ADVERTISEMENT

ಬಿಜೆಪಿಗೆ ಜನ ಬಹುಮತ ಕೊಟ್ಟಿದ್ದಲ್ಲ, ಸೃಷ್ಟಿಸಿಕೊಂಡಿದ್ದು: ದಿನೇಶ್ ಗುಂಡೂರಾವ್‌

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2019, 15:25 IST
Last Updated 26 ನವೆಂಬರ್ 2019, 15:25 IST
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್   

ಹುಬ್ಬಳ್ಳಿ: ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿಗೆ ಜನ ಬಹುಮತ ಕೊಟ್ಟಿಲ್ಲ,ಬಹುಮತವನ್ನು ಬಿಜೆಪಿಯವರೇ ಸೃಷ್ಟಿಮಾಡಿಕೊಂಡಿದ್ದಾರೆ. ವಾಮಮಾರ್ಗದಿಂದ ಅಧಿಕಾರಕ್ಕೆ ಬಂದ ಪಕ್ಷ ಚುನಾವಣೆಯ ಬಳಿಕ ಪತನವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಭವಿಷ್ಯ ನುಡಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಬಿಜೆಪಿಗೆ ಸಂವಿಧಾನದ ಹಾಗೂ ಕಾನೂನಿಗೆ ಬಗ್ಗೆ ನಂಬಿಕೆಯಿಲ್ಲ. ನೈತಿಕತೆಯನ್ನೂ ಉಳಿಸಿಕೊಂಡಿಲ್ಲ. ಯಾವುದೇ ಮಾರ್ಗವಾದರೂ, ಅಧಿಕಾರ ಬೇಕು ಎನ್ನುವ ದುರಾಸೆಯಿದೆ. ಅವರಿಗೆ ಉಪಚುನಾವಣೆಯಲ್ಲಿ ಜನರೇ ಪಾಠ ಕಲಿಸುತ್ತಾರೆ. ಚುನಾವಣೆ ಬಳಿಕ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆಯಾಗಲಿದೆ’ ಎಂದರು.

’ಮಹಾರಾಷ್ಟ್ರದಲ್ಲಿ ಪ್ರತಿಯೊಬ್ಬ ಶಾಸಕರಿಗೆ ನೂರಾರು ಕೋಟಿ ಹಣ ಖರ್ಚು ಮಾಡಲಾಗಿದೆ. ರಾಜ್ಯದಲ್ಲಿಯೂ ತಲಾ ₹ 25 ಕೋಟಿ ನೀಡಲಾಗಿದೆ. ರಾಜ್ಯದ ಶಾಸಕರು ಈಗ ನಮಗೂ ₹ 100 ಕೋಟಿ ಕೊಡಿ ಎಂದು ಬಿಜೆಪಿ ನಾಯಕರನ್ನು ಕೇಳುತ್ತಿದ್ದಾರಂತೆ’ ಎಂದು ಲೇವಡಿ ಮಾಡಿದರು.

‘ಇನ್ನಷ್ಟು ಶಾಸಕರನ್ನು ಕರೆ ತರುತ್ತೇವೆ ಎಂದು ಅರವಿಂದ ಲಿಂಬಾವಳಿ ಹೇಳುತ್ತಿದ್ದಾರೆ. ಶಾಸಕರನ್ನು ಕರೆ ತರುವುದಾದರೆ ಚುನಾವಣೆಗೆ ಯಾಕೆ ಹೋಗಬೇಕು, ಜನ ಏಕೆ ಮತ ಹಾಕಬೇಕು’ ಎಂದು ಪ್ರಶ್ನಿಸಿದರು.

ಕೆಪಿಸಿಸಿ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗುತ್ತದೆ ಎನ್ನುವ ಸುದ್ದಿಯ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ‘ಇದು ಹೈಕಮಾಂಡ್‌ಗೆ ಬಿಟ್ಟ ನಿರ್ಧಾರ. ಪಕ್ಷದ ಹಿತದೃಷ್ಟಿಯಿಂದ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೂ ಬದ್ಧ. ಸದ್ಯಕ್ಕಂತೂ ಬದಲಾವಣೆಯಿಲ್ಲ. ಉಪ ಚುನಾವಣೆಯಲ್ಲಿ ಗೆಲ್ಲುವುದಷ್ಟೇ ಮುಂದಿನ ಗುರಿ’ ಎಂದರು.

ಕಾಂಗ್ರೆಸ್‌ ಮುಖಂಡರಾದ ಅನಿಲಕುಮಾರ ಪಾಟೀಲ, ಅಲ್ತಾಫ್‌ ಹಳ್ಳೂರು, ಸದಾನಂದ ಡಂಗನವರ, ಶಾರೂಕ್‌ ಮುಲ್ಲಾ, ಸರೋಜಾ ಹೂಗಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.