
ಹುಬ್ಬಳ್ಳಿ: ‘ನೇಹಾ ಹಿರೇಮಠ ಕೊಲೆಯಾಗಿ ಎರಡು ವರ್ಷ ಕಳೆದರೂ, ಪ್ರಕರಣ ಇನ್ನೂ ತಾರ್ಕಿಕ ಹಂತ ತಲುಪಿಲ್ಲ. ಪ್ರಕರಣವನ್ನೇ ದಾರಿ ತಪ್ಪಿಸುವ ಯತ್ನ ನಡೆಯುತ್ತಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.
ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಗಂಭೀರ ಪ್ರಕರಣಗಳು ನಡೆದಾಗಲೂ ರಾಜ್ಯ ಸರ್ಕಾರದಿಂದ ನೊಂದ ಕುಟುಂಬಗಳಿಗೆ ನ್ಯಾಯ ಕೊಡಿಸಲು ಸಾಧ್ಯವಾಗುತ್ತಿಲ್ಲ. ತನಿಖೆ ಯಾವ ದಿಕ್ಕಿಗೆ ಸಾಗುತ್ತಿದೆ ಎನ್ನುವುದು ತಿಳಿಯುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಬಿಜೆಪಿ ಹೆಣದ ಮೇಲೆ ರಾಜಕೀಯ ಮಾಡುತ್ತಿದೆ’ ಎನ್ನುವ ಶಾಸಕ ಶಿವರಾಮ್ ಹೆಬ್ಬಾರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಮನುಷ್ಯತ್ವ ಇದ್ದವರು ಇಂತಹ ಹೇಳಿಕೆ ನೀಡುವುದಿಲ್ಲ. ಮಾನವೀಯತೆ ಆಧಾರದ ಮೇಲೆ ವಿಚಾರ ಮಾಡಿ ಮಾತನಾಡಬೇಕು. ನಾನು ಹಾಗೂ ಕಾರ್ಯಕರ್ತರು ರಾಜಕಾರಣ ಮಾಡಲು ಯಲ್ಲಾಪುರಕ್ಕೆ ಹೋಗಿಲ್ಲ. ದಲಿತ ಕುಟುಂಬದ ಹೆಣ್ಣುಮಗಳು ಕೊಲೆಯಾಗಿದ್ದು, ಎಲ್ಲರೂ ಪಕ್ಷಾತೀತವಾಗಿ ಖಂಡಿಸಬೇಕು’ ಎಂದರು.
‘ಪಶ್ಚಿಮ ಪದವೀಧರರ ಕ್ಷೇತ್ರ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಆಯ್ಕೆಗೆ ಸೋಮವಾರ ಪಕ್ಷದ ಹಿರಿಯ ನಾಯಕರ ಜತೆ ಚರ್ಚೆ ನಡೆಸಲಾಗುವುದು. ಶೀಘ್ರದಲ್ಲೇ ಅಭ್ಯರ್ಥಿ ಹೆಸರು ಘೋಷಣೆ ಮಾಡಲಾಗುವುದು’ ಎಂದು ಹೇಳಿದರು.
‘ಬಳ್ಳಾರಿಯಲ್ಲಿ ನಡೆದ ಪ್ರಕರಣದಲ್ಲಿ ಶಾಸಕ ನಾರಾ ಭರತ್ ರೆಡ್ಡಿ ಅವರ ಪಾತ್ರ ಇದೆ ಎನ್ನಲಾಗುತ್ತಿದೆ. ಅವರದ್ದು ಗೂಂಡಾ ವರ್ತನೆಯಾಗಿದ್ದು, ಅವರ ಖಾಸಗಿ ಗನ್‌ಮ್ಯಾನ್ ಗುಂಡು ಹಾರಿಸಿರುವ ಕುರಿತು ದಾಖಲೆ ದೊರಕಿವೆ. ತಮ್ಮದೇ ಪಕ್ಷದ ಕಾರ್ಯಕರ್ತನ ಬಲಿ ಪಡೆದರೂ, ಸರ್ಕಾರ ಕ್ರಮ ಕೈಗೊಳ್ಳಲು ಮೀನಮೇಷ ಎಣಿಸುತ್ತಿದೆ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.