ADVERTISEMENT

ಸೋಮವಾರ ರಾಷ್ಟ್ರಪತಿಗೆ ಹುಬ್ಬಳ್ಳಿ ಸಿದ್ಧಾರೂಢರ ಬೆಳ್ಳಿ ಮೂರ್ತಿ ನೀಡಿ ಪೌರ ಸನ್ಮಾನ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2022, 12:59 IST
Last Updated 24 ಸೆಪ್ಟೆಂಬರ್ 2022, 12:59 IST
ರಾಷ್ಟ್ರಪತಿ
ರಾಷ್ಟ್ರಪತಿ   

ಹುಬ್ಬಳ್ಳಿ: ‘ನಗರದಲ್ಲಿ ಇದೇ ಸೆ. 26ರಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ರಾಷ್ಟ್ರಪತಿ ದ್ರೌಪದಿಮುರ್ಮು ಅವರಿಗೆ 850 ಗ್ರಾಮ ತೂಕದ ಬೆಳ್ಳಿಯ ಸಿದ್ಧಾರೂಢ ಸ್ವಾಮೀಜಿ ಮೂರ್ತಿ, ಧಾರವಾಡ ಠಾಕೂರ ಪೇಡ ನೀಡಿ ಪೌರ ಸನ್ಮಾನ ಮಾಡಲಾಗುವುದು’ ಎಂದು ಮೇಯರ್‌ ಈರೇಶ ಅಂಚಟಗೇರಿ ತಿಳಿಸಿದರು.

‘ರಾಷ್ಟ್ರಪತಿ ಭವನದಲ್ಲಿ ಬೆಳ್ಳಿಮೂರ್ತಿ ಶಾಶ್ವತವಾಗಿ ಇರಲಿದ್ದು, ಧಾರವಾಡವನ್ನು ಪ್ರತಿನಿಧೀಸಲಿದೆ. ಇದಕ್ಕಾಗಿ ಮೂರ್ತಿಯ ತಳಭಾಗಕ್ಕೆ ಸೀಸಂ ಕಟ್ಟಿಗೆಯಿಂದ ವಿನ್ಯಾಸ ಮಾಡಲಾಗಿದೆ. ಅದರ ಜೊತೆ, ಸಿದ್ಧಾರೂಢ ಸ್ವಾಮೀಜಿ ಅವರ ಮಹಾತ್ಮೆ ಇರುವ ಇಂಗ್ಲಿಷ್‌ ಹಾಗೂ ಹಿಂದಿ ಪುಸ್ತಕ ನೀಡಲಾಗುವುದು’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ದೇಶಪಾಂಡೆನಗರದ ಜಿಮ್ಖಾನ ಮೈದಾನದಲ್ಲಿ ಬೃಹತ್‌ ಪೆಂಡಾಲ್‌ ಹಾಕಲಾಗಿದ್ದು, ಬಹುತೇಕ ಕೆಲಸ ಮುಕ್ತಾಯವಾಗಿದೆ. ಎನ್‌ಎಸ್‌ಜಿ ತಂಡ ಭೇಟಿ ನೀಡಿ ಕೆಲವಷ್ಟು ಮಾರ್ಪ‍ಆಡುಗಳನ್ನು ಮಾಡಲು ಸೂಚಿಸಿದೆ. ಸಾರ್ವಜನಿಕರಿಗಾಗಿ ಮೂರು ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಹೆಚ್ಚುವರಿಯಾಗಿ 1,500 ಆಸನಗಳನ್ನು ತೆಗೆದಿರಿಸಲಾಗಿದೆ. ಶಾಸಕರು, ಪಾಲಿಕೆ ಸದಸ್ಯರು, ಹಿಂದಿನ ಮೇಯರ್‌ ಸೇರಿದಂತೆ ಅವಳಿನಗರದ ಒಂದು ಸಾವಿರ ಗಣ್ಯರಿಗೆ ವಿಶೇಷ ಆಹ್ವಾನ ನೀಡಲಾಗಿದೆ. ಗುಜರಾತ್‌ ಭವನದ ಪ್ರವೇಶ ದ್ವಾರದಿಂದ ಗಣ್ಯರಿಗೆ ಹಾಗೂ ಸವಾಯಿ ಗಂಧರ್ವ ಸಭಾಭವನದ ಪ್ರವೇಶ ದ್ವಾರದಿಂದ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗುತ್ತಿದೆ’ ಎಂದು ತಿಳಿಸಿದರು.

ADVERTISEMENT

‘ರಾಷ್ಟ್ರಪತಿ ಅವರು ವಿಮಾನ ನಿಲ್ದಾಣದಿಂದ ಜಿಮ್ಖಾನ ಮೈದಾನಕ್ಕೆ 10 ನಿಮಿಷದಲ್ಲಿ ಬರಲಿದ್ದು, ಅದಕ್ಕೂ ಪೂರ್ವದ 15 ನಿಮಿಷ ಅವರು ಬರುವ ಮಾರ್ಗದಲ್ಲಿನ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗುವುದು. ಕಾರ್ಯಕ್ರಮ ಮುಗಿಸಿ ಹೋಗುವ ಪೂರ್ವದಲ್ಲಿ 10 ನಿಮಿಷ ಸ್ಥಗಿತಗೊಳಿಸಲಾಗುವುದು. ಸವಾಯಿ ಗಂಧರ್ವದ ಬಳಿಯ ನಾಲಾ ಹಾಗೂ ಗುಜರಾತ ಭವನದ ಬಳಿಯ ಜಿಮ್ಖಾನ ಮೈದಾನದ ಎದುರಿನ ರಸ್ತೆಯನ್ನು ಬೆಳಿಗ್ಗೆ 10ರಿಂದಲೇ ಸ್ಥಗಿತಗೊಳಿಸಲಾಗುವುದು’ ಎಂದರು.

‘ವೇದಿಕೆ ಮೇಲೆ ಯಾರ‍್ಯಾರಿಗೆ ಅವಕಾಶ ನೀಡಬೇಕು ಎನ್ನುವ ಕುರಿತು ರಾಷ್ಟ್ರಪತಿ ಭವನಕ್ಕೆ 27 ಮಂದಿಯ ಹೆಸರನ್ನು ಕಳುಹಿಸಿಕೊಡಲಾಗಿದೆ. ಶಿಷ್ಟಾಚಾರದ ಪ್ರಕಾರ ಕನಿಷ್ಠ 25 ಮಂದಿಗಾದರೂ ಅವಕಾಶ ನೀಡಬೇಕು ಎಂದು ವಿನಂತಿಸಿದ್ದೇವೆ. ಪಟ್ಟಿ ಇನ್ನೂ ಅಂತಿಮವಾಗಿಲ್ಲ. ಒಂದು ವೇಳೆ ಸೀಮಿತ ಮಂದಿಗಷ್ಟೇ ಅವಕಾಶ ನೀಡಿದರೆ, ಮತ್ತೊಮ್ಮೆ ವಿನಂತಿಸಿಕೊಳ್ಳುತ್ತೇವೆ’ ಎಂದು ಮೇಯರ್‌ ಈರೇಶ ತಿಳಿಸಿದರು.

ಉಪ ಮೇಯರ್‌ ಉಮಾ ಮುಕುಂದ, ಪಾಲಿಕೆ ಸದಸ್ಯರಾದ ಸಂತೋಷ ಚವ್ಹಾಣ್‌, ರೂಪಾ ಶೆಟ್ಟಿ, ತಿಪ್ಪಣ್ಣ ಮಜ್ಜಗಿ, ವೀರಣ್ಣ ಸವಡಿ, ದೊರೆರಾಜ ಮಣಿಕುಂಟ್ಲ ಇದ್ದರು.

ಎಲ್ಲವೂ ಪಾರದರ್ಶಕ: ಆಯುಕ್ತ

‘ಪೌರ ಸನ್ಮಾನ ಕಾರ್ಯಕ್ರಮಕ್ಕೆ ₹1.30 ಕೋಟಿ ವೆಚ್ಚ ಮಾಡಲಾಗುತ್ತಿದ್ದು, ನಿರ್ಮಿತಿ ಕೇಂದ್ರಕ್ಕೆ ಗುತ್ತಿಗೆ ನೀಡಲಾಗಿದೆ. ₹64 ಲಕ್ಷ ವೆಚ್ಚದಲ್ಲಿ ಪೆಂಡಾಲ್‌ ನಿರ್ಮಿಸಲಾಗಿದೆ. ತುರ್ತು ಸಂದರ್ಭದಲ್ಲಿ ನಿರ್ಮಿತಿ ಕೇಂದ್ರದ ಮೂಲಕ ₹2 ಕೋಟಿವರೆಗೆ ವೆಚ್ಚ ಮಾಡಲು ಅವಕಾಶವಿದೆ. ಟೆಂಡರ್‌ ಕರೆದರೆ ಎಷ್ಟು ವೆಚ್ಚವಾಗಬಹುದು ಎನ್ನುವ ನಿಟ್ಟಿನಲ್ಲಿ ಜಾಹೀರಾತು ನೀಡಲಾಗಿದೆ. ಎಲ್ಲವೂ ಪಾರದರ್ಶಕವಾಗಿಯೇ ನಡೆಯುತ್ತಿದೆ’ ಎಂದು ಪಾಲಿಕೆ ಆಯುಕ್ತ ಗೋಪಾಲಕೃಷ್ಣ ಬಿ. ಹೇಳಿದರು.

ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಮೇಯರ್‌ ಗೌನ್‌ ಧರಿಸಬಾರದು ಎಂದು ನಿರ್ಧರಿಸಿದ್ದೇನೆ. ಗೌರ ಯಾಕೆ ಧರಿಸುತ್ತಿಲ್ಲ ಎನ್ನುವ ಕುರಿತು ಸರ್ಕಾರಕ್ಕೆ ತಿಳಿಸಿದ್ದೇನೆ. ಅಲ್ಲಿಂದ ಆದೇಶ ಬಂದರೆ ಧರಿಸುತ್ತೇನೆ
–ಈರೇಶ ಅಂಚಟಗೇರಿ, ಮೇಯರ್‌

ಜಿಮ್ಖಾನ ಮೈದಾನ ವಿವಾದಿತ ಸ್ಥಳವಲ್ಲ. ಈಗಾಗಲೇ ಇಲ್ಲಿ ವಿಜಯಪುರ ಸಿದ್ಧೇಶ್ವರ ಸ್ವಾಮೀಜಿ ಅವರ ಪ್ರವಚನ ಸೇರಿದಂತೆ ಸಾಕಷ್ಟು ಕಾರ್ಯಕ್ರಮಗಳು ನಡೆದಿವೆ. ಶಿಷ್ಟಾಚಾರ ಉಲ್ಲಂಘನೆ ಆಗುತ್ತಿಲ್ಲ
–ಜಗದೀಶ ಶೆಟ್ಟರ್‌, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.