ADVERTISEMENT

ಸದಸ್ಯರ ಅವಧಿ ಮುಕ್ತಾಯ: 137 ಗ್ರಾ. ಪಂ.ಗೆ ಆಡಳಿತಾಧಿಕಾರಿ ನೇಮಕ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 5:57 IST
Last Updated 3 ಫೆಬ್ರುವರಿ 2026, 5:57 IST
   

ಧಾರವಾಡ: ಗ್ರಾಮ ಪಂಚಾಯಿತಿ ಸದಸ್ಯರ ಅವಧಿ ಮುಗಿದಿರುವ 135 ಹಾಗೂ ಮುಕ್ತಾಯ ಅವಧಿ ಸನಿಹದಲ್ಲಿರುವ ಎರಡು ಸಹಿತ 137 ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ಅಧಿಸೂಚನೆ ಹೊರಡಿಸಲಾಗಿದೆ.

ನವಲಗುಂದ ತಾಲ್ಲೂಕಿನ ಬೆಳವಟಿಗೆ ಗ್ರಾಮ ಪಂಚಾಯಿತಿ ಅವಧಿ ಏ.20ರಂದು ಹಾಗೂ ಹುಬ್ಬಳ್ಳಿ ತಾಲೂಕಿನ ಮಲ್ಲಿಗವಾಡ ಗ್ರಾಮ ಪಂಚಾಯಿತಿ ಅವಧಿ ಆ.23ರಂದು ಮುಗಿಯಲಿದ್ದು, ಈ ಎರಡು ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ.

ತಾಲ್ಲೂಕುವಾರು ಧಾರವಾಡ– 35, ಅಳ್ನಾವರ– 4, ನವಲಗುಂದ– 14, ಅಣ್ಣಿಗೇರಿ– 8, ಹುಬ್ಬಳ್ಳಿ– 26, ಕುಂದಗೋಳ– 23 ಹಾಗೂ ಕಲಘಟಗಿ– 27 ಗ್ರಾಮ ಪಂಚಾಯತಿಗಳಿಗೆ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಆಡಳಿತಾಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಸದಸ್ಯರ ಅವಧಿ ಮುಕ್ತಾಯದ ದಿನದಿಂದ ಆಡಳಿತಾಧಿಕಾರಿಯಾಗಿ ಕಾರ್ಯಭಾರ ನಿರ್ವಹಿಸಲು ಆದೇಶಿಸಲಾಗಿದೆ.

ADVERTISEMENT

ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳ ಸದಸ್ಯರ ಮುಕ್ತಾಯ ಅವಧಿಯು 2026ನೇ ಜನವರಿ, ಫೆಬ್ರುವರಿ, ಏಪ್ರಿಲ್‌ ಹಾಗೂ ಆಗಸ್ಟ್‌ನಲ್ಲಿ (ವಿವಿಧ ದಿನಾಂಕ) ಇದೆ. ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆದು ಹೊಸ ಸದಸ್ಯರು ಆಯ್ಕೆಯಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗುವವರೆಗೆ ಆಡಳಿತಾಧಿಕಾರಿಗಳು ಕಾರ್ಯನಿರ್ವಹಿಸಬೇಕು. ಕರ್ನಾಟಕ ಪಂಚಾಯತ ರಾಜ್ 1993 ರ ಅಧಿನಿಯಮದಂತೆ ಗ್ರಾಮ ಪಂಚಾಯತಿಯ ಅಧಿಕಾರ ಮತ್ತು ಕರ್ತವ್ಯಗಳನ್ನು ನಿರ್ವಹಿಸಬೇಕು.

‘ನೇಮಕವಾಗಿರುವ ಯಾವುದೇ ಅಧಿಕಾರಿ ವರ್ಗಾವಣೆಯಾದರೆ ಅವರ ಪ್ರಭಾರ ಇರುವವವರು ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸಬೇಕು. ಅಧಿಕಾರಿ ಹುದ್ದೆ ರದ್ದಾದಲ್ಲಿ ಅಥವಾ ಮಾರ್ಪಾಡಾದರೆ ಆಯಾ ತಹಶೀಲ್ದಾರ್‌ ಅವರು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭುವನೇಶ ಪಾಟೀಲ ತಿಳಿಸಿದ್ಧಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.