ADVERTISEMENT

ಧಾರವಾಡ | ಆ್ಯಪ್‌ ಬಳಸಿ ರೈತರಿಂದಲೇ ಸಮೀಕ್ಷೆ: 1 ಲಕ್ಷ ಹಿಡುವಳಿ ಸಮೀಕ್ಷೆ

; ಗರಿಷ್ಠ, ಅಳ್ನಾವರ ಕನಿಷ್ಠ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2020, 6:19 IST
Last Updated 3 ಸೆಪ್ಟೆಂಬರ್ 2020, 6:19 IST
ಧಾರವಾಡ ತಾಲ್ಲೂಕಿನ ಅಮ್ಮಿನಬಾವಿಯಲ್ಲಿ ಮೊಬೈಲ್ ಆ್ಯಪ್‌ ಮೂಲಕ ಬೆಳೆ ಸಮೀಕ್ಷೆ ಮಾಡಲು ರೈತರಿಗೆ ಕೃಷಿ ಇಲಾಖೆ ನಿರ್ದೇಶಕ ಡಾ.ಬಿ. ಶ್ರೀನಿವಾಸ್ ಮತ್ತು ಜಂಟಿ ನಿರ್ದೇಶಕ ಐ.ಬಿ. ರಾಜಶೇಖರ ಮಾರ್ಗದರ್ಶನ ನೀಡಿದರು
ಧಾರವಾಡ ತಾಲ್ಲೂಕಿನ ಅಮ್ಮಿನಬಾವಿಯಲ್ಲಿ ಮೊಬೈಲ್ ಆ್ಯಪ್‌ ಮೂಲಕ ಬೆಳೆ ಸಮೀಕ್ಷೆ ಮಾಡಲು ರೈತರಿಗೆ ಕೃಷಿ ಇಲಾಖೆ ನಿರ್ದೇಶಕ ಡಾ.ಬಿ. ಶ್ರೀನಿವಾಸ್ ಮತ್ತು ಜಂಟಿ ನಿರ್ದೇಶಕ ಐ.ಬಿ. ರಾಜಶೇಖರ ಮಾರ್ಗದರ್ಶನ ನೀಡಿದರು   

ಹುಬ್ಬಳ್ಳಿ: ಸ್ಮಾರ್ಟ್‌ ಫೋನ್‌ ಬಳಸಿ ‘ಬೆಳೆ ಸಮೀಕ್ಷೆ ಆ್ಯಪ್’ ಮೂಲಕ ರೈತರೇ ಸ್ವತಃ ಸಮೀಕ್ಷೆ ಮಾಡುವ ಕಾರ್ಯ ಜಿಲ್ಲೆಯಲ್ಲಿ ಭರದಿಂದ ಸಾಗಿದೆ. ಜಿಲ್ಲೆಯಲ್ಲಿರುವ 2.98 ಲಕ್ಷ ಕೃಷಿ ಹಿಡುವಳಿಗಳ ಪೈಕಿ, ಕಳೆದ 22 ದಿನಗಳಲ್ಲಿ (ಸೆ.2ರವರೆಗೆ) 1 ಲಕ್ಷ ಹಿಡುವಳಿಗಳ ಸಮೀಕ್ಷೆ ಪೂರ್ಣಗೊಂಡಿದೆ. ಧಾರವಾಡ ತಾಲ್ಲೂಕು ಅತಿ ಹೆಚ್ಚು 66,650 ಹಿಡುವಳಿಗಳನ್ನು ಹೊಂದಿದ್ದು, ಇದರಲ್ಲಿ 22,872 ಸಮೀಕ್ಷೆಯಾಗಿದೆ. ಅತಿ ಕಡಿಮೆ 5,807 ಹಿಡುವಳಿ ಹೊಂದಿರುವ ಅಳ್ನಾವರ ತಾಲ್ಲೂಕಿನಲ್ಲಿ 1,742 ಸಮೀಕ್ಷೆಗೆ ಒಳಪಟ್ಟಿವೆ.

ಬಹುಪಯೋಗಿ

‘ಬೆಳೆ ಸಮೀಕ್ಷೆ ವೈಜ್ಞಾನಿಕವಾಗಿ ಮತ್ತು ನಿಖರವಾಗಿರಬೇಕು ಎಂಬ ಉದ್ದೇಶದಿಂದ, ರೈತರೇ ಮೊಬೈಲ್ ಆ್ಯಪ್‌ನಲ್ಲಿ ತಮ್ಮ ಬೆಳೆ ಸಮೀಕ್ಷೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆ್ಯಪ್‌ ಮೂಲಕ ಸಂಗ್ರಹಿಸುವ ಬೆಳೆ ಮಾಹಿತಿಯನ್ನು ವಿವಿಧ ಯೋಜನೆಗಳು, ಬೆಳೆ ಪರಿಹಾರ, ಬೆಂಬಲ ಬೆಲೆ, ಉತ್ಪಾದನೆಯ ಲೆಕ್ಕಾಚಾರಗಳಿಗೂ ಈ ಮಾಹಿತಿ ಬಳಕೆಯಾಗಲಿದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಐ.ಬಿ. ರಾಜಶೇಖರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ADVERTISEMENT

‘ಮುಂಚೆ ಬೆಳೆ ಮಾಹಿತಿಯನ್ನು ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ದಾಖಲಿಸಬೇಕಿತ್ತು. ಈಗ ರೈತರು ನೀಡುವ ಸಮೀಕ್ಷೆಯ ಮಾಹಿತಿ ‘ಭೂಮಿ’ ತಂತ್ರಾಂಶಕ್ಕೆ ನೇರವಾಗಿ ಹೋಗಿ, ಪಹಣಿಯಲ್ಲಿ ದಾಖಲಾಗುತ್ತದೆ. ಇದರಿಂದ, ರೈತರು ಪಹಣಿ ಪತ್ರದಲ್ಲಿ ತಪ್ಪಾಗಿದೆ ಎಂದು ದೂರುವಂತಿಲ್ಲ’ ಎಂದು ತಿಳಿಸಿದರು.

‘ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲೂ ಸಮೀಕ್ಷೆ ನಡೆಯುತ್ತಿದೆ. ಈ ಕುರಿತು ರೇಡಿಯೊ, ಟಿ.ವಿ ಸೇರಿದಂತೆ ಎಲ್ಲಾ ಮಾಧ್ಯಮಗಳ ಮೂಲಕ ಸರ್ಕಾರ ವ್ಯಾಪಕ ಪ್ರಚಾರ ಮಾಡುತ್ತಿದೆ. ಪ್ರತಿ ತಾಲ್ಲೂಕಿನಲ್ಲಿ ಟ್ಯಾಬ್ಲೊ ವಾಹನದ ಮೂಲಕ ಪ್ರಚಾರ ಕಾರ್ಯ ನಡೆಯುತ್ತಿದೆ’ ಎಂದು ಮಾಹಿತಿ ನೀಡಿದರು.

ಬೇರೆಯವರ ಮೊಬೈಲ್‌ನಿಂದಲೂ ಮಾಡಬಹುದು

‘ಸ್ಮಾರ್ಟ್‌ ಫೋನ್‌ ಹೊಂದಿಲ್ಲದ ರೈತರು, ಬೇರೆಯವರ ಮೊಬೈಲ್‌ನಿಂದಲೂ ಸಮೀಕ್ಷೆ ಮಾಡಬಹುದು. ಆ್ಯಪ್‌ನಲ್ಲಿ ರೈತರು ತಮ್ಮ ಮೊಬೈಲ್ ಸಂಖ್ಯೆ ನಮೂದಿಸಿ ಸಮೀಕ್ಷೆ ಮಾಡಬೇಕು’ ಎಂದು ಐ.ಬಿ. ರಾಜಶೇಖರ ಹೇಳಿದರು.

‘ಆರಂಭದಲ್ಲಿ ಆಗಸ್ಟ್‌ 10ರಿಂದ 24ರೊಳಗೆ ಸಮೀಕ್ಷೆ ಮಾಡಬೇಕು ಎಂದು ನಿಗದಿಪಡಿಸಲಾಗಿತ್ತು. ಆದರೆ, ರೈತರ ಪಾಲ್ಗೊಳ್ಳುವಿಕೆ ಕಡಿಮೆ ಇದ್ದಿದ್ದರಿಂದ ಅವಧಿಯನ್ನು ಸೆ. 23ರವರೆಗೆ ವಿಸ್ತರಿಸಲಾಗಿದೆ’ ಎಂದರು.

***

ರೈತರು ಬೆಳೆ ಸಮೀಕ್ಷೆಗೆ ಒಂದು ದಿನ ಮೀಸಲಿಟ್ಟು, ಆ್ಯಪ್‌ನಲ್ಲಿ ಪ್ರತಿ ಅಂಶವನ್ನು ದಾಖಲಿಸಬೇಕು. ಅನುಮಾನಗಳಿದ್ದರೆ ಸ್ಥಳೀಯ ಕೃಷಿ, ಕಂದಾಯ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬೇಕು
– ಐ.ಬಿ. ರಾಜಶೇಖರ, ಜಂಟಿ ನಿರ್ದೇಶಕ, ಕೃಷಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.