ADVERTISEMENT

ಹುಬ್ಬಳ್ಳಿ: ವಾಯವ್ಯ ಸಂಸ್ಥೆ ‘ಸಾರಿಗೆ ಸ್ಪಂದನ’ ವ್ಯಾಪಕ ಬಳಕೆ

ಆನ್‌ಲೈನ್‌ ಮೂಲಕವೇ ಸಾರ್ವಜನಿಕರು ಕುಂದು ಕೊರತೆ ದೂರು ಸಲ್ಲಿಸಲು ಅವಕಾಶ

ನಾಗರಾಜ ಚಿನಗುಂಡಿ
Published 12 ಅಕ್ಟೋಬರ್ 2025, 7:14 IST
Last Updated 12 ಅಕ್ಟೋಬರ್ 2025, 7:14 IST
ವಾಯವ್ಯ ಸಾರಿಗೆ ಸಂಸ್ಥೆಯು ಅಭಿವೃದ್ಧಿಪಡಿಸಿದ ‘ಸಾರಿಗೆ ಸ್ಪಂದನ’ ಜಾಲತಾಣದ ನೋಟ
ವಾಯವ್ಯ ಸಾರಿಗೆ ಸಂಸ್ಥೆಯು ಅಭಿವೃದ್ಧಿಪಡಿಸಿದ ‘ಸಾರಿಗೆ ಸ್ಪಂದನ’ ಜಾಲತಾಣದ ನೋಟ   

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲುಕೆಆರ್‌ಟಿಸಿ) ತಂತ್ರಜ್ಞಾನ ಅಳವಡಿಕೆಗೆ ಒತ್ತು ನೀಡಿದೆ. ನೌಕರರಲ್ಲದೇ, ಸಾರ್ವಜನಿಕರಿಗೆ ತಕ್ಷಣವೇ ಸ್ಪಂದಿಸಲು ‘ಸಾರಿಗೆ ಸ್ಪಂದನ’ (www.ss.itnwkrtc.in) ಅಂತರ್ಜಾಲ ತಾಣ ಸಿದ್ಧಪಡಿಸಿದೆ. 

ಬಸ್‌ ಚಾಲಕರು–ನಿರ್ವಾಹಕರ ನಡವಳಿಕೆ, ಬಸ್‌ ವೇಳಾಪಟ್ಟಿ, ಬಸ್‌ ನಿಲ್ದಾಣಗಳ ಶುಚಿತ್ವ, ಬಸ್‌ಗಳಲ್ಲಿನ ಸ್ವಚ್ಛತೆ, ಮುಂಗಡ ಕಾಯ್ದಿರಿಸುವಿಕೆ, ಬಸ್‌ ಟಿಕೆಟ್‌ಗೆ ಸಂಬಂಧಿತ, ಬಸ್‌ಪಾಸ್‌ಗೆ ಸಂಬಂಧಿತ, ಮೂಲ ಸೌಕರ್ಯ ಸೇರಿ ಯಾವುದೇ ಕುಂದು ಕೊರತೆಗೆ ದೂರು ಸಲ್ಲಿಸಬಹುದು. ದೂರಿಗೆ ಪೂರಕವಾಗಿ ಕೈಗೊಂಡ ಕ್ರಮದ ಮಾಹಿತಿ ಮೊಬೈಲ್‌ ಫೋನ್ಗೆ ಕಿರು ಸಂದೇಶ ಬರುತ್ತದೆ.

‘ಸಾರಿಗೆ ಸ್ಪಂದನ’ ಆರಂಭವಾಗಿ ಎರಡು ವರ್ಷಗಳಾಗಿವೆ. ಈವರೆಗೆ 3,792 ಅರ್ಜಿಗಳು ಸ್ವೀಕೃತವಾಗಿವೆ. ಒಟ್ಟು ಸಲ್ಲಿಕೆಯಾದ ಅರ್ಜಿಗಳ ಪೈಕಿ 3,429 ಅರ್ಜಿಗಳಿಗೆ ಪರಿಹಾರ ಕಲ್ಪಿಸಲಾಗಿದೆ. 129 ಅರ್ಜಿಗಳು ತಿರಸ್ಕೃತಗೊಂಡಿವೆ. 

ADVERTISEMENT

ಅಧಿಕಾರಿಗಳು, ಆಡಳಿತ ಸಿಬ್ಬಂದಿ, ಬಸ್‌ ಕಾರ್ಯಾಚರಣೆ ಸಿಬ್ಬಂದಿ, ಮೆಕ್ಯಾನಿಕ್ ಹಾಗೂ ನಿವೃತ್ತರು ಕೂಡಾ ‘ಸಾರಿಗೆ ಸ್ಪಂದನ’ ಜಾಲತಾಣದ ಮೂಲಕ ಮೇಲಧಿಕಾರಿಗಳಿಗೆ ಅರ್ಜಿ ಸಲ್ಲಿಸಬಹುದು. ದೂರುಗಳು ಹಾಗೂ ವಿವಿಧ ಅರ್ಜಿಗಳ ನಿರ್ವಹಣೆಗೆ ಹುಬ್ಬಳ್ಳಿಯ ವಾಯವ್ಯ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಪ್ರತ್ಯೇಕ ಅಧಿಕಾರಿಗಳಿದ್ದಾರೆ. ಅರ್ಜಿ ಸಲ್ಲಿಕೆಯಾದ ತಕ್ಷಣ ಸಂಬಂಧಿಸಿದ ವಿಭಾಗ, ಡಿಪೊಗಳಿಗೆ ವಿಚಾರಿಸುವ ವ್ಯವಸ್ಥೆ ಇದೆ. 

ಉದ್ಯೋಗಿಗಳಿಗೆ ಮೊಬೈಲ್‌ ಆ್ಯಪ್‌: ಸಂಸ್ಥೆಯ ಉದ್ಯೋಗಿಗಳಿಗೆ ಬೆರಳ ತುದಿಯಲ್ಲೇ ಉದ್ಯೋಗ ಸಂಬಂಧಿತ ಸೌಲಭ್ಯ ಮತ್ತು ಮಾಹಿತಿ ದೊರಕಿಸಲು ‘ವಾಯವ್ಯ ಸ್ನೇಹಿ’ ಹೆಸರಿನಲ್ಲಿ ಮೊಬೈಲ್‌ ಆ್ಯಪ್‌ವೊಂದನ್ನು ಅಭಿವೃದ್ಧಿ ಪಡಿಸಿದೆ.

ನಾಲ್ಕು ತಿಂಗಳಿಂದ ಆ್ಯಪ್‌ ಬಳಕೆಯಾಗುತ್ತಿದೆ. ಇದರಿಂದ ಸಂಸ್ಥೆಯ ಉದ್ಯೋಗಿಗಳು ಸಮಯದ ಉಳಿತಾಯವಾಗಿದೆ. ರಜೆ ಮಂಜೂರಾತಿ, ವೇತನ ಸಂಬಂಧಿ ಮಾಹಿತಿ, ಭವಿಷ್ಯನಿಧಿ ಮೊತ್ತ ಮಾಹಿತಿ, ಸಮಸ್ಯೆ ಹೇಳಿಕೊಳ್ಳಲು ಬಸ್‌ ಚಾಲಕರು, ನಿರ್ವಾಹಕರು ಮತ್ತು ಇತರೆ ಸಿಬ್ಬಂದಿ ಆಡಳಿತ ಕಚೇರಿ ಅಧಿಕಾರಿಗಳನ್ನು ಭೇಟಿ ಆಗಬೇಗಿಲ್ಲ. ಆ್ಯಪ್‌ ಮೂಲಕವೇ ಮನವಿ ಸಲ್ಲಿಸಬಹುದು.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ. ಅವರ ಮಾರ್ಗದರ್ಶನದಲ್ಲಿ ಪ್ರತಿ ವಿಭಾಗದಲ್ಲೂ ತಂತ್ರಜ್ಞಾನ ಅಳವಡಿಸಿದ್ದು, ಉದ್ಯೋಗಿಗಳಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ.

ಪ್ರಿಯಾಂಗಾ ಎಂ.
ಸಂಸ್ಥೆಯ ಸಿಬ್ಬಂದಿ ಹಾಗೂ ಅಧಿಕಾರಿಗಳ ಅನುಕೂಲಕ್ಕೆ ಸಿದ್ಧಪಡಿಸಲಾದ ‘ವಾಯವ್ಯ ಸ್ನೇಹಿ‘ ಮೊಬೈಲ್‌ ಅ್ಯಪ್‌ ಉಪಯುಕ್ತವಾಗಿದೆ. ಆ್ಯಪ್‌ನ್ನು ಎಲ್ಲರೂ ಮೊಬೈಲ್‌ ಫೋನ್‌ನಲ್ಲಿ ಡೌನ್‌ಲೋಡ್‌ ಮಾಡಿ ಬಳಸುತ್ತಾರೆ.
ಪ್ರಿಯಾಂಗಾ ಎಂ. ಎನ್‌ಡಬ್ಲುಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕಿ
ಎನ್‌ಡಬ್ಲುಕೆಆರ್‌ಟಿಸಿ ಅಭಿವೃದ್ಧಿಪಡಿಸಿದ ಮೊಬೈಲ್‌ ಆ್ಯಪ್‌ ನೋಟ
‘ಯುಪಿಐ ಅಳವಡಿಕೆ ಯಶಸ್ವಿ’
‘ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ವ್ಯಾಪ್ತಿ ಇರುವ ಆರು ಜಿಲ್ಲೆಗಳಲ್ಲೂ ಯುಪಿಎ ತಂತ್ರಜ್ಞಾನ ಯಶಸ್ವಿ ಆಗಿದೆ. ಕೆಲ ಪ್ರಯಾಣಿಕರು ಡಿಜಿಟಲ್‌ ಮೂಲಕ ಹಣ ಪಾವತಿಸುತ್ತಾರೆ. ಬಸ್‌ ನಿರ್ವಾಹಕರ ಬಳಿ ಕ್ಯುಆರ್‌ ಕೋಡ್‌ವುಳ್ಳ ಕಾರ್ಡ್‌ ಇರುತ್ತದೆ. ಯುಪಿಎ ಹಣಕಾಸು ನಿರ್ವಹಣೆಗೆ ಫೋನ್‌ಪೇ ಕಂಪೆನಿಯೊಂದಿಗೆ ವಾಯವ್ಯ ಸಾರಿಗೆ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಸಂಸ್ಥೆಗೆ ಹೆಚ್ಚುವರಿ ಹೊರೆಯಿಲ್ಲ’ ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.