ADVERTISEMENT

₹881 ಕೋಟಿ ನಷ್ಟದಲ್ಲಿ ವಾಯವ್ಯ ಸಾರಿಗೆ ಸಂಸ್ಥೆ

ಸರ್ಕಾರದಿಂದ ಬಾಕಿ ತರಲು ಕ್ರಮ: ನೂತನ ಅಧ್ಯಕ್ಷ ವಿ.ಎಸ್. ಪಾಟೀಲ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2019, 16:30 IST
Last Updated 14 ಅಕ್ಟೋಬರ್ 2019, 16:30 IST
ವಾಯವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ವಿ.ಎಸ್. ಪಾಟೀಲ ಅವರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕ ಸಂತೋಷ ಕುಮಾರ್, ಮುಖ್ಯ ಸಿಬ್ಬಂದಿ ವ್ಯವಸ್ಥಾಪಕಿ ವಿಜಯಶ್ರೀ ನರಗುಂದ, ಜಗದಂಬಾ ಹೂಗುಚ್ಛ ನೀಡಿ ಶುಭಾಶಯ ಕೋರಿದರು. ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಸಾವಕಾರ ಇದ್ದಾರೆ
ವಾಯವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ವಿ.ಎಸ್. ಪಾಟೀಲ ಅವರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕ ಸಂತೋಷ ಕುಮಾರ್, ಮುಖ್ಯ ಸಿಬ್ಬಂದಿ ವ್ಯವಸ್ಥಾಪಕಿ ವಿಜಯಶ್ರೀ ನರಗುಂದ, ಜಗದಂಬಾ ಹೂಗುಚ್ಛ ನೀಡಿ ಶುಭಾಶಯ ಕೋರಿದರು. ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಸಾವಕಾರ ಇದ್ದಾರೆ   

ಹುಬ್ಬಳ್ಳಿ: ‘ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯು ಸದ್ಯ ₹882 ಕೋಟಿ ನಷ್ಟದಲ್ಲಿದೆ’ ಎಂದು ನೂತನ ಅಧ್ಯಕ್ಷ ವಿ.ಎಸ್. ಪಾಟೀಲ ಹೇಳಿದರು.

ನಗರದ ಗೋಕುಲ ರಸ್ತೆಯಲ್ಲಿರುವ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಸೋಮವಾರ ಅಧಿಕಾರ ವಹಿಸಿಕೊಂಡು ಮಾತನಾಡಿದ ಅವರು, ‘ಸಂಸ್ಥೆ ತೀವ್ರ ಸಂಕಷ್ಟದಲ್ಲಿರುವ ಹೊತ್ತಿನಲ್ಲಿ ಅಧ್ಯಕ್ಷನಾಗಿರುವ ನನ್ನ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ನಷ್ಟವನ್ನು ತಗ್ಗಿಸಿ, ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಬೇಕಿದೆ. ಆ ಮೂಲಕ ಸಂಸ್ಥೆಯನ್ನು ಸುಸ್ಥಿತಿಗೆ ತರಲು ಶ್ರಮಿಸುವೆ’ ಎಂದರು.

‘ವಾಯವ್ಯ ಸಾರಿಗೆ ಸಂಸ್ಥೆ ನಿತ್ಯ ₹70 ಲಕ್ಷ ಹಾಗೂ ಬಿಆರ್‌ಟಿಎಸ್ ತಿಂಗಳಿಗೆ ₹1 ಕೋಟಿ ನಷ್ಟ ಅನುಭವಿಸುತ್ತಿದೆ. ಆದಾಯ ಸೋರಿಕೆ ಸೇರಿದಂತೆ, ಹಲವು ಹಂತದಲ್ಲಿ ನಡೆಯುತ್ತಿರುವ ನಷ್ಟವನ್ನು ತಡೆಯಲು ಯೋಜನೆ ರೂಪಿಸಲಾಗುವುದು’ ಎಂದು ಹೇಳಿದರು.

ADVERTISEMENT

ನಷ್ಟ ತಗ್ಗಿಸಿದ್ದ ಬಿಜೆಪಿ!:

‘2012ರಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ಜಗದೀಶ ಶೆಟ್ಟರ್ ಅವರು, ಸಂಸ್ಥೆಗೆ ತೆರಿಗೆ ವಿನಾಯಿತಿ ನೀಡಿದ್ದರು. ಜತೆಗೆ, ₹50 ಕೋಟಿ ವಿಶೇಷ ಅನುದಾನ ಕೊಟ್ಟಿದ್ದರು. ಇದರಿಂದಾಗಿ, ಸಂಸ್ಥೆಯ ನಷ್ಟದ ಪ್ರಮಾಣ ಕಡಿಮೆಯಾಗಿತ್ತು’ ಎಂದು ಗಮನ ಸೆಳೆದರು.

‘ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ತೆರಿಗೆ ವಿನಾಯಿತಿ ನೀಡಲಿಲ್ಲ. ಹಾಗಾಗಿ, ನಷ್ಟದ ಪ್ರಮಾಣ ಹೆಚ್ಚುತ್ತಾ ಹೋಯಿತು. ಜತೆಗೆ, ಸರ್ಕಾರದಿಂದ ಬಾಕಿ ಬರಬೇಕಾದ ಮೊತ್ತವೂ ದೊಡ್ಡದಾಯಿತು’ ಎಂದು ಹೇಳಿದರು.

’ಸಿಬ್ಬಂದಿಯ ಉಪದಾನ, ಸಿಬ್ಬಂದಿ ರಜೆ ನಗದೀಕರಣ, ಬೋನಸ್, ಪರೀಕ್ಷಾರ್ಥ ಸೇವಾ ಬಾಕಿ, ವೇತನ ಪರಿಷ್ಕರಣೆ, ಸಹಕಾರಿ ಪತ್ತಿನ ಸಂಘದ ಬಾಕಿ, ಎಲ್‌ಐಸಿ, ಪೂರೈಕೆದಾರರ ಬಿಲ್‌, ಅಪಘಾತ ಪರಿಹಾರದ ಮೊತ್ತ, ಪಿಎಫ್ ನಿಧಿ ಹಾಗೂ ಕಾಮಗಾರಿ ಬಾಕಿಯನ್ನು ಸಂಸ್ಥೆ ಪಾವತಿಸಬೇಕಿದೆ. ಸರ್ಕಾರದಿಂದ ಬಾಕಿ ಬಂದ ಬಳಿಕ, ಎಲ್ಲವನ್ನೂ ಹಂತಹಂತವಾಗಿ ಪಾವತಿಸಲಾಗುವುದು’ ಎಂದು ಭರವಸೆ ನೀಡಿದರು.

‘2018–19ನೇ ಸಾಲಿನಲ್ಲಿ 243 ಹೊಸ ವಾಹನಗಳನ್ನು ಸೇರ್ಪಡೆಗೊಳಿಸಲಾಗಿದ್ದು, 272 ವಾಹನಗಳನ್ನು ನಿಷ್ಕ್ರೀಯಗೊಳಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಸೆಪ್ಟೆಂಬರ್ ಅಂತ್ಯಕ್ಕೆ 89 ವಾಹನ ಸೇರ್ಪಡೆಯಾಗಿದ್ದು, 143 ಹಳೇ ವಾಹನಗಳು ಗುಜರಿ ಸೇರಿವೆ’ ಎಂದು ಮಾಹಿತಿ ನೀಡಿದರು.

ತಡವರಿಸಿದ ಪಾಟೀಲ:

ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ತಡವರಿಸಿದ ವಿ.ಎಸ್. ಪಾಟೀಲ, ‘ಸಂಸ್ಥೆಯ ಸ್ಥಿತಿ ನಿಮಗೂ ಗೊತ್ತಿದೆ. ಎಲ್ಲರ ಸಹಕಾರದೊಂದಿಗೆ ಸುಸ್ಥಿತಿಗೆ ತರಲು ಯತ್ನಿಸುವೆ. ಆರು ತಿಂಗಳ ಬಳಿಕ, ಮತ್ತೆ ನಿಮ್ಮನ್ನು ಭೇಟಿಯಾಗುವೆ’ ಎಂದು ನಮಸ್ಕರಿಸಿದರು.

ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ ಇದ್ದರು.

ಸಂಕಷ್ಟದ ನಡುವೆಯೂ ಹಲವು ಯೋಜನೆ

‘2019–20ನೇ ಸಾಲಿನಲ್ಲಿ 630 ಹೊಸ ವಾಹನಗಳನ್ನು ಸಂಸ್ಥೆಗೆ ಸೇರ್ಪಡೆಗೊಳಿಸುವುದರ ಮೂಲಕ, 500 ಹಳೆಯ ವಾಹನಗಳನ್ನು ನಿಷ್ಕ್ರೀಯಗೊಳಿಸಲಾಗುವುದು. 2,500 ಚಾಲಕರ ನೇಮಕ ಮಾಡಿಕೊಳ್ಳುವ ಜತೆಗೆ, 14 ಹೊಸ ಬಸ್ ನಿಲ್ದಾಣ ಮತ್ತು 6 ಘಟಕ ನಿರ್ಮಾಣ, 11 ನಿಲ್ದಾಣಗಳು ಹಾಗೂ 10 ಘಟಕಗಳನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ’ ಎಂದು ವಿ.ಎಸ್. ಪಾಟೀಲ ಹೇಳಿದರು.

ಪ್ರತ್ಯೇಕ ನಿಗಮ ಬೇಡ:

ಕೇವಲ ನೂರು ಬಸ್‌ಗಳ ಮೂಲಕ ಕಾರ್ಯಾಚರಣೆ ನಡೆಸುತ್ತಿರುವ ಬಿಆರ್‌ಟಿಎಸ್‌ ಅನ್ನು ಪ್ರತ್ಯೇಕ ನಿಗಮವನ್ನಾಗಿ ಮಾಡಬೇಕೆಂಬ ಪ್ರಸ್ತಾವದ ಕುರಿತು ಪ್ರತಿಕ್ರಿಯಿಸಿದ ಅವರು, ‘ಪ್ರಸ್ತಾವಕ್ಕೆ ನನ್ನ ಸಹಮತ ಇಲ್ಲ. ಪ್ರತ್ಯೇಕ ನಿಗಮದ ಅಗತ್ಯವೂ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.