ADVERTISEMENT

ಈರುಳ್ಳಿ ಬೆಳೆ ಹಾನಿ: ರೈತರಿಗೆ ಸಂಕಷ್ಟ

ನಿರಂತರ ಮಳೆಯಿಂದ ಬೆಳೆಗೆ ಕೊಳೆರೋಗ । ಬೆಳೆ ರಕ್ಷಣೆಗೆ ಔಷಧಿ ಸಿಂಪಡಿಸಲು ಮುಂದಾದ ರೈತರು

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 17:48 IST
Last Updated 30 ಆಗಸ್ಟ್ 2025, 17:48 IST
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಚಿಗಟೇರಿಯಲ್ಲಿ ಸುಳಿರೋಗ ಬಾಧಿತ ಈರುಳ್ಳಿ
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಚಿಗಟೇರಿಯಲ್ಲಿ ಸುಳಿರೋಗ ಬಾಧಿತ ಈರುಳ್ಳಿ   

ಹುಬ್ಬಳ್ಳಿ: ಧಾರವಾಡ, ವಿಜಯಪುರ, ವಿಜಯನಗರ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಅತಿವೃಷ್ಟಿ ಹಾಗೂ ತೇವಾಂಶ ಹೆಚ್ಚಳದಿಂದಾಗಿ ಅಪಾರ ಪ್ರಮಾಣದಲ್ಲಿ ಈರುಳ್ಳಿ ಬೆಳೆ ಹಾನಿಯಾಗಿದ್ದು, ರೈತರು ನಷ್ಟಕ್ಕೆ ಒಳಗಾಗಿದ್ದಾರೆ. 

ಧಾರವಾಡ ಜಿಲ್ಲೆಯಲ್ಲಿ ಸತತ ಮಳೆಯಿಂದಾಗಿ ಸುಮಾರು 2,920 ಹೆಕ್ಟೇರ್‌ನಲ್ಲಿ ಈರುಳ್ಳಿ ಬೆಳೆ ಹಾನಿಯಾಗಿದೆ. ಧಾರವಾಡ ಸೇರಿದಂತೆ ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ ತಾಲ್ಲೂಕುಗಳಲ್ಲಿ ಬೆಳೆ ಹಾನಿಯಾಗಿದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ವಿಜಯಪುರ ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿಯುತ್ತಿರುವ ಮಳೆ ಹಾಗೂ ಡೋಣಿ ನದಿ ಪ್ರವಾಹದಿಂದ ಅಂದಾಜು 370 ಹೆಕ್ಟೇರ್‌ ಈರುಳ್ಳಿ ಬೆಳೆ ಹಾನಿಯಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರಾಹುಲ್ ಕುಮಾರ್ ಬಾವಿದೊಡ್ಡಿ ತಿಳಿಸಿದ್ದಾರೆ.

ADVERTISEMENT

‘ಜಿಲ್ಲೆಯಲ್ಲಿ 16 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಒಂದೂವರೆ ತಿಂಗಳ ಹಿಂದೆ ಈರುಳ್ಳಿ ಬಿತ್ತನೆಯಾಗಿತ್ತು. ನಿರಂತರ ಮಳೆ ಹಾಗೂ ಡೋಣಿ ನದಿ ಪ್ರವಾಹದಿಂದ ನದಿ ತೀರದ ಹೊಲಗಳಲ್ಲಿಯೂ ನೀರು ನಿಂತು ಈರುಳ್ಳಿ ಕೊಳೆತು ಹೋಗಿದೆ’ ಎಂದು ಹೇಳಿದರು.

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಚಿಗಟೇರಿ ಹೋಬಳಿ ವ್ಯಾಪ್ತಿಯಲ್ಲಿ ತೇವಾಂಶ ಹೆಚ್ಚಳವಾಗಿ 60 ಎಕರೆ ಈರುಳ್ಳಿ ಬೆಳೆಗೆ ಸುಳಿ ರೋಗ ಬಾಧಿಸಿದೆ.

ಚಿಗಟೇರಿ, ಬೆಣ್ಣಿಹಳ್ಳಿ, ನಜೀರ ನಗರ, ಫೃಥ್ವೇಶ್ವರ, ನಿಲುವಂಜಿ, ಮತ್ತಿಹಳ್ಳಿ, ಗೌರಿಪುರ, ಬಳಿಗನೂರು, ಮೈದೂರು ವ್ಯಾಪ್ತಿಯಲ್ಲಿ ಸುಳಿ ಹಾಗೂ ಕೊಳೆ ರೋಗ ಕಾಣಿಸಿದೆ. ಬೆಳೆ ರಕ್ಷಣೆಗೆ ರೈತರು ಔಷಧಿ ಸಿಂಪಡಿಸುತ್ತಿದ್ದಾರೆ. ಮಳೆ ಮುಂದುವರಿದರೆ ಭೂಮಿಯಲ್ಲಿ ತೇವಾಂಶ ಹೆಚ್ಚಿ ಇಳುವರಿ ಇರುವುದಿಲ್ಲ ಎಂದು ರೈತರು ತಿಳಿಸಿದ್ದಾರೆ.

ಹೂವಿನಹಡಗಲಿ ತಾಲ್ಲೂಕಿನಲ್ಲಿ ಈರುಳ್ಳಿ ಬೆಳೆಗೆ ಕೊಳೆರೋಗ ಕಾಣಿಸಿಕೊಂಡಿದೆ. ತಾಲ್ಲೂಕಿನಲ್ಲಿ 1,500 ಎಕರೆಯಲ್ಲಿ ಮುಂಗಾರು ಈರುಳ್ಳಿ ಬಿತ್ತನೆಯಾಗಿದೆ. ಇಟ್ಟಿಗಿ ಹೋಬಳಿಯಲ್ಲಿ ಹೆಚ್ಚು ಈರುಳ್ಳಿ ಕ್ಷೇತ್ರವಿದ್ದು, ಕೆಂಪು ಮಸಾರಿಗಿಂತ ಕಪ್ಪು ಎರೆಭೂಮಿಯಲ್ಲಿನ ಬೆಳೆ ರೋಗಕ್ಕೆ ತುತ್ತಾಗಿದೆ. ಇಟ್ಟಿಗಿ, ಉತ್ತಂಗಿ, ಮುಸುವಿನ ಕಲ್ಲಹಳ್ಳಿಯ ಆಯ್ದ ಭಾಗಗಳಲ್ಲಿ ಕೊಳೆ ರೋಗ ಕಾಣಿಸಿಕೊಂಡಿದ್ದು, ರೈತರನ್ನು ಚಿಂತೆಗೀಡು ಮಾಡಿದೆ.

‘ಜಿಟಿ ಜಿಟಿ ಮಳೆಯಿಂದಾಗಿ ವಾತಾವರಣದಲ್ಲಿ ತೇವಾಂಶ ಹೆಚ್ಚಳವಾಗಿ ಈರುಳ್ಳಿಗೆ ಥ್ರಿಫ್ಸ್ ನುಸಿಬಾಧೆ (ಕೊಳೆರೋಗ) ಕಾಣಿಸಿಕೊಂಡಿದೆ. ತಡವಾಗಿ ಬಿತ್ತನೆಯಾದ ಬೆಳೆ ಮತ್ತು ರೋಗಕ್ಕೆ ತುತ್ತಾಗದೇ ಇರುವ ಬೆಳೆಗಳಿಗೆ ಶಿಫಾರಸು ಮಾಡಿರುವ ಕೀಟನಾಶಕ ಸಿಂಪಡಿಸಿದರೆ ರೋಗ ಹತೋಟಿಗೆ ಬರುತ್ತದೆ’ ಎಂದು ಎಂದು ಕೃಷಿ ವಿಜ್ಞಾನಿಗಳು ಹೇಳುತ್ತಾರೆ.

ಸತತ ಮಳೆ ಹಾಗೂ ನದಿಗಳ ಪ್ರವಾಹದಿಂದ ಬೆಳಗಾವಿ ಜಿಲ್ಲೆಯಲ್ಲಿ 1,368 ಹೆಕ್ಟೇರ್ ಈರುಳ್ಳಿ ಬೆಳೆ ಹಾನಿಯಾಗಿದೆ. ತೋಟಗಾರಿಕೆ, ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಮತ್ತೊಮ್ಮೆ ಜಂಟಿ ಸಮೀಕ್ಷೆ ನಡೆಸಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಹಾಂತೇಶ ಮುರಗೋಡ ಹೇಳುತ್ತಾರೆ. 

ಹೂವಿನಹಡಗಲಿ ತಾಲ್ಲೂಕು ಇಟ್ಟಿಗಿಯಲ್ಲಿ ಕೊಳೆರೋಗ ಕಾಣಿಸಿಕೊಂಡಿರುವ ಈರುಳ್ಳಿ ಬೆಳೆಯನ್ನು ಕೃಷಿ ವಿಜ್ಞಾನಿಗಳು ಪರಿಶೀಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.