ADVERTISEMENT

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೌಕರರ ವಿರುದ್ಧದ 5,966 ಪ್ರಕರಣ ಇತ್ಯರ್ಥ

ಹಲವು ವರ್ಷಗಳ ಬಾಕಿ ಪ್ರಕರಣಗಳಿಗೆ ಮುಕ್ತಿ ಕೊಟ್ಟ ವಾಯವ್ಯ ಸಾರಿಗೆ ಸಂಸ್ಥೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2022, 19:30 IST
Last Updated 17 ಜುಲೈ 2022, 19:30 IST
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ   

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ತನ್ನ ನೌಕರರ ವಿರುದ್ಧ ಹಲವು ವರ್ಷಗಳಿಂದ ಬಾಕಿ ಉಳಿದಿದ್ದ 5,966 ಪ್ರಕರಣಗಳನ್ನು ಇರ್ತ್ಯರ್ಥಪಡಿಸಿದೆ. ಆ ಮೂಲಕ, ತಮ್ಮ ತಲೆ ತೂಗುತ್ತಿದ್ದ ಪ್ರಕರಣಗಳಿಂದ ಯಾವಾಗ ಮುಕ್ತಿ ಸಿಗುತ್ತದೊ ಎಂಬ ಚಿಂತೆಯಲ್ಲೇ ಕಾಲ ತಳ್ಳುತ್ತಿದ್ದ ನೌಕರರನ್ನು ನಿರಾಳಗೊಳಿಸಿದೆ.

ಸಂಸ್ಥೆಯ 9 ವಿಭಾಗಗಳು,51 ಘಟಕಗಳು, ಪ್ರಾದೇಶಿಕ ತರಬೇತಿ ಕೇಂದ್ರ ಹಾಗೂ ಪ್ರಾದೇಶಿಕ ಕಾರ್ಯಾಗಾರದಲ್ಲಿ ತರಬೇತಿ/ಪರೀಕ್ಷಾರ್ಥಿ ಹಾಗೂ ಕಾಯಂ ಆಗಿ ಕೆಲಸ ಮಾಡುತ್ತಿರುವ ಚಾಲಕರು, ಚಾಲಕರು/ನಿರ್ವಾಹಕರು ಹಾಗೂ ತಾಂತ್ರಿಕ ಸಿಬ್ಬಂದಿ ವಿರುದ್ಧ ಒಟ್ಟು 6,858 ಪ್ರಕರಣಗಳುಇತ್ಯರ್ಥವಾಗದೆ ಬಾಕಿ ಉಳಿದಿದ್ದವು.ಈ ಪೈಕಿ ಕೆಲವು, ಇಲಾಖೆ ಮತ್ತು ಕೋರ್ಟ್ ವಿಚಾರಣೆ ಹಂತದಲ್ಲಿಯೂ ಇದ್ದವು.

ಅತ್ಯಂತ ಗಂಭೀರವಾದವುಗಳೇನೂ ಅಲ್ಲದ ಬಹುತೇಕ ಈ ಸಣ್ಣ ಪ್ರಕರಣಗಳನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್. ಭರತ್ ಅವರು, ತಾವು ಅಧಿಕಾರ ವಹಿಸಿಕೊಂಡ ಕೆಲ ದಿನಗಳಲ್ಲಿ ಇವುಗಳಿಗೆ ಮುಕ್ತಿ ನೀಡಿದ್ದಾರೆ. ಅದರಂತೆ, ನಿಗದಿತ ಕಾಲಮಿತಿಯಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸುವಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ಹಾಗೂ ಕಾರ್ಯ ವ್ಯವಸ್ಥಾಪಕರಿಗೆ ಸೂಚನೆ ನೀಡಿ, ಪ್ರಕರಣಗಳಿಗೆ ಅಂತ್ಯ ಹಾಡಿದ್ದಾರೆ.

ADVERTISEMENT

ಕಿರಿಕಿರಿ ಇರಬಾರದು: ‘ನೌಕರರು ಯಾವುದೇ ಕಿರಿಕಿರಿ ಇಲ್ಲದೆ ಕೆಲಸ ಮಾಡುವಂತಾಗಬೇಕು. ಎಲ್ಲಾ ತಪ್ಪುಗಳು ಉದ್ದೇಶಪೂರ್ವಕವಾಗಿ ಆಗಿರುವುದಿಲ್ಲ. ಆ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಪ್ರಕರಣಗಳನ್ನು ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಯಿತು.ಒಟ್ಟು ಪ್ರಕರಣಗಳ ಪೈಕಿ, 2,778 ಶಿಸ್ತು ಮತ್ತು 4,080 ಗೈರು ಹಾಜರಾತಿ ಪ್ರಕರಣಗಳನ್ನು ಬಗೆಹರಿಸಲಾಗಿದೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ‘ಪ್ರಜಾವಾಣಿ’ಗೆ ತಿಳಿಸಿದರು.

‘ಘಟಕ ಮತ್ತು ವಿಭಾಗ ಮಟ್ಟದಲ್ಲಿ ಆರು ತಿಂಗಳಿಗಿಂತ ಕಡಿಮೆ ಅವಧಿಯ ಗೈರು ಹಾಜರಿ ಪ್ರಕರಣಗಳಿಗೆ ₹500ಕ್ಕೆ ಮೀರದಂತೆ ಹಾಗೂ 6ಕ್ಕಿಂತ ಮೇಲ್ಪಟ್ಟು ಹಾಗೂ 9 ತಿಂಗಳಿಗಿಂತ ಕಡಿಮೆ ಗೈರು ಹಾಜರಾಗಿರುವವರಿಗೆ ₹1,500 ದಂಡವನ್ನು ನೌಕರರ ಸಂಬಳದಿಂದ ಕಡಿತ ಮಾಡಿಕೊಂಡು ಇತ್ಯರ್ಥಪಡಿಸಲಾಗಿದೆ. ಅದೇ ರೀತಿ, ಘಟಕ ಮಟ್ಟದ ಶಿಸ್ತು ಪ್ರಕರಣಗಳಿಗೆ ₹100 ಮೀರದಂತೆ ಹಾಗೂ ವಿಭಾಗ ಮಟ್ಟದ ಪ್ರಕರಣಗಳಿಗೆ ₹500 ಮೀರದಂತೆ ಸಂಬಳ ಕಡಿತ ಮಾಡಿಕೊಂಡು ಬಗೆಹರಿಸಲಾಗಿದೆ’ ಎಂದರು.

892 ಪ್ರಕರಣ ಬಾಕಿ: ‘ಸಂಸ್ಥೆಯಲ್ಲಿರುವ24 ಸಾವಿರ ಸಿಬ್ಬಂದಿಯ ಪೈಕಿ ಹೆಚ್ಚಿನ ಸಂಖ್ಯೆಯಲ್ಲಿ ಚಾಲಕರು, ಚಾಲಕರು/ನಿರ್ವಾಹಕರು ಹಾಗೂ ತಾಂತ್ರಿಕ ಸಿಬ್ಬಂದಿ ಇದ್ದಾರೆ. ಅವರು ನಿರಾಳವಾಗಿ ಕೆಲಸ ಮಾಡುವಂತಾಗಬೇಕು. ಹಾಗಾಗಿ, ಅವರ ವಿರುದ್ಧದ ಪ್ರಕರಣಗಳನ್ನು ಘಟಕ ಹಾಗೂ ವಿಭಾಗಗಳ ಹಂತದಲ್ಲಿ ಇತ್ಯರ್ಥಪಡಿಸಲಾಗಿದೆ. ಇಲಾಖೆ ಮತ್ತು ಕೋರ್ಟ್ ಹಂತದಲ್ಲಿ 635 ಶಿಸ್ತು ಹಾಗೂ 257 ಗೈರು ಹಾಜರಾತಿ ಸೇರಿ ಒಟ್ಟು 892 ಬಾಕಿ ಇದ್ದು, ಅವುಗಳನ್ನು ಸಹ ಶೀಘ್ರ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ’ ಎಂದು ಹೇಳಿದರು.

‘ನೂತನ ವ್ಯವಸ್ಥಾಪಕ ನಿರ್ದೇಶಕರು ನೌಕರರ ವಿರುದ್ಧದ ಪ್ರಕರಣಗಳನ್ನು ಇತ್ಯರ್ಥಪಡಿಸಿರುವುದು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಯಾವುದೇ ಕಿರಿಕಿರಿ ಇಲ್ಲದೆ ಕೆಲಸ ಮಾಡಲು ಎಂ.ಡಿ ಉತ್ಸಾಹ ತುಂಬಿದ್ದಾರೆ. ವೇತನವೂ ಯಾವುದೇ ವಿಳಂಬ ಇಲ್ಲದೆ ಬರುತ್ತಿದೆ’ ಎಂದು ಹುಬ್ಬಳ್ಳಿ ಗ್ರಾಮಾಂತರ ಘಟಕದಚಾಲಕ/ನಿರ್ವಾಹಕ ಸಿದ್ದು ಹುಬ್ಬಳ್ಳಿ ಹೇಳಿದರು.

‘ಅಧಿಕಾರಿಗಳ ಸವಾರಿ ತಪ್ಪಿತು’:ನೌಕರರ ಮೇಲಿರುವ ಪ್ರಕರಣಗಳನ್ನು ಹಿಡಿದುಕೊಂಡೇ ಅಧಿಕಾರಿಗಳು ಅವರ ಮೇಲೆ ಸವಾರಿ ಮಾಡುವುದುಂಟು. ಇದರಿಂದಾಗಿ, ನೌಕರರು ಕೂಡ ಮಾನಸಿಕ ಒತ್ತಡಕ್ಕೆ ಒಳಗಾಗಿ ಕೆಲಸ ಮಾಡುತ್ತಿರುತ್ತಾರೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ವಾಯವ್ಯ ಸಾರಿಗೆ ಸಂಸ್ಥೆಯಲ್ಲಿ ನೌಕರರ ಮೇಲಿದ್ದ ಹಳೆಯ ಪ್ರಕರಣಗಳನ್ನು ಇತ್ಯರ್ಥಪಡಿಸಿರುವುದು ಉತ್ತಮ ಬೆಳವಣಿಗೆ’ ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೇಡರೇಷನ್ಉಪಾಧ್ಯಕ್ಷಆರ್‌.ಎಫ್‌. ಕವಳಿಕಾಯಿ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.