ADVERTISEMENT

ಸುಳ್ಳುಗಾರನ ಮಾತಿಗೆ ಪ್ರತಿಕ್ರಿಯಿಸಲ್ಲ: ಕುಮಾರಸ್ವಾಮಿಗೆ ಸಿದ್ದರಾಮಯ್ಯ ತಿರುಗೇಟು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2021, 8:40 IST
Last Updated 17 ಅಕ್ಟೋಬರ್ 2021, 8:40 IST
ಸಿದ್ದರಾಮಯ್ಯ
ಸಿದ್ದರಾಮಯ್ಯ    

ಹುಬ್ಬಳ್ಳಿ: ಎಚ್‌.ಡಿ. ಕುಮಾರಸ್ವಾಮಿ ಒಬ್ಬ ಸುಳ್ಳುಗಾರ, ಅವರ ಹೇಳಿಕೆಗಳಿಗೆ ಹೆಚ್ಚು ಮಹತ್ವ ಕೊಡುವ ಅಗತ್ಯವಿಲ್ಲವೆಂದು ತೀರ್ಮಾನಿಸಿದ್ದೇನೆ. ಸುಳ್ಳುಗಾರನ ಮಾತಿಗೆ ಪ್ರತಿಕ್ರಿಯೆ ಕೊಡುವುದಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗರಂ ಆದರು.

ಸಿದ್ದರಾಮಯ್ಯ ಮುಸ್ಲಿಂ ನಾಯಕರನ್ನು ಹತ್ತಿಕ್ಕುತ್ತಿದ್ದಾರೆ ಎನ್ನುವ ಕುಮಾರಸ್ವಾಮಿ ಆರೋಪಕ್ಕೆ ಭಾನುವಾರ ನಗರದಲ್ಲಿ ಪ್ರತಿಕ್ರಿಯಿಸಿದ ಅವರು ‘ಕುಮಾರಸ್ವಾಮಿ ಯಾವಾಗಲೂ ಹಿಟ್‌ ಅಂಡ್‌ ರನ್‌ ಹೇಳಿಕೆಗಳನ್ನು ಕೊಡುತ್ತಾರೆ. ಕಾಂಗ್ರೆಸ್‌ ಅಲ್ಪಸಂಖ್ಯಾತರ ಪರ ಎಂದು ನಾವು ಯಾರ ಮುಂದೆಯೂ ಸಾಬೀತು ಮಾಡುವುದು ಬೇಕಿಲ್ಲ. ಅದಕ್ಕೆ ಅಲ್ಪಸಂಖ್ಯಾತ ನಾಯಕರೇ ಉತ್ತರ ಕೊಡುತ್ತಾರೆ’ ಎಂದರು.

ಉಪಚುನಾವಣೆಯಲ್ಲಿ ಪ್ರಚಾರಕ್ಕೆ ಬರಬೇಡಿ ಎಂದು ಸಿ.ಎಂ. ಇಬ್ರಾಹಿಂ ಅವರಿಗೆ ಯಾರೂ ಹೇಳಿಲ್ಲ. ಇದು ಪಕ್ಷದ ಕೆಲಸ. ಮುಂದಿನ ದಿನಗಳಲ್ಲಿ ಪ್ರಚಾರಕ್ಕೆ ಬರಬಹುದು. ಆರ್‌ಎಸ್ಎಸ್‌ ಕೋಮುವಾದಿ ಸಂಘಟನೆ; ಹೀಗಾಗಿ ಮೊದಲಿನಿಂದಲೂ ನಾನು ಇದರ ಪ್ರಬಲ ವಿರೋಧಿ ಎಂದರು.

ಸಂಗೂರು ಸಕ್ಕರೆ ಕಾರ್ಖಾನೆ ಮುಚ್ಚಲು ಕಾಂಗ್ರೆಸ್‌ ಕಾರಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಬೆಳಿಗ್ಗೆ ಹುಬ್ಬಳ್ಳಿಯಲ್ಲಿ ಆರೋಪಿಸಿದ್ದರು.

ಈ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ’ಸಿ.ಎಂ. ಉದಾಸಿ ಸಂಗೂರು ಸಕ್ಕರೆ ಕಾರ್ಖಾನೆಗೆ ಅಧ್ಯಕ್ಷರಾಗಿದ್ದಾಗ ಅದು ಹಾಳಾಯಿತು. ಇದರಿಂದ ರೈತರಿಗೆ ಅನ್ಯಾಯವಾಗಿದೆ. ಇದಕ್ಕೆ ಯಾರು ಹೊಣೆ’ ಎಂದು ಪ್ರಶ್ನಿಸಿದರು.

ಉಪಚುನಾವಣೆ ಬಳಿಕ ಇಂಧನದ ಮೇಲಿನ ತೆರಿಗೆ ಪರಿಷ್ಕರಣೆಗಾಗಿ ಆರ್ಥಿಕ ಪರಿಸ್ಥಿತಿಯನ್ನು ಅವಲೋಕಿಸುವುದಾಗಿ ಬೊಮ್ಮಾಯಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ‘ಡೀಸೆಲ್‌ ಬೆಲೆ ಮತ್ತೆ ಏರಿಕೆಯಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೆರಿಗೆ ಇಳಿಕೆ ಮಾಡಬೇಕು. ಬೊಮ್ಮಾಯಿ ಮೈಕ್ರೊಸ್ಕೋಪ್‌ ಹಾಕಿಕೊಂಡು ರಾಜ್ಯದ ‌ಆರ್ಥಿಕ ಪರಿಸ್ಥಿತಿ ನೋಡುತ್ತಾರೆಯೇ’ ಎಂದು ಚಾಟಿ ಬೀಸಿದರು.

ತಮ್ಮ ಜವಾಬ್ದಾರಿಯಿಂದ ಜಾರಿಕೊಳ್ಳಲು ಬೊಮ್ಮಾಯಿ ಆರ್ಥಿಕ ಪರಿಸ್ಥಿತಿ ಅವಲೋಕಿಸುವ ಹೇಳಿಕೆ ಕೊಟ್ಟಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.