ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರಿಗೆ ನೇರ ವೇತನ ನೀಡುವಂತೆ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಆದೇಶಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ನೇರ ವೇತನದಿಂದ ಹೊರಗುಳಿದಿರುವ 799 ಪೌರಕಾರ್ಮಿಕರನ್ನು ನೇರ ವೇತನಕ್ಕೆ ಒಳಪಡಿಸುವಂತೆ 2023ರ ಅ.30ರಂದು ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಠರಾವು ಪಾಸು ಮಾಡಿ, ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು.
ಪಾಲಿಕೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು 700 ಜನಸಂಖ್ಯೆಗೆ ಒಬ್ಬರಂತೆ ನೇರ ನೇಮಕಾತಿ ಮಾಡಿಕೊಂಡು, ಪಾಲಿಕೆಯಿಂದಲೇ ಸಂಭಾವನೆ ನೀಡುವಂತೆ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.
ವಲಯ ಆಯುಕ್ತರು ತಮ್ಮ ಹಂತದಲ್ಲಿ ಸೆ.30ರಿಂದ ಜಾರಿಗೆ ಬರುವಂತೆ ಸ್ವಚ್ಛತಾ ಗುತ್ತಿಗೆದಾರರಿಗೆ ನೀಡಿದ್ದ ಕಾರ್ಯಾದೇಶವನ್ನು ರದ್ದುಪಡಿಸಬೇಕು ಎಂದು ಸೂಚಿಸಿದ್ದಾರೆ. ಸ್ವಚ್ಛತಾ ಕಾರ್ಯವನ್ನು ಹೊರಗುತ್ತಿಗೆ ಮೂಲಕ ನಿರ್ವಹಿಸುವುದನ್ನು ಸ್ಥಗಿತಗೊಳಿಸುವಂತೆ 2017ರಲ್ಲೇ ಸರ್ಕಾರ ಆದೇಶಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.