ADVERTISEMENT

ಅಂತರ ಕ್ಲಬ್‌ ಟೂರ್ನಿಯತ್ತ ಸಂಘಟಕರ ಚಿತ್ತ

ಫ್ರಾಂಚೈಸ್‌ ಆಧಾರಿತ ಕ್ರಿಕೆಟ್‌ ಟೂರ್ನಿಗಳಿಗೆ ಕೆಎಸ್‌ಸಿಎ ಅನುಮತಿ ರದ್ದು ಹಿನ್ನೆಲೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2019, 12:07 IST
Last Updated 3 ಡಿಸೆಂಬರ್ 2019, 12:07 IST
ಎಚ್‌ಪಿಎಲ್‌ ಜೂನಿಯರ್ಸ್‌
ಎಚ್‌ಪಿಎಲ್‌ ಜೂನಿಯರ್ಸ್‌   

ಹುಬ್ಬಳ್ಳಿ: ಕೆಪಿಎಲ್‌ ಕ್ರಿಕೆಟ್‌ ಟೂರ್ನಿಯ ಫಿಕ್ಸಿಂಗ್‌ ಪ್ರಕರಣದ ಕುರಿತು ತನಿಖೆ ಪೂರ್ಣಗೊಳ್ಳುವ ತನಕ ಫ್ರಾಂಚೈಸ್ ಆಧಾರಿತ ಟೂರ್ನಿಗಳಿಗೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಅನುಮತಿ ರದ್ದು ಮಾಡಿರುವ ಕಾರಣ ಹುಬ್ಬಳ್ಳಿ ಪ್ರೀಮಿಯರ್‌ ಲೀಗ್‌ (ಎಚ್‌ಪಿಎಲ್‌) ಟೂರ್ನಿಗಳ ಸಂಘಟಕರು ಅಂತರ ಕ್ಲಬ್‌ ಟೂರ್ನಿಗಳತ್ತ ಚಿತ್ತ ಹರಿಸಿದ್ದಾರೆ.

ಬಿಡಿಕೆ ಸ್ಪೋರ್ಟ್ಸ್‌ ಫೌಂಡೇಷನ್‌ ಮೂರು ವರ್ಷಗಳಿಂದ ಎಚ್‌ಪಿಎಲ್‌ ಟೂರ್ನಿ ನಡೆಸಿಕೊಂಡು ಬಂದಿದೆ. ಈ ಟೂರ್ನಿಯ ಹಿಂದಿನ ಆವೃತ್ತಿಯಲ್ಲಿ ಹುಬ್ಬಳ್ಳಿ ನೈಟ್ಸ್‌, ಸ್ವರ್ಣ ಸ್ಟ್ರೈಕರ್ಸ್‌, ಮುಂಡಗೋಡ ಮಾನ್‌ಸ್ಟರ್ಸ್‌, ಹುಬ್ಬಳ್ಳಿಯ ಸ್ಕೈಟೌನ್‌ ಬ್ಯಾಷರ್ಸ್‌, ಎನ್‌.ಕೆ. ವಾರಿಯರ್ಸ್‌, ಶಿರಸಿಯ ನಿಲೇಕಣಿ ಚಾಲೆಂಜರ್ಸ್‌, ಟಿ.ಎಸ್‌.ಎಸ್‌. ಟೈಗರ್ಸ್‌ ಮತ್ತು ಹುಬ್ಬಳ್ಳಿ ಟೈಗರ್ಸ್‌ ತಂಡಗಳು ಪಾಲ್ಗೊಂಡಿದ್ದವು. ಈ ತಂಡಗಳಲ್ಲಿ ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ ಮತ್ತು ಗದಗ ಜಿಲ್ಲೆಗಳ 144 ಆಟಗಾರರು ಭಾಗವಹಿಸಿದ್ದರು.

ಬಿಡಿಕೆ ಸಂಸ್ಥೆಯೇ ಎರಡು ವರ್ಷಗಳಿಂದ ಜೂನಿಯರ್‌ ಎಚ್‌ಪಿಎಲ್‌ ನಡೆಸಿಕೊಂಡು ಬಂದಿದೆ. 2018ರ ಈ ಟೂರ್ನಿಯಲ್ಲಿ ಹುಬ್ಬಳ್ಳಿಯ ಎನ್‌.ಕೆ. ವಾರಿಯರ್ಸ್‌, ಗದುಗಿನ ವಾಲ್ಮೀಕಿ ಸ್ಟ್ರೈಕರ್ಸ್‌, ಬೆಳಗಾವಿಯ ಬಿಎಸ್‌ಸಿ ಸ್ಮಾರ್ಟ್‌ ವಿಷನ್‌ ಮತ್ತು ಬಿಜಾಪುರ ಬುಲ್ಸ್‌ ಸಿಸಿಐ ತಂಡಗಳು ಭಾಗವಹಿಸಿದ್ದವು.

ADVERTISEMENT

ಪ್ರತಿ ವರ್ಷದ ಜನವರಿಯಲ್ಲಿ ಎಚ್‌ಪಿಎಲ್‌ ಮತ್ತು ಮಾರ್ಚ್‌ನಲ್ಲಿ ಜೂನಿಯರ್‌ ಎಚ್‌ಪಿಎಲ್‌ ನಡೆಯುತ್ತಿದ್ದವು. ಈ ವರ್ಷ ಇವು ನಡೆಯುವುದಿಲ್ಲ.‌ ಇದರಿಂದ ಸ್ಥಳೀಯ ಆಟಗಾರರಿಗೆ ಉತ್ತಮ ಅವಕಾಶ ತಪ್ಪಿ ಹೋದಂತಾಗಿದೆ. ಆದ್ದರಿಂದ ಸಂಘಟಕರು ಅಂತರ ಕ್ಲಬ್‌ಗಳ ಟೂರ್ನಿಗಳನ್ನು ನಡೆಸಲು ಮುಂದಾಗಿದ್ದಾರೆ.

ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್‌ ಟ್ರಸ್ಟಿ ಬಾಬಾ ಭೂಸದ ‘ಫ್ರಾಂಚೈಸ್‌ ಆಧಾರಿತ ಟೂರ್ನಿ ನಡೆಸಲು ಅನುಮತಿ ಕಡ್ಡಾಯ. ಕ್ರಿಕೆಟ್ ಹಿತದೃಷ್ಟಿಯಿಂದ ಕೆಎಸ್‌ಸಿಎ ಈ ಬಾರಿ ಟೂರ್ನಿ ನಡೆಸಲು ಅನುಮತಿ ನೀಡುವುದಿಲ್ಲ ಎಂದಿದೆ. ಈ ನಿರ್ಧಾರಕ್ಕೆ ನಾವು ಬದ್ಧರಿದ್ದು, ಹೊಸ ಟೂರ್ನಿ ಆಯೋಜಿಸಲು ಯೋಜನೆ ರೂಪಿಸುತ್ತಿದ್ದೇವೆ’ ಎಂದರು.

ಟೂರ್ನಿ ಸಂಘಟಕ ಶಿವಾನಂದ ಗುಂಜಾಳ ‘ನಿಗದಿತ ವೇಳಾಪಟ್ಟಿ ಪ್ರಕಾರ ಎಚ್‌ಪಿಎಲ್‌ ಆಯೋಜಿಸಲು ಒಂದು ತಿಂಗಳು ಕಾಲಾವಕಾಶವಿದೆ. ಅಷ್ಟರಲ್ಲಿ ಕೆಪಿಎಲ್‌ ಫಿಕ್ಸಿಂಗ್ ಕುರಿತ ತನಿಖೆ ಪೂರ್ಣಗೊಂಡರೆ ಆಗ ಕೆಎಸ್‌ಸಿಎ ಅನುಮತಿ ಕೊಡಬಹುದು ಎನ್ನುವ ನಿರೀಕ್ಷೆಯಲ್ಲಿದ್ದೇವೆ. ಇಲ್ಲವಾದರೆ, ಅಂತರ ಕ್ಲಬ್‌ ಟೂರ್ನಿಗಳ ಬಗ್ಗೆ ಯೋಜನೆ ರೂಪಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.