ADVERTISEMENT

ಕಿಮ್ಸ್‌ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 7 ಒಪಿಡಿ ಆರಂಭ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 14:31 IST
Last Updated 22 ಆಗಸ್ಟ್ 2019, 14:31 IST

ಹುಬ್ಬಳ್ಳಿ: ಇಲ್ಲಿನ ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೊರ ರೋಗಿಗಳ ಚಿಕಿತ್ಸಾ ವಿಭಾಗವನ್ನು (ಒಪಿಡಿ) ಆರಂಭಿಸಲಾಗಿದೆ. ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ವೈದ್ಯರು ರೋಗಿಗಳ ತಪಾಸಣೆ ನಡೆಸುತ್ತಿದ್ದಾರೆ.

ಪ್ಲಾಸ್ಟಿಕ್ ಸರ್ಜರಿ, ಅಂಕಾಲಜಿ, ಪಿಡಿಯಾಟ್ರಿಕ್ ಸರ್ಜರಿ, ಗ್ಯಾಸ್ಟ್ರೋಎಂಟರಾಲಜಿ, ಆರ್ಥೊಪೆಡಿಕ್, ಆಪ್ತಾಮಲಾಜಿ, ಜನರಲ್ ಮೆಡಿಸಿನ್ ಸೇರಿದಂತೆ ಒಟ್ಟು ಏಳು ಒಪಿಡಿ ವಿಭಾಗಗಗಳು ಕಾರ್ಯಾರಂಭಿಸಿವೆ. ಇದರೊಂದಿಗೆ ಇಂಜೆಕ್ಷನ್, ಡ್ರೆಸ್ಸಿಂಗ್, ಕನ್ಸಲ್ಟಿಂಗ್ ಕೊಠಡಿ, ಲ್ಯಾಬ್ ಹಾಗೂ ಫಾರ್ಮಸಿ ವಿಭಾಗಗಳನ್ನು ಸಹ ತೆರೆಯಲಾಗಿದೆ.

‘ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆರಂಭಿಸಿರುವ ಒಪಿಡಿಯಲ್ಲಿ ಕಿಮ್ಸ್‌ ವೈದ್ಯರೇ ರೋಗಿಗಳ ತಪಾಸಣೆ ಮಾಡುತ್ತಿದ್ದಾರೆ. ಅಗತ್ಯವಿರುವವರಿಗೆ ಕಿಮ್ಸ್‌ಗೆ ದಾಖಲಾಗುವಂತೆ ಸೂಚಿಸುತ್ತಿದ್ದಾರೆ’ ಎಂದು ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಆಸ್ಪತ್ರೆಗೆ ಅಗತ್ಯವಿರುವ 233 ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಸಿಬ್ಬಂದಿ ನೇಮಕಗೊಂಡ ಬಳಿಕ ಎಲ್ಲಾ ಸೇವೆಗಳು ದೊರೆಯಲಿವೆ. ಸದ್ಯದಲ್ಲೇ ನ್ಯೂರಾಲಜಿ ಮತ್ತು ನೆಪ್ರೋಲಾಜಿ ವಿಭಾಗವನ್ನು ಸಹ ಆರಂಭಿಸಲಾಗುವುದು’ ಎಂದು ಹೇಳಿದರು.

₹150 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ 200 ಹಾಸಿಗೆ ಸಾಮರ್ಥ್ಯದ ಈ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 6ರಂದು ಉದ್ಘಾಟಿಸಿದ್ದರು. ಆಸ್ಪತ್ರೆಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ರೋಗಿಗಳ ವಾರ್ಡ್‌ ಮತ್ತು ಶಸ್ತ್ರಚಿಕಿತ್ಸೆ ಕೊಠಡಿಗಳಿಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ವೈದ್ಯಕೀಯ ಉಪಕರಣಗಳ ಅಳವಡಿಕೆ ಅಂತಿಮ ಹಂತದಲ್ಲಿದೆ. ಆಸ್ಪತ್ರೆ ನಿರ್ಮಾಣದ ಹೊಣೆ ಹೊತ್ತಿರುವ ಕಂಪನಿ ಸದ್ಯದಲ್ಲೇ ಆಸ್ಪತ್ರೆಯನ್ನು ಕಿಮ್ಸ್ ಆಡಳಿತ ಮಂಡಳಿಗೆ ಹಸ್ತಾಂತರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.