ADVERTISEMENT

42 ವಾರ್ಡ್‌ಗಳಲ್ಲಿ ಹೊಸ ನೀರಿನ ಮೀಟರ್‌ ಅಳವಡಿಕೆ: ಎಂ.ಕೆ ಮನಗೊಂಡ

ನೀರಿನ ದರ ಪಾವತಿಗೆ ಆನ್‌ಲೈನ್‌ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 14:59 IST
Last Updated 11 ಆಗಸ್ಟ್ 2022, 14:59 IST
ಹುಬ್ಬಳ್ಳಿ– ಧಾರವಾಡ ರಸ್ತೆಯ ರಾಯಾಪುರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಆಯೋಜಿಸಿದ್ದ ಸಾಮಾಜಿಕ ಮಧ್ಯಸ್ಥಿಕೆ ಸಂವಹನ ಚಟುವಟಿಕೆ ಕಾರ್ಯಕ್ರಮವನ್ನು ಮೇಯರ್‌ ಈರೇಶ ಅಂಚಟಗೇರಿ ಉದ್ಘಾಟಿಸಿದರು
ಹುಬ್ಬಳ್ಳಿ– ಧಾರವಾಡ ರಸ್ತೆಯ ರಾಯಾಪುರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಆಯೋಜಿಸಿದ್ದ ಸಾಮಾಜಿಕ ಮಧ್ಯಸ್ಥಿಕೆ ಸಂವಹನ ಚಟುವಟಿಕೆ ಕಾರ್ಯಕ್ರಮವನ್ನು ಮೇಯರ್‌ ಈರೇಶ ಅಂಚಟಗೇರಿ ಉದ್ಘಾಟಿಸಿದರು   

ಹುಬ್ಬಳ್ಳಿ: ‘24X7 ನೀರು ಪೂರೈಸಲುಎಲ್‌ ಆ್ಯಂಡ್‌ ಟಿ ವಹಿಸಿಕೊಂಡಿರುವ ಅವಳಿ ನಗರದ42 ವಾರ್ಡ್‌ಗಳಲ್ಲಿ ಹೊಸ ನೀರಿನ ಮೀಟರ್‌ ಅಳವಡಿಸಲಾಗುವುದು’ ಎಂದು ವಿಶ್ವಬ್ಯಾಂಕ್‌ ನೆರವಿನ ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ (ಕುಸ್ಸೆಂಪ್‌) ಯೋಜನಾ ಅನುಷ್ಠಾನ ಘಟಕದ ಮುಖ್ಯ ಎಂಜಿನಿಯರ್‌ ಎಂ.ಕೆ ಮನಗೊಂಡ ಹೇಳಿದರು.

ಇಲ್ಲಿನ ರಾಯಾಪುರದ ಖಾಸಗಿ ಹೋಟೆಲ್‌ನಲ್ಲಿ ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ, ಕೆಯುಐಡಿಎಫ್‌ ಹಾಗೂ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಸಾಮಾಜಿಕ ಮಧ್ಯಸ್ಥಿಕೆ ಸಂವಹನ ಚಟುವಟಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

42 ವಾರ್ಡ್‌ಗಳಲ್ಲಿ ನೀರು ಸಂಪರ್ಕಕ್ಕೆ ಪ್ರತ್ಯೇಕ ದರ ನಿಗದಿ ಮಾಡಲಾಗಿದೆ. ಈಗಾಗಲೇ ಸಂಪರ್ಕ ಪಡೆದವರಿಗೆ ₹4,600 ನಿಗದಿ ಮಾಡಲಾಗಿದ್ದು, ಪ್ರತಿ ತಿಂಗಳು ಕಂತಿನಂತೆ ₹50 ಪಾವತಿಸಬೇಕು. ಹೊಸ ಸಂಪರ್ಕ ಪಡೆಯುವವರಿಗೆ ₹ 4,500 ಠೇವಣಿ, ₹9,200 ಪಾವತಿಸಬೇಕು ಇದು ಸಹ ಕಂತಿನ ಆಧಾರದ ಮೇಲೆ ₹50ರಂತೆ ಪಾವತಿಸಬೇಕು. ನಗರ ಬಡವರಿಗೆ (ಷರತ್ತು ಅನ್ವಯಿಸಿ) ₹2,500 ಮತ್ತು ಮೀಟರ್‌ ಮೊತ್ತ ನೀಡಬೇಕು ಎಂದರು.

ADVERTISEMENT

‘‍ಪಾಲಿಕೆ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿ 24x7 ನೀರು ಸರಬರಾಜು ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸವದತ್ತಿ ಜಾಕ್‌ವೆಲ್‌ನಿಂದ ಅಮ್ಮಿನಭಾವಿ ನೀರು ಶುದ್ಧೀಕರಣ ಘಟಕದವರೆಗೆ ಪಂಪ್‌ಸೆಟ್‌ ಅಳವಡಿಸಲಾಗುವುದು.2031ರ ವೇಳೆಗೆ 224.80ಎಂಎಲ್‌ಡಿ (ದಿನಕ್ಕೆ 10ಲಕ್ಷ ಲೀಟರ್‌) ಸಾಮರ್ಥ್ಯದ ನೀರು ಶುದ್ಧೀಕರಣ ಘಟಕ ನಿರ್ಮಾಣವಾಗಲಿದೆ. ಯೋಜನೆ ಗುತ್ತಿಗೆ ಅವಧಿಯು 2032ಕ್ಕೆ ಮುಕ್ತಾಯವಾಗಲಿದೆ’ ಎಂದರು.

ಜಲಸಂಗ್ರಹಾಗಾರ ನಿರ್ಮಾಣ: ಅವಳಿ ನಗರದಲ್ಲಿ ನಿರಂತರ ನೀರು ಪೂರೈಕೆ ಮಾಡುವುದಕ್ಕೆ ಪೂರಕವಾಗಿ ಒಟ್ಟು 23 ಜಲಸಂಗ್ರಹಾಗಾರಗಳನ್ನು ನಿ‌ರ್ಮಾಣ ಮಾಡಲಾಗುವುದು. ಅಮ್ಮಿನಭಾವಿಯಲ್ಲಿ 43 ಎಂಎಲ್‌ಡಿಯ ನೀರು ಶುದ್ಧೀಕರಣ ಘಟಕ ನಿರ್ಮಾಣ ಮಾಡಲಾಗುತ್ತಿದೆ. ‍ಪಾಲಿಕೆ ವ್ಯಾಪ್ತಿಯಲ್ಲಿ ನೀರು ಸರಬರಾಜಿನಲ್ಲಿ ಉಂಟಾಗುವ ಸಮಸ್ಯೆ ಪರಿಹರಿಸಲು 20 ಸಾವಿರ ಜನಸಂಖ್ಯೆಗೆ ಅನುಗುಣವಾಗಿ ಒಂದು ಸೇವಾ ಕೇಂದ್ರ ಪ್ರಾರಂಭಿಸಲಾಗುವುದು ಎಂದು ಮನಗೊಂಡ ತಿಳಿಸಿದರು.

ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ ಮೇಯರ್‌ ಈರೇಶ ಅಂಚಟಗೇರಿ ಅವರು, ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆಯಲ್ಲಿನ ನೀರು ಸರಬರಾಜು ವ್ಯವಸ್ಥೆ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದರು.

ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಮಾತನಾಡಿದರು. ಪಾಲಿಕೆ ಉಪಮೇಯರ್‌ ಉಮಾ ಮುಕುಂದ, ವಿರೋಧ ಪಕ್ಷದ ನಾಯಕ ದೊರೆರಾಜ ಮಣಿಕುಂಟ್ಲಾ, ಕೆಯುಐಡಿಎಫ್‌ಸಿ ಕುಸ್ಸೆಂಪ್ ಯೋಜನೆ ಕಾರ್ಯ ವ್ಯವಸ್ಥಾಪಕ ಶರಣಪ್ಪ ಸುಲಗುಂಟೆ ಇದ್ದರು.

ನೀರು ಸೋರಿಕೆ ತಡೆಗೆ ಕ್ರಮ

ನೀರು ಪೂರೈಕೆಯಲ್ಲಿ ಆಗುತ್ತಿರುವ ಸೋರಿಕೆಯನ್ನು ತಡೆಯಲು ಕ್ರಮ ವಹಿಸಲಾಗುತ್ತಿದೆ. ಸದ್ಯ 6 ಮೀಟರ್‌ಗೆ ಒಂದು ಪೈಪ್‌ ಜೋಡಣೆ ಇದೆ. ಇದನ್ನು ಕನಿಷ್ಠ ನೂರು ಮೀಟರ್‌ಗೆ ಒಂದರಂತೆ ಬದಲಾಯಿಸಲಾಗುತ್ತಿದ್ದು, ಸುಧಾರಿತ ತಂತ್ರಜ್ಞಾನ ಬಳಸಲಾಗುತ್ತಿದೆ. ಇದರಿಂದ ನೀರು ಸೋರಿಕೆ ತಪ್ಪಲಿದೆ. ಸಾವರ್ಜನಿಕರು https://hdmcwater.in ನ ಮೂಲಕ ನೀರಿನ ಬಿಲ್‌ ಪಾವತಿ ಮಾಡಬಹುದು ಎಂದು ಮುಖ್ಯ ಎಂಜಿನಿಯರ್‌ ಎಂ.ಕೆ ಮನಗೊಂಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.