ADVERTISEMENT

ನವ ಮಾಧ್ಯಮ; ಬದಲಾದ ಸುದ್ದಿ ಮೌಲ್ಯ

ಮಾಧ್ಯಮ ಕಾರ್ಯಾಗಾರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆತಂಕ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2019, 15:29 IST
Last Updated 19 ಅಕ್ಟೋಬರ್ 2019, 15:29 IST
ಕಾರ್ಯಾಗಾರವನ್ನು ಸಚಿವ ಜಗದೀಶ ಶೆಟ್ಟರ್ ಉದ್ಘಾಟಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಎಸ್‌.ಎನ್‌. ಸಿದ್ದರಾಮಯ್ಯ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ವಿಧಾನ ಪರಿಷತ್ ಸದಸ್ಯ ಸಿದ್ದರಾಮಪ್ಪ, ಶಾಸಕಿ ಕುಸುಮಾವತಿ ಶಿವಳ್ಳಿ, ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಸಿ. ರೂಪಾ ಇದ್ದಾರೆ
ಕಾರ್ಯಾಗಾರವನ್ನು ಸಚಿವ ಜಗದೀಶ ಶೆಟ್ಟರ್ ಉದ್ಘಾಟಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಎಸ್‌.ಎನ್‌. ಸಿದ್ದರಾಮಯ್ಯ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ವಿಧಾನ ಪರಿಷತ್ ಸದಸ್ಯ ಸಿದ್ದರಾಮಪ್ಪ, ಶಾಸಕಿ ಕುಸುಮಾವತಿ ಶಿವಳ್ಳಿ, ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಸಿ. ರೂಪಾ ಇದ್ದಾರೆ   

ಹುಬ್ಬಳ್ಳಿ: ‘ನವ ಮಾಧ್ಯಮಗಳ ಕಾಲದಲ್ಲಿ ಸುದ್ದಿಯ ಮೌಲ್ಯ ಕಡಿಮೆಯಾಗಿದೆ. ಈಗಿನಷ್ಟು ಸೌಲಭ್ಯಗಳು ಇಲ್ಲದ ಕಾಲದಲ್ಲಿ ಸುದ್ದಿಗೆ ಹೆಚ್ಚಿನ ಮೌಲ್ಯ ಇರುತ್ತಿತ್ತು. ಈಗ ಎಲ್ಲವೂ ಇದ್ದರೂ, ಸುದ್ದಿಯ ಮಹತ್ವ ಕಡಿಮೆಯಾಗಿದೆ’ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಭಿಪ್ರಾಯಪಟ್ಟರು.

ನಗರದಲ್ಲಿ ಶನಿವಾರ ನಡೆದ ‘ನವ ಮಾಧ್ಯಮಗಳ ಸವಾಲುಗಳು ಹಾಗೂ ನಿರ್ವಹಣೆ’ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ‘ಪತ್ರಿಕೆ ಕೈ ಸೇರುವ ಮುನ್ನವೇ, ಜನರಿಗೆ ಸುದ್ದಿ ಗೊತ್ತಾಗಿರುತ್ತದೆ. ಅದನ್ನು ಮೀರಿಯೂ ಜನರಿಗೆ ಸುದ್ದಿ ನೀಡುವ ಹಾಗೂ ತಲುಪುವ ಸವಾಲು ಮುದ್ರಣ ಮಾಧ್ಯಮಗಳ ಮುಂದಿದೆ’ ಎಂದರು.

ಸಚಿವ ಜಗದೀಶ ಶೆಟ್ಟರ್, ‘ಸುದ್ದಿ ವಾಹಿನಿಗಳು ಟಿಆರ್‌ಪಿ ಹೆಸರಿನಲ್ಲಿ ವೈಯಕ್ತಿಕ ವಿಷಯಗಳ ಬಗ್ಗೆ ಚರ್ಚಿಸದೆ, ಜನರ ದನಿಯಾಗಿ ಕೆಲಸ ಮಾಡಬೇಕು. ಹಗರಣಗಳನ್ನು ಬಯಲಿಗೆಳೆಯುತ್ತಿದ್ದ ಹಾಗೂ ಸರ್ಕಾರಗಳನ್ನು ಬೀಳಿಸುವಷ್ಟು ಪರಿಣಾಮಕಾರಿಯಾಗಿದ್ದ ಮಾಧ್ಯಮಗಳ ಶಕ್ತಿ ಸ್ವಲ್ಪಮಟ್ಟಿಗೆ ಕುಂದಿದೆ‘ ಎಂದು ಹೇಳಿದರು.

ADVERTISEMENT

‘ಕಾರ್ಪೊರೇಟ್ ಹಿಡಿತಕ್ಕೆ ಸಿಲುಕಿರುವ ಕೆಲ ಮಾಧ್ಯಮಗಳು, ಸ್ವಹಿತಾಸಕ್ತಿಗೆ ಬಲಿಯಾಗಿವೆ. ಜನರ ಪರವಾಗಿ ಸರ್ಕಾರದ ವಿರುದ್ಧ ದನಿ ಎತ್ತದೆ, ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿವೆ‘ ಎಂದು ಶಾಸಕ ಪ್ರಸಾದ ಅಬ್ಬಯ್ಯ ಬೇಸರ ವ್ಯಕ್ತಪಡಿಸಿದರು.

ಪೊಲೀಸ್ ಕಮಿಷನರ್ ಆರ್‌. ದಿಲೀಪ್, ‘ಪತ್ರಕರ್ತರ ಸಂಖ್ಯೆ ಹೆಚ್ಚಾಗುತಿದ್ದಂತೆ ನಕಲಿ ಪತ್ರಕರ್ತರು ಹುಟ್ಟಿಕೊಳ್ಳುತ್ತಿದ್ದಾರೆ. ಇದರ ತಡೆಗೆ ಸ್ವಯಂ ನಿರ್ಬಂಧಗಳನ್ನು ಹಾಕಿಕೊಳ್ಳಬೇಕು. ವೃತ್ತಿಪರತೆ ಜತೆಗೆ, ನೈತಿಕತೆಯನ್ನು ಉಳಿಸಿಕೊಳ್ಳಬೇಕು‘ ಎಂದು ಕಿವಿಮಾತು ಹೇಳಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಎಸ್.ಎನ್. ಸಿದ್ದರಾಮಪ್ಪ, ಶಾಸಕಿ ಕುಸುಮಾವತಿ ಶಿವಳ್ಳಿ, ಮಾಧ್ಯಮ ಅಕಾಡೆಮಿಯ ಕಾರ್ಯದರ್ಶಿ ಸಿ.ರೂಪ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ್ ಡೊಳ್ಳಿನ ಹಾಗೂ ಧಾರವಾಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಗಣಪತಿ ಗಂಗೊಳ್ಳಿ ಇದ್ದರು.

‘ಉದ್ಯಮವಾಗುತ್ತಿರುವ ಸುಳ್ಳು ಸುದ್ದಿ’
ಸುದ್ದಿ ಮನೆಯಲ್ಲಿರುವವರು ತಿಳಿದೊ ತಿಳಿಯದೆಯೋ ಸುಳ್ಳು ಸುದ್ದಿಯನ್ನು ಸೃಷ್ಟಿಸುತ್ತಿದ್ದಾರೆ. ಪೇಯ್ಡ್‌ ನ್ಯೂಸ್ ಕೂಡ ಅದರ ಮತ್ತೊಂದು ರೂಪವಾಗಿದ್ದು, ಇದೀಗ ಉದ್ಯಮ ರೂಪ ತಾಳುತ್ತಿದೆ. ಸದ್ಯ ಕೆಲ ಮಾಧ್ಯಮಗಳು ಫ್ಯಾಕ್ಟ್ ಚೆಕ್ (ಸತ್ಯಾಸತ್ಯತೆ ಪರಿಶೀಲನೆ) ಮಾಡುತ್ತಿದ್ದು, ಮುಂದೊಂದು ದಿನ ಅದನ್ನೂ ಪರಿಶೀಲನೆಗೆ ಒಳಪಡಿಸುವ ಕಾಲ ಬರಬಹುದು‘ ಎಂದು ಸುವರ್ಣ ನ್ಯೂಸ್ ಡಾಟ್‌ ಕಾಂ ಪ್ರಧಾನ ಸಂಪಾದಕ ಎಸ್‌.ಕೆ. ಶ್ಯಾಮಸುಂದರ್ ಅಭಿಪ್ರಾಯಪಟ್ಟರು.

‘ನವ ಮಾಧ್ಯಮ ಕ್ಷಣ ಕ್ಷಣದ ಬೆರಗಾಗಿದ್ದು, ಉದ್ಯಮವಾಗಿ ಬೆಳೆಯುತ್ತಿದೆ. ವ್ಯವಹಾರ ಮತ್ತು ಮನರಂಜನೆಯ ಉದ್ದೇಶದ ಅಂತರ್ಜಾಲ ಸಂವಹನ, ಶಿಕ್ಷಣ, ರಾಜಕೀಯ, ಸುದ್ದಿ ಹಾಗೂ ಸತ್ಯಾಸತ್ಯತೆಯ ಪರಿಶೀಲನೆಯ ಸಾಧನವಾಗಿ ಬಳಕೆಯಾಗುತ್ತಿದೆ‘ ಎಂದರು.

‘ಭಾಷಾ ಹಿಡಿತವೇ ಅಭಿವ್ಯಕ್ತಿಯ ಸಾಧನ’
ಅನುವಾದ ಕುರಿತು ವಿಷಯ ಮಂಡಿಸಿದ ನಿವೃತ್ತ ಪ್ರಾಧ್ಯಾಪಕ ಹಾಗೂ ಅನುವಾದಕ ಪ್ರಧಾನ್ ಗುರುದತ್ತ, ‘ಪತ್ರಕರ್ತರು ತಕ್ಷಣದ ಇತಿಹಾಸಕಾರರು. ಮೂಲ ಭಾಷೆಯ ಬಗ್ಗೆ ಹಿಡಿತವಿದ್ದಾಗ ಮಾತ್ರ, ಅವರ ಅಭಿವ್ಯಕ್ತಿ ಪರಿಣಾಮಕಾರಿಯಾಗಿರುತ್ತದೆ. ಜತೆಗೆ, ವಿಷಯದ ಪರಿಕಲ್ಪನೆಯೂ ಇರಬೇಕು‘ ಎಂದು ಅಭಿಪ್ರಾಯಪಟ್ಟರು.

‘ಇತ್ತೀಚಿನ ಪತ್ರಕರ್ತರಿಗೆ ಅನುವಾದ ದೊಡ್ಡ ಸವಾಲಾಗಿದೆ. ಭಾಷಾ ಜ್ಞಾನದ ಕೊರತೆಯಿಂದ ಆಗುವ ತಪ್ಪಿನಿಂದ ಹೀಗಾಗುತ್ತಿದೆ. ಭಾಷಾ ಕೋಶ, ನುಡಿಗಟ್ಟು, ಗಾದೆಗಳನ್ನು ಓದುತ್ತಿದ್ದರೆ ಹಾಗೂ ಶಬ್ದಗಳ ಉಚ್ಛಾರಣೆಯನ್ನು ಕೇಳಿದಾಗ ಅನುವಾದದ ಸಾಮರ್ಥ್ಯ ಹೆಚ್ಚಾಗುತ್ತದೆ. ಯಾವುದೇ ವಿಷಯವನ್ನು ಚಿಕ್ಕ ವಾಕ್ಯಗಳ ಮೂಲಕ, ಸರಳವಾಗಿ ಹೇಳಬೇಕು‘ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.