ADVERTISEMENT

ಪ್ರಚೋದನಕಾರಿ ಪೋಸ್ಟ್‌: ಹಳೇ ಹುಬ್ಬಳ್ಳಿ ಉದ್ವಿಗ್ನ, ಪೊಲೀಸರ ಮೇಲೆ ಕಲ್ಲು ತೂರಾಟ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2022, 21:06 IST
Last Updated 16 ಏಪ್ರಿಲ್ 2022, 21:06 IST
ಘಟನೆಯಲ್ಲಿ ಗಾಯಗೊಂಡ ಪೊಲೀಸ್ ಸಿಬ್ಬಂದಿ
ಘಟನೆಯಲ್ಲಿ ಗಾಯಗೊಂಡ ಪೊಲೀಸ್ ಸಿಬ್ಬಂದಿ   

ಹುಬ್ಬಳ್ಳಿ: ಮಸೀದಿಯ ಚಿತ್ರದ‌ ಮೇಲೆ ಭಗವಾಧ್ವಜ ಹಾರಿಸಿದ ಚಿತ್ರ ಎಡಿಟ್‌ ಮಾಡಿ ಯುವಕನೊಬ್ಬ ಸ್ಟೇಟಸ್‌ ಹಾಕಿಕೊಂಡಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಹಳೇ ಹುಬ್ಬಳ್ಳಿಯಲ್ಲಿ ಶನಿವಾರ ತಡರಾತ್ರಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

‘ತಲೆ ಕೆಟ್ಟರೆ ಇಲ್ಲೂ ಭಗವಾಧ್ವಜ ಹಾರಿಸುವೆ, ಜೈ ಶ್ರೀರಾಮ್‌, ಹಿಂದೂ ಸಾಮ್ರಾಟ್‌‘ ಎಂದು ಚಿತ್ರದ ಮೇಲೆ ಬರೆಯಲಾಗಿತ್ತು. ಇದು ವಿವಾದಕ್ಕೆ ಕಾರಣವಾಗಿದೆ. ಪೋಸ್ಟ್‌ ಮಾಡಿದ್ದ ಆರೋಪದ ಮೇಲೆ ಅಭಿಷೇಕ್‌ ಹಿರೇಮಠ ಎಂಬವನನ್ನು ಪೊಲೀಸರು ಬಂಧಿಸಿದ್ದಾರೆ.

ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆ ಸಮೀಪದಲ್ಲಿಯೇ ಕಲ್ಲುತೂರಾಟ ನಡೆದಿದ್ದು, ಸಮೀಪದ ಆಸ್ಪತ್ರೆ ಮೇಲೂ ದಾಳಿಯಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು. ಅಶ್ರುವಾಯು ಪ್ರಯೋಗಿಸಿದರು. ಘಟನೆಯಲ್ಲಿ ಪೊಲೀಸ್‌ ವಾಹನಗಳು ಜಖಂಗೊಂಡಿವೆ. ಕಲ್ಲು ತೂರಾಟದ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಣ ಕ್ರಮವಾಗಿ ನಿಷೇಧಾಜ್ಞೆ ವಿಧಿಸಲಾಗಿದೆ.

ADVERTISEMENT

ಕಲ್ಲು ತೂರಾಟ: ವಿಡಿಯೊ ವೈರಲ್‌ ಆಗುತ್ತಿದ್ದಂತೆ ಆಕ್ರೋಶಗೊಂಡ ಮುಸ್ಲಿಮರು ಕಲ್ಲು ತೂರಾಟ ಮಾಡಿದರು. ಇದನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಉದ್ವಿಗ್ನ ಗುಂಪಿನವರು ಪೊಲೀಸ್‌ ವಾಹನಗಳ ಮೇಲೆ ಕಲ್ಲು ಎಸೆದಿದ್ದಾರೆ. ಕಾನ್‌ಸ್ಟೆಬಲ್ ಗುರುಪಾದಪ್ಪ ಸ್ವಾದಿ, ಪೂರ್ವ ಸಂಚಾರ ಇನ್‌ಸ್ಪೆಕ್ಟರ್ ಕಾಡದೇವರಮಠ ಗಾಯಗೊಂಡಿದ್ದಾರೆ. ಸಾರ್ವಜನಿಕರಿಗೂ ಗಾಯಗಳಾಗಿವೆ.

ಪೊಲೀಸ್‌ ಕಮಿಷನರ್‌ ಲಾಭೂರಾಮ್‌ ಅವರು ಮುಸ್ಲಿಂ ಮುಖಂಡರ ಜೊತೆ ಸಮಾಲೋಚನೆ ನಡೆಸಿ ಪರಿಸ್ಥಿತಿ ತಿಳಿಗೊಳಿಸುವ ಯತ್ನ ಮಾಡಿದರು. ಘಟನೆ ಹಿನ್ನೆಲೆಯಲ್ಲಿ ಹಳೇ ಹುಬ್ಬಳ್ಳಿಯಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.

ಘಟನೆ ನಡೆದ ಸುತ್ತಲಿನ ಪ್ರದೇಶದಲ್ಲಿದ್ದ ಬೈಕ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಲಾಭೂರಾಮ್‌ ತಡರಾತ್ರಿವರೆಗೆ ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನೀಡಿದರು.

ನಿಯೋಜನೆ: ನಗರದ ಪ್ರಮುಖ ಧಾರ್ಮಿಕ ಸ್ಥಳಗಳ ಎದುರು ಹೆಚ್ಚುವರಿ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಭಾನುವಾರ ಹೊರ ಜಿಲ್ಲೆಗಳಿಂದಲೂ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಕರೆಸಿಕೊಳ್ಳಲು ಪೊಲೀಸ್ ಇಲಾಖೆ ನಿರ್ಧರಿಸಿದೆ.

ಮುಂಜಾಗ್ರತಾ ಕ್ರಮವಾಗಿ ಭದ್ರಾವತಿಯ ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ಕರೆಸಿಕೊಳ್ಳಲು ಪೊಲೀಸ್ ಇಲಾಖೆ ಮುಂದಾಗಿದೆ. ಭಾನುವಾರ ರಜೆ ಮೇಲೆ ಹೋದ ಸಿಬ್ಬಂದಿಗೂ ಕರ್ತವ್ಯಕ್ಕೆ ಮರಳಲು ಸೂಚಿಸಿದ್ದಾರೆ.

ದೂರು: ‘ವಿವಾದಾತ್ಮಕ ಸ್ಟೇಟಸ್‌ ವೇಗವಾಗಿ ವೈರಲ್ ಆಗಿತ್ತು. ಹುಬ್ಬಳ್ಳಿ ಅಂಜುಮನ್ ಸಮಿತಿಗೆ ಈ ಕುರಿತು ಸಂದೇಶ ಬಂದಾಗ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದೇವೆ. ಆರೋಪಿಯನ್ನು ಸಹ ಬಂಧಿಸಿದ್ದಾರೆ. ಎಲ್ಲರಿಗೂ ತಿಳಿವಳಿಕೆ ನೀಡಿದ್ದೇವೆ. ಆದರೂ, ಸಮುದಾಯದವರು ಒಮ್ಮಿಂದೊಮ್ಮೆಲೆ ಬಂದು ಗುಂಪು ಸೇರಿ ಗಲಾಟೆ ಆಗಿದೆ. ನಿಯಂತ್ರಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ. ನನಗೂ ಪೆಟ್ಟು ಬಿದ್ದಿದೆ. ಯಾರೂ ಕಾನೂನು ಕೈಗೊಳ್ಳಬಾರದು. ಕಾನೂನಾತ್ಮಕವಾಗಿ ಪ್ರತಿಭಟನೆ ನಡೆಸಿ ನ್ಯಾಯ ಕೇಳೋಣ. ಹುಬ್ಬಳ್ಳಿ ಧಾರವಾಡ ಶಾಂತವಾಗಿದೆ. ಅದನ್ನು ಮುಂದುವರಿಸಿಕೊಂಡು ಹೋಗೋಣ’ ಎಂದು ಹುಬ್ಬಳ್ಳಿ ಅಂಜುಮನ್ ಸಂಸ್ಥೆ ಉಪಾಧ್ಯಕ್ಷ ಅಲ್ತಾಫ್ ಕಿತ್ತೂರು ಹೇಳಿದರು.

ಶಾಂತಿ ಕಾಪಾಡಲು ಕಮಿಷನರ್‌ ಮನವಿ

‘ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್‌ ಮಾಡಿದ ವ್ಯಕ್ತಿಯನ್ನು ಈಗಾಗಲೇ ಬಂಧಿಸಲಾಗಿದೆ. ಆದರೆ, ಕೆಲವರು ಜನರನ್ನು ಸೇರಿಸಿದ್ದು ಎಲ್ಲರೊಂದಿಗೂ ನಾವು ಚರ್ಚೆಗೆ ಮುಂದಾದೆವು. ಆದರೆ, ಜನರ ಗುಂಪು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದಿದೆ’ ಎಂದು ಕಮಿಷನರ್‌ ಲಾಭೂರಾಮ್‌ ಮಾಧ್ಯಮಗಳಿಗೆ ತಿಳಿಸಿದರು.

ಗಲಾಟೆಯ ಹಿಂದಿರುವ ವ್ಯಕ್ತಿಗಳ ಬಗ್ಗೆಯೂ ತನಿಖೆ ನಡೆಸಲಾಗುವುದು. ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಎಲ್ಲರೂ ಶಾಂತಿ ಕಾಪಾಡಿಕೊಳ್ಳಲು ಒತ್ತು ಕೊಡಬೇಕು ಎಂದು ಮನವಿ ಮಾಡಿದರು.

ಎಫ್‌ಐಆರ್‌ನಲ್ಲಿ ಇರುವುದೇನು?

ಇಸ್ಲಾಂ ಧರ್ಮದ ಬಗ್ಗೆ ಅವಹೇಳನಕಾರಿಯಾಗುವ ರೀತಿಯಲ್ಲಿ ತನ್ನ ವಾಟ್ಸ್‌ಆ್ಯಪ್‌ನಲ್ಲಿ ಸ್ಟೇಟಸ್‌ ಹಾಕಿಕೊಂಡು ಧರ್ಮಗಳ ನಡುವೆ ವೈಷಮ್ಯ ಹುಟ್ಟಿಸಿ ಸಾರ್ವಜನಿಕ ಶಾಂತಿ ಭಂಗಪಡಿಸಲು ಪ್ರಯತ್ನಿಸಿದ್ದು, ಆರೋಪಿ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಳೇ ಹುಬ್ಬಳ್ಳಿಯ ತಬೀಬ್‌ ಲ್ಯಾಂಡ್‌ನ ಮೊಹಮ್ಮದ್‌ ಅಜರ್‌ ಬೇಲೇರಿ ಎಂಬುವರು ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ಶನಿವಾರ ಎಫ್‌ಐಆರ್‌ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.