ADVERTISEMENT

ವಿನಾಕಾರಣ ಶಾಲೆಗಳಿಗೆ ನೋಟಿಸ್: ಅರವಿಂದ ಮೇಟಿ

​ಪ್ರಜಾವಾಣಿ ವಾರ್ತೆ
Published 22 ಮೇ 2019, 11:47 IST
Last Updated 22 ಮೇ 2019, 11:47 IST
ಹುಬ್ಬಳ್ಳಿಯಲ್ಲಿ ನಡೆದ ಕರ್ನಾಟಕ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಟ್ರಸ್ಟ್‌ ಸಭೆಯಲ್ಲಿ ಸಂಘದ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಜಯರಾಮ್ ಮೆಣಸಗಿ ಮಾತನಾಡಿದರು– ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯಲ್ಲಿ ನಡೆದ ಕರ್ನಾಟಕ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಟ್ರಸ್ಟ್‌ ಸಭೆಯಲ್ಲಿ ಸಂಘದ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಜಯರಾಮ್ ಮೆಣಸಗಿ ಮಾತನಾಡಿದರು– ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಅನುದಾನ ರಹಿತ ಖಾಸಗಿ ಶಾಲೆಗಳಿಗೆ ಅಧಿಕಾರಿಗಳು ವಿನಾಕಾರಣ ನೋಟಿಸ್ ನೀಡಿ ತೊಂದರೆ ನೀಡುತ್ತಿದ್ದಾರೆ ಎಂದು ಉತ್ತರ ಕರ್ನಾಟಕ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಟ್ರಸ್ಟ್‌ (ಎನ್‌ಕುಸ್ಮಾ) ಅಧ್ಯಕ್ಷ ಅರವಿಂದ ಮೇಟಿ ದೂರಿದರು.

ಅನುದಾನ ರಹಿತ ಖಾಸಗಿ ಶಾಲೆಗಳಿಗೆ ಆಗುತ್ತಿರುವ ಅನ್ಯಾಯ, ಮಲತಾಯಿ ಧೋರಣೆ ಬಗ್ಗೆ ಚರ್ಚಿಸಲು ನಗರದಲ್ಲಿ ಬುಧವಾರ ಕರೆದಿದ್ದ ಸಭೆಯಲ್ಲಿ ಮಾತನಾಡಿದರು. ಒಂದೆಡೆ ಸರ್ಕಾರ ಶಾಲೆಗಳ ಪ್ರಗತಿಗೆ ಯಾವುದೇ ರೀತಿಯ ನೆರವು ನೀಡುತ್ತಿಲ್ಲ. ಅಧಿಕಾರಿಗಳು ಸಣ್ಣಪುಟ್ಟ ಲೋಪಗಳನ್ನು ಹುಡುಕಿ ನೋಟಿಸ್ ನೀಡುವ ಮೂಲಕ ಗದಾಪ್ರಹಾರ ನಡೆಸುತ್ತಿದ್ದಾರೆ ಎಂದರು.

ವಿದ್ಯಾರ್ಥಿಗಳ ಸಂಖ್ಯೆ 25ಕ್ಕಿಂತ ಕಡಿಮೆ ಇದೆ ಎಂದು ಹಲವು ಶಾಲೆಗಳಿಗೆ ನೋಟಿಸ್ ನೀಡಿದ್ದಾರೆ. ನಿಯಮದ ಪ್ರಕಾರ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ 25ಕ್ಕಿಂತ ಕಡಿಮೆ ಇದ್ದರೆ ನೋಟಿಸ್ ನೀಡಬಹುದು. ಆದರೆ ತರಗತಿಯ ವಿದ್ಯಾರ್ಥಿಗಳ ಸಂಖ್ಯೆ 25ಕ್ಕಿಂತ ಕಡಿಮೆಯಾದರೆ ನೋಟಿಸ್ ನೀಡುವಂತಿಲ್ಲ. ಆ ನೋಟಿಸ್‌ಗಳಿಗೆ ಸಂಘದ ವತಿಯಿಂದಲೇ ಉತ್ತರ ನೀಡಲಾಗಿದೆ ಎಂದು ಅವರು ಹೇಳಿದರು.

ADVERTISEMENT

ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಶಾಲೆಗಳು ದಾಖಲಾತಿ ಹೆಚ್ಚಿಸಲು ಆಂದೋಲನ ಮಾಡಿ. ಕರ ಪತ್ರ ಮುದ್ರಿಸಿ ಹಂಚಿ, ಕಿರು ಹೊತ್ತಗೆಗಳನ್ನು ನೀಡಿ. ಮನೆಗಳಿಗೆ ಭೇಟಿ ಸಹ ನೀಡಬಹುದು. ವಿದ್ಯಾರ್ಥಿಗಳ ಹೆಚ್ಚಳಕ್ಕೆ ಮಾಡಿದ ಪ್ರಯತ್ನಗಳ ದಾಖಲೀಕರಣ ಮಾಡಿ. ಒಂದು ಕಿ.ಮೀ ವ್ಯಾಪ್ತಿಗೊಂದರಂತೆ ಶಾಲೆಗಳು ಇರುವುದರಿಂದ ಸಹಜವಾಗಿಯೇ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿದೆ ಎಂದು ಅವರು ಹೇಳಿದರು.

ಪಠ್ಯಪುಸ್ತಕ ಪಡೆಯಲು ಆನ್‌ಲೈನ್‌ನಲ್ಲಿ ಹಣ ಪಾವತಿ ಮಾಡುವ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಸಂಕೀರ್ಣವಾಗಿರುವ ಆ ವ್ಯವಸ್ಥೆಯನ್ನು ಬದಲಾಯಿಸಬೇಕು. ಪಠ್ಯಪುಸ್ತಕಗಳಿಗೆ ಶೇ11ರಷ್ಟು ಹೆಚ್ಚುವರಿ ದರ ವಸೂಲಿ ಮಾಡಲಾಗಿದ್ದು, ಅದನ್ನು ಮರುಪವಾತಿ ಮಾಡಬೇಕು ಎಂದು ಒತ್ತಾಯಿಸಿದರು. ಎಲ್ಲ ಅನುದಾನ ರಹಿತ ಶಾಲೆಗಳು ಪಠ್ಯಪುಸ್ತಕಗಳನ್ನು ಆದಷ್ಟು ಬೇಗ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.

ಆರ್‌ಟಿಇ ಕಾಯ್ದೆಗೆ ತಿದ್ದುಪಡಿ ಮಾಡಿದ ಕಾರಣ ಆ ವಿದ್ಯಾರ್ಥಿಗಳು ಸಹ ಬರುತ್ತಿಲ್ಲ. ಆ ಪ್ರಕರಣ ಹೈಕೋರ್ಟ್‌ನಲ್ಲಿದ್ದು, ತೀರ್ಪು ಬರಬೇಕಿದೆ. ಆರ್‌ಟಿಇಯಡಿ ದಾಖಲಾದ ವಿದ್ಯಾರ್ಥಿಯ ಹಾಜರಾತಿ ಶೇ60ರಷ್ಟು ಇಲ್ಲದಿದ್ದರೆ, ಶುಲ್ಕವನ್ನು ಸರ್ಕಾರ ನೀಡುವುದಿಲ್ಲ. ವಿದ್ಯಾರ್ಥಿ ಬಿಟ್ಟು ಹೋದರೆ ಶಾಲೆ ಏನು ಮಾಡಲು ಸಾಧ್ಯ ಎಂದು ಅವರು ಪ್ರಶ್ನಿಸಿದರು.

ಎನ್‌ಕುಸ್ಮಾ ಗದಗ ಜಿಲ್ಲಾಧ್ಯಕ್ಷ ಜಯರಾಮ್ ಮೆಣಸಗಿ, ಸಂಘದ ಕಾರ್ಯದರ್ಶಿ ರಂಗಾರಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.