ADVERTISEMENT

ಎರಡು ಬಾರಿ ಔಷಧ ಸಿಂಪಡಣೆಗೆ ಸೂಚನೆ

ಡೆಂಗಿ, ಚಿಕೂನ್‌ಗುನ್ಯಾ ಆತಂಕ: 25 ಬಡಾವಣೆಗಳಲ್ಲಿ ಗಂಭೀರ ಲಾರ್ವ ಸಾಂದ್ರತೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2019, 20:26 IST
Last Updated 23 ಜುಲೈ 2019, 20:26 IST
ಹುಬ್ಬಳ್ಳಿಯ ತಿಮ್ಮಸಾಗರ ಬಡಾವಣೆಯಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಮಂಗಳವಾರ ಪಾಲಿಕೆ ಸಿಬ್ಬಂದಿ ಔಷಧಿ ಸಿಂಪರಣೆ ಮಾಡಿದರು
ಹುಬ್ಬಳ್ಳಿಯ ತಿಮ್ಮಸಾಗರ ಬಡಾವಣೆಯಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಮಂಗಳವಾರ ಪಾಲಿಕೆ ಸಿಬ್ಬಂದಿ ಔಷಧಿ ಸಿಂಪರಣೆ ಮಾಡಿದರು   

ಹುಬ್ಬಳ್ಳಿ: ಅವಳಿ ನಗರದಲ್ಲಿ ಡೆಂಗಿ, ಚಿಕೂನ್‌ಗುನ್ಯಾ ಆತಂಕ ಹೆಚ್ಚಾಗಿರುವ ಕಾರಣ ದಿನಕ್ಕೆ ಎರಡು ಬಾರಿ ಔಷಧಿ ಸಿಂಪಡಣೆ ಮಾಡಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ್‌ ಪಾಲಿಕೆಯ ಎಲ್ಲ ವಲಯಗಳ ಮುಖ್ಯಸ್ಥರಿಗೆ ಮಂಗಳವಾರ ಸೂಚನೆ ನೀಡಿದ್ದಾರೆ.

ಮಳೆಗಾಲ ಹಾಗೂ ತುರ್ತು ಪರಿಸ್ಥಿತಿ ಸಂದರ್ಭಗಳನ್ನು ಎದುರಿಸಲು ವಲಯಗಳಿಗೆ ನೀಡಲಾಗಿದ್ದ ಅನುದಾನವನ್ನೇ ಔಷಧ ಸಿಂಪಡಣೆ, ಕಸ ವಿಲೇವಾರಿ, ಸ್ವಚ್ಛತೆ ಕಾಪಾಡಿಕೊಳ್ಳುವ ಉದ್ದೇಶಕ್ಕೆ ಆದ್ಯತೆ ನೀಡಿ ಖರ್ಚು ಮಾಡಬೇಕು ಎಂದು ಆಯುಕ್ತರು ತಿಳಿಸಿದ್ದಾರೆ.

ಡೆಂಗಿ, ಚಿಕೂನ್‌ಗುನ್ಯಾ ಹರಡುವುದನ್ನು ತಡೆಗಟ್ಟಲು ಆರೋಗ್ಯ ಇಲಾಖೆ ಸಿಬ್ಬಂದಿ ಈಡೀಸ್‌ ಈಜಿಪ್ಟ್‌ ಸೊಳ್ಳೆ ಲಾರ್ವ ನಿರ್ಮೂಲನೆ ಕಾರ್ಯ ಕೈಗೊಂಡಿದ್ದು, ಈ ಸಮೀಕ್ಷೆಯಲ್ಲಿ ಅತಿ ಗಂಭೀರ ಲಾರ್ವ ಸಾಂದ್ರತೆ ಕಂಡುಬಂದ ಪ್ರದೇಶಗಳ ಮಾಹಿತಿಯನ್ನು ಮಂಗಳವಾರ ಪಾಲಿಕೆಗೆ ನೀಡಿದೆ. ಈ ಪ್ರದೇಶಗಳಲ್ಲಿ ಪ್ರೆರಿಥ್ರಿಯಂ ಕೀಟನಾಶಕ ಬಳಸಿ ಫಾಗಿಂಗ್ ಮಾಡಿಸುವಂತೆ ಸಲಹೆ ನೀಡಿದೆ.

ADVERTISEMENT

ಧಾರವಾಡದ ಕಂಟಿಗಲ್ಲಿ, ಮೇದಾರ ಓಣಿ, ಕುರುಬರ ಓಣಿ, ಇಂಡಿ ಓಣಿ, ಶಿವಳ್ಳಿ ಪ್ಲಾಟ್‌, ಪೆಂಡಾರ್ ಓಣಿ, ಜಿರ್ಲೆ ಪ್ಲಾಟ್‌, ಮಹಾಂತ ನಗರ, ಮಟ್ಟಿ ಪ್ಲಾಟ್‌, ಈಶ್ವರಗುಡಿ ಓಣಿ, ಮಂದಾರ ಓಣಿ, ಬಾಳಗಿ ಓಣಿ, ದ್ಯಾಮವ್ವನಗುಡಿ ಓಣಿ, ಹಿರೇಮಠ ಓಣಿ, ಅಂತಪ್ಪನ ಓಣಿ, ಹುಬ್ಬಳ್ಳಿಯ ಚಿಟಗುಪ್ಪಿ ಚಾಳ, ಜಮಾದಾರ ಚಾಳ, ಕರಿಗೇರಿ ಓಣಿ, ಬಿಂದರಗಿ ಓಣಿ, ಕುಲಕರ್ಣಿ ಹಕ್ಕಲ, ಫಿಷ್‌ ಮಾರ್ಕೆಟ್‌, ತಬೀಬ್‌ ಲ್ಯಾಂಡ್‌, ಮೌಲಾಲಿ ಓಣಿ ಮತ್ತು ಮಂಟೂರ್ ರೋಡ್ ಬಡಾವಣೆಗಳಲ್ಲಿ ಅತಿ ಗಂಭೀರ ಲಾರ್ವ ಸಾಂದ್ರತೆ ಕಂಡುಬಂದಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಮೇಲಿಂದ ಮೇಲೆ ಮಳೆ ಬೀಳುತ್ತಿರುವ ಕಾರಣ ನೀರು ನಿಂತ ಜಾಗದಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿರುವ ಪರಿಣಾಮ ರೋಗದ ಭೀತಿ ಹೆಚ್ಚಾಗಿದೆ. ಇದೇ ವರ್ಷದ ಜನವರಿಯಿಂದ ಜೂನ್‌ವರೆಗೆ 28 ಡೆಂಗಿ ಮತ್ತು 14 ಚಿಕೂನ್‌ಗುನ್ಯಾ ಪ್ರಕರಣಗಳು ವರದಿಯಾಗಿವೆ. ಜುಲೈ ತಿಂಗಳಲ್ಲೇ 14 ಡೆಂಗಿ ಮತ್ತು 6 ಚಿಕೂನ್‌ಗುನ್ಯಾ ಪ್ರಕರಣ ಕಂಡುಬಂದಿವೆ ಎಂದು ಜಿಲ್ಲಾ ಆರೊಗ್ಯ ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಆದ್ದರಿಂದ ವಿವಿಧ ವಾರ್ಡ್‌ಗಳಲ್ಲಿ ಮಂಗಳವಾರ ಔಷಧ ಸಿಂಪಡಣೆ ಮಾಡುತ್ತಿದ್ದ ಚಿತ್ರಣ ಕಂಡುಬಂತು.

‘ಡೆಂಗಿ, ಚಿಕೂನ್‌ಗುನ್ಯಾ ಆತಂಕ ಹೆಚ್ಚಿದ ಕಾರಣ ಕಡ್ಡಾಯವಾಗಿ ದಿನಕ್ಕೆರೆಡು ಬಾರಿ ಔಷಧಿ ಸಿಂಪಡಣೆ ಮಾಡಿ ಸ್ವಚ್ಛತೆಗೆ ಆದ್ಯತೆ ಕೊಡುವಂತೆ ಆಯುಕ್ತರು ಹಾಗೂ ಆರೋಗ್ಯಧಿಕಾರಿಗಳು ಸೂಚಿಸಿದ್ದಾರೆ. ನೇಕಾರ ಕಾಲೊನಿ, ಗುರುದತ್ತ ಕಾಲೊನಿ. ಲಕ್ಷ್ಮಿ ವನ, ತಿಮ್ಮಸಾಗರ ಬಡಾವಣೆ, ಹೊಸ ಕೋರ್ಟ್‌, ಅಕ್ಷಯ ಕಾಲೊನಿ ನಾಲ್ಕನೇ ಹಂತದಲ್ಲಿ ಮೆಲಾಥಿಯನ್‌ ಸಿಂಪಡಿಸಲಾಗಿದೆ’ ಎಂದು ವಲಯ ಕಚೇರಿ 5ರ ಆರೋಗ್ಯ ನಿರೀಕ್ಷಕ ಮಹಾಂತೇಶ ನಿಡುವಣಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅನಗತ್ಯ ಆತಂಕ ಬೇಡ‘

ಯಾವ ಸೊಳ್ಳೆಯಿಂದ ಡೆಂಗಿ ಹಾಗೂ ಚಿಕೂನ್‌ಗುನ್ಯಾ ಬರುತ್ತದೆ ಎನ್ನುವುದರ ಬಗ್ಗೆ ಜನರಿಗೆ ಸರಿಯಾಗಿ ಮಾಹಿತಿಯಿಲ್ಲ. ಇದರಿಂದ ಜನ ವಿನಾಕಾರಣ ಆತಂಕಕ್ಕೆ ಒಳಗಾಗುತ್ತಿದ್ದಾರೆ. ಆಶಾ ಕಾರ್ಯಕರ್ತೆಯರು ಹಾಗೂ ನಮ್ಮ ಇಲಾಖೆಯ ಸಿಬ್ಬಂದಿ ಪ್ರತಿ ಬಡಾವಣೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ಜ್ವರದ ಲಕ್ಷಣ ಕಂಡುಬಂದ ತಕ್ಷಣ ಅದು ಡೆಂಗಿ ಹಾಗೂ ಚಿಕೂನ್‌ಗುನ್ಯ ಅಲ್ಲ ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಶಿವಕುಮಾರ ಮಾನ್ಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೆಚ್ಚು ಆತಂಕ ಇರುವ ಹಾಗೂ ಪ್ರಕರಣ ಕಂಡುಬಂದ ಬಡಾವಣೆಗಳಲ್ಲಿ ಭಿತ್ತಿಪತ್ರ ಅಂಟಿಸಿ, ತಿಳಿವಳಿಕೆ ಹೇಳಿ ಜಾಗೃತಿ ಮೂಡಿಸಲಾಗುತ್ತಿದೆ. ಇದಕ್ಕೆ ಜನರ ಸಹಕಾರ ಕೂಡ ಮುಖ್ಯ’ ಎಂದರು.

‘ನೀರು ಬಳಸಿ ಮ್ಯಾಗ್ನೇಷಿಯಂ ಸಲ್ಫೆಟ್‌ ಹಚ್ಚಿಕೊಳ್ಳಿ‘

ಮ್ಯಾಗ್ನೇಷಿಯಂ ಸಲ್ಫೆಟ್‌ ಪುಡಿಯನ್ನು ಕೈಯಲ್ಲಿ ಹಾಕಿಕೊಂಡು ನೀರಿನಲ್ಲಿ ಮಿಶ್ರಣ ಮಾಡಿ ದೇಹದ ವಿವಿಧ ಭಾಗಗಳಿಗೆ ಹಚ್ಚಿಕೊಂಡರೆ ಸೊಳ್ಳೆಗಳು ಕಚ್ಚುವುದಿಲ್ಲ. ಎರಡರಿಂದ, ಮೂರು ತಾಸು ಇದರ ಪರಿಣಾಮ ಇರುತ್ತದೆ. ರಾತ್ರಿ ಪಾಳೆಯಲ್ಲಿ ಕೆಲಸ ಮಾಡುವವರು ಇದನ್ನು ಹಚ್ಚಿಕೊಳ್ಳುವುದು ಉತ್ತಮ ಎಂದು ವೈದ್ಯ ವಿ.ಬಿ. ನಿಟಾಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.