆತಂದ ಸಿಐಡಿ ಎಸ್ಪಿ ವೆಂಕಟೇಶ್‌ ಅವರ ನೇತೃತ್ವದ ಅಧಿಕಾರಿಗಳ ತಂಡ, ಸ್ಥಳ ಮಹಜರು ಮಾಡಿತು. ಸುಮಾರು ಮೂರೂವರೆ ಗಂಟೆ ವಿಚಾರಣೆ ನಡೆಸಿತು.

ಧಾರವಾಡದ ಕೇಂದ್ರ ಕಾರಾಗೃಹದಲ್ಲಿ 14 ದಿನ ನ್ಯಾಯಾಂಗ ಬಂಧನದಲ್ಲಿದ್ದ ಫಯಾಜ್‌ನನ್ನು, ಹುಬ್ಬಳ್ಳಿಯ 1ನೇ ಸೆಷನ್ಸ್ ಕೋರ್ಟ್‌ನ ಅನುಮತಿ ಮೇರೆಗೆ ಹೆಚ್ಚಿನ ವಿವಾರಣೆಗೆಂದು ಸಿಐಡಿ ಅಧಿಕಾರಿಗಳು 6 ದಿನ ತಮ್ಮ ವಶಕ್ಕೆ ಪಡೆದರು.

ಫಯಾಜ್‌ನನ್ನು ಕರೆತಂದ ಸಿಐಡಿ ಅಧಿಕಾರಿಗಳು ಆರಂಭದಲ್ಲಿ ಕಾಲೇಜಿನ ಎಂಸಿಎ ವಿಭಾಗದ ಮುಖ್ಯಸ್ಥರ ಕಚೇರಿಯಲ್ಲಿ ಕೂರಿಸಿಕೊಂಡು ಕೊಲೆ ಕುರಿತು ಮಾಹಿತಿ ಸಂಗ್ರಹಿಸಿದರು. ನಂತರ, ಕೊಲೆ ನಡೆದ ದಿನ ಆತ ತಂದಿದ್ದ ದ್ವಿಚಕ್ರ ವಾಹನ ಹಾಗೂ ಆವರಣದಲ್ಲಿ ಓಡಾಡಿದ ಸ್ಥಳ, ಭೇಟಿಯಾದ ಜನರ ಬಗ್ಗೆ ಮಾಹಿತಿ ಪಡೆದು, ಹೇಳಿಕೆಗಳನ್ನು ಚಿತ್ರೀಕರಿಸಿಕೊಂಡರು. ಕಾಲೇಜಿನಲ್ಲಿನ ಭದ್ರತಾ ವ್ಯವಸ್ಥೆ ಮತ್ತು ಇನ್ನಿತರ ವಿಷಯಗಳ ಬಗ್ಗೆಯೂ ಮಾಹಿತಿ ಪಡೆದರು.

ADVERTISEMENT

‘ಕೊಲೆ ಮಾಡಿದ ತಕ್ಷಣ ಕಾಲೇಜಿನ ಮುಖ್ಯದ್ವಾರದಿಂದ ಹೋಗದೆ, ಹಿಂಭಾಗದ ದ್ವಾರದಿಂದ ಯಾಕೆ ಪರಾರಿಯಾಗುತ್ತಿದ್ದೆ’ ಎಂದು ಸಿಐಡಿ ಅಧಿಕಾರಿಗಳು ಕೇಳಿದ ಪ್ರಶ್ನೆಗೆ, ‘ಮುಂಭಾಗದ ದ್ವಾರದ ಬಳಿ ಭದ್ರತಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದ ಕಾರಣ ಹೆದರಿಕೊಂಡು ಹಿಂಭಾಗದ ದ್ವಾರದಿಂದ ಪರಾರಿಯಾಗಲು ಯತ್ನಿಸಿದೆ’ ಎಂದು ಫಯಾಜ್ ತಿಳಿಸಿರುವುದಾಗಿ ಪೊಲೀಸ್ ಮೂಲಗಳು ಹೇಳಿವೆ.

ಎಬಿವಿಪಿ ಪ್ರತಿಭಟನೆ: ಫಯಾಜ್‌ಗೆ ಕಾಲೇಜು ಆವರಣಕ್ಕೆ ಕರೆತರುವಾಗ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಘಟನೆ (ಎಬಿವಿಪಿ) ಕಾರ್ಯಕರ್ತರು, ಅವನಿದ್ದ ವಾಹನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಪೊಲೀಸರು ಅವರನ್ನು ತಡೆದಾಗ, ಪರಸ್ಪರ ವಾಗ್ವಾದ ನಡೆಯಿತು.

‘ನಮ್ಮ ಕಾಲೇಜಿನ ಆವರಣದಲ್ಲಿ ಕೊಲೆ ನಡೆದಿದೆ. ಆರೋಪಿಗೆ ಗಲ್ಲುಶಿಕ್ಷೆಯಾಗಬೇಕು. ಪ್ರಕರಣದ ತನಿಖೆ ಸಿಬಿಐಗೆ ಒಪ್ಪಿಸಬೇಕು. ಇಲ್ಲದಿದ್ದರೆ, ಅವನನ್ನು ನಮ್ಮ ಕೈಗೆ ಒಪ್ಪಿಸಿ’ ಎಂದು ಕಾರ್ಯಕರ್ತರು ಆಗ್ರಹಿಸಿದರು.

ಹುಬ್ಬಳ್ಳಿ ಬಿವಿಬಿ ಕಾಲೇಜಿನಲ್ಲಿ ಸಿಐಡಿ ಅಧಿಕಾರಿಗಳು ಬುಧವಾರ ಆರೋಪಿ ಫಯಾಜ್‌ನ ಕರೆದೊಯ್ದು ಸ್ಥಳ ಮಹಜರು ಮಾಡುವಾಗ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದಾಗ ಪೊಲೀಸರ ಮಧ್ಯೆ ವಾಗ್ವಾದ ಉಂಟಾಯಿತು

‘4 ದಿನ ಮೊದಲೇ ಚಾಕು ಖರೀದಿಸಿದ್ದ’

‘ನೇಹಾಗೆ ಕೊಲೆ ಮಾಡಲು ಆರೋಪಿ ಫಯಾಜ್‌ ಧಾರವಾಡದಲ್ಲಿ ಏಪ್ರಿಲ್‌ 14ರಂದೇ ಚಾಕು ಖರೀದಿಸಿದ್ದ. ನೇಹಾ ಜೊತೆ ಮಾತನಾಡದೇ ಸಂವಹನ ಸಂಪರ್ಕ ಕಡಿತಗೊಂಡಿದ್ದರಿಂದ ಆತ ಹತಾಶನಾಗಿದ್ದ. ಆಕೆಯ ವಿರುದ್ಧ ದ್ವೇಷ ಸಾಧಿಸುತ್ತಿದ್ದ. ಏಪ್ರಿಲ್ 18ರಂದು ದ್ವಿಚಕ್ರ ವಾಹನದಲ್ಲಿ ಕಾಲೇಜಿಗೆ ಬಂದು ಕೃತ್ಯವೆಸಗಿದ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಸಿಐಡಿ ತನಿಖೆಗೆ ಹಸ್ತಾಂತರಿಸುವ ಮುನ್ನವೇ ಸ್ಥಳೀಯ ಪೊಲೀಸರು ಪ್ರಕರಣದ ತನಿಖೆ ಶೇ 60ರಷ್ಟು ಪೂರ್ಣಗೊಳಿಸಿದ್ದರು. ತನಿಖೆ ವೇಳೆ ಸಿಐಡಿ ಅಧಿಕಾರಿಗಳು ಇನ್ನಷ್ಟು ಮಾಹಿತಿ ಸಂಗ್ರಹಿಸಿದರು.   

‘ಸಿಐಡಿ ತನಿಖೆಯಿಂದ ನ್ಯಾಯ’

‘ನೇಹಾ ಕೊಲೆಯ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ಸಿಐಡಿ ತನಿಖೆಯಿಂದ ಅವಳ ಸಾವಿಗೆ ನ್ಯಾಯ ಸಿಗಲಿದೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪಸಿಂಗ್ ಸುರ್ಜೇವಾಲಾ ವಿಶ್ವಾಸ ವ್ಯಕ್ತಪಡಿಸಿದರು. ನೇಹಾ ಮನೆಗೆ ಬುಧವಾರ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ರಾಜಕಾರಣವನ್ನು ಈ ಮನೆಯನ್ನು ದೂರವಿಟ್ಟು ಮಾಡಿ. ಸಾವಿನ ಮನೆಯಲ್ಲಿ ರಾಜಕೀಯ ಬೇಡ’ ಎಂದರು. ‘ನೇಹಾ ನಿರಂಜನಯ್ಯ ಅವರ ಪುತ್ರಿಯಷ್ಟೇ ಅಲ್ಲ. ಅವಳು ಕನ್ನಡ ನಾಡಿನ ಮಗಳು. ನಮ್ಮ ಕುಟುಂಬದ ಸದಸ್ಯಳಿದ್ದಂತೆ. ನಾವೆಲ್ಲ ಅವರ ಜೊತೆಗೆ ಇದ್ದೇವೆ. ಆರೋಪಿಗೆ ಗಲ್ಲು ಶಿಕ್ಷೆ ಆಗಬೇಕು ಎಂಬುದು ನಮ್ಮ ಆಗ್ರಹ. ಈಗಾಗಲೇ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗಿದೆ. 90 ದಿನಗಳಲ್ಲಿ ನ್ಯಾಯ ಸಿಗುವ ಭರವಸೆಯಿದೆ’ ಎಂದರು.

ಹುಬ್ಬಳ್ಳಿಯಲ್ಲಿ ಬುಧವಾರ ನೇಹಾ ಕುಟುಂಬವರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪಸಿಂಗ್‌ ಸುರ್ಜೇವಾಲಾ ಸಾಂತ್ವನ ಹೇಳಿದರು. ಸಚಿವ ಎಚ್‌.ಕೆ. ಪಾಟೀಲ ನೇಹಾ ತಂದೆ ನಿರಂಜನಯ್ಯ ತಾಯಿ ಗೀತಾ ಶಾಸಕ ಪ್ರಸಾದ ಅಬ್ಬಯ್ಯ ಸಚಿವ ಸಂತೋಷ ಲಾಡ್‌ ಉಪಸ್ಥಿತರಿದ್ದರು

‘ರಾಜಕೀಯ ನಷ್ಟ ತುಂಬಿಸಿಕೊಳ್ಳಲು ಸಾಂತ್ವನದ ನಾಟಕ’

‘ನೇಹಾ ಕೊಲೆ ಪ್ರಕರಣದಿಂದ ರಾಜಕೀಯವಾಗಿ ಕಾಂಗ್ರೆಸ್‌ಗೆ ಆಗುತ್ತಿರುವ ನಷ್ಟ ತುಂಬಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಂತ್ವನದ ನಾಟಕವಾಡಿದ್ದಾರೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು. ‘ನೇಹಾ ಕೊಲೆ ನಡೆದು ಐದು ದಿನಗಳ ನಂತರ ಕಾಂಗ್ರೆಸ್ ಅನುಕಂಪ ತೋರುತ್ತಿದೆ. ನೇಹಾ ಕುಟುಂಬದ ಮೇಲೆ ಕಾಳಜಿ ಇದ್ದಿದ್ದರೆ ಕೃತ್ಯ ನಡೆದ ನಡೆದ ದಿನವೇ ನೇಹಾ ತಂದೆ ನಿರಂಜನಯ್ಯ ಅವರಿಗೆ ಕರೆ ಮಾಡಬೇಕಿತ್ತು. ಕೊಲೆ ಖಂಡಿಸಿ ಎಲ್ಲೆಡೆ ಹೋರಾಟ ನಡೆದ ಕೂಡಲೇ ಮತದಾರರು ತಿರುಗಿ ಬೀಳುವರು ಎಂಬ ಭಯದಿಂದ ಸಾಂತ್ವನದ ನಾಟಕ ಆಡಿದ್ದಾರೆ’ ಎಂದರು. ‘ನೇಹಾ ಕೊಲೆ‌ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿಲ್ಲ. ಹಿಂದೂ- ಮುಸ್ಲಿಂ ಭೇದವಿಲ್ಲದೆ ಯಾರಿಗೇ ಅನ್ಯಾಯವಾದರೂ ನಾವು ಧ್ವನಿ ಎತ್ತುತ್ತೇವೆ. ನನ್ನ ಕ್ಷೇತ್ರದಲ್ಲಿಯೇ ಯುವತಿಗೆ ಅನ್ಯಾಯವಾಗಿದೆ ಹೀಗಿದ್ದಾಗಲೂ ನಾನು ಸುಮ್ಮನಿರಬೇಕಿತ್ತೆ? ಈ ಪ್ರಕರಣವನ್ನು ವೋಟ್ ಬ್ಯಾಂಕ್‌ಗೆ ಬಳಸಿಕೊಂಡಿದ್ದು ಕಾಂಗ್ರೆಸ್ ಆದರೆ ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿದ್ದೆ’ ಎಂದು ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.