ADVERTISEMENT

ಕುಂದಗೋಳ | 2 ತಿಂಗಳಿಂದ ಕೈಸೇರದ ಪಿಂಚಣಿ: ಫಲಾನುಭವಿಗಳ ತಪ್ಪದ ಅಲೆದಾಟ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2024, 4:51 IST
Last Updated 6 ಮಾರ್ಚ್ 2024, 4:51 IST
ಪಿಂಚಣಿ ಮತ್ತು ಇತರೆ ಕಾರ್ಯನಿಮಿತ್ಯ ತಹಶೀಲ್ದಾರ್ ಕಚೇರಿಯಲ್ಲಿ ಕಾಯುತ್ತಿರುವ ಸಾರ್ವಜನಿಕರು.
ಪಿಂಚಣಿ ಮತ್ತು ಇತರೆ ಕಾರ್ಯನಿಮಿತ್ಯ ತಹಶೀಲ್ದಾರ್ ಕಚೇರಿಯಲ್ಲಿ ಕಾಯುತ್ತಿರುವ ಸಾರ್ವಜನಿಕರು.   

ಕುಂದಗೋಳ: ಎರಡು ತಿಂಗಳಿಂದ ಪಿಂಚಣಿ ಹಣ ಬಾರದ್ದಕ್ಕೆ ವಯೋವೃದ್ಧರು, ಅಂಗವಿಕಲರು ತಹಶೀಲ್ದಾರ್ ಕಚೇರಿಗೆ ಅಲೆಯುತ್ತಿದ್ದಾರೆ.  

ತಾಲ್ಲೂಕಿನ ವ್ಯಾಪ್ತಿಯಲ್ಲಿ ವಿಧವಾ ವೇತನ, ಅಂಗವಿಕಲತೆ, ವೃದ್ಧಾಪ್ಯ ವಿಭಾಗದಲ್ಲಿ ಪಿಂಚಣಿ ಪಡೆಯುವವರ ಸಂಖ್ಯೆ ಒಟ್ಟು 30850. ಇವರಿಗೆ ಡಿಸೆಂಬರ್‌ ತಿಂಗಳಲ್ಲಿ ಪಿಂಚಣಿ ಹಣ ದೊರೆತಿದೆ. 2024ರ ಜನವರಿ ಮತ್ತು ಫೆಬ್ರುವರಿಯಲ್ಲಿ ಪಿಂಚಣಿ ಬಹುತೇಕರಿಗೆ ಬಂದಿಲ್ಲ. ಪ್ರತಿದಿನ ಹತ್ತರಿಂದ ಹದಿನೈದು ಜನ ಪಿಂಚಣಿ ಬಂದಿಲ್ಲವೆಂದು ಕಚೇರಿಗೆ ಬರುತ್ತಿದ್ದಾರೆ.

ಎರಡು ತಿಂಗಳಿಂದ ರೊಕ್ಕ ಬಂದಿಲ್ಲ ಪಾ. ಮಗಾ ಮೈಸೂರಾಗ ಅದಾನ. ಇಲ್ಲಿ ತನಕ ಅವನ ಕಡೆ ರೊಕ್ಕ ಕೇಳಿಲ್ಲ. ಈಗ ಕೇಳು ಪರಿಸ್ಥಿತಿ ಬಂದೆತೀ ನೋಡು ಎಂದು ಫಲಾನುಭವಿ ಯಲ್ಲಪ್ಪ ಎಂ ಹೇಳಿದರು.

ADVERTISEMENT
ದಾಖಲೆಗಳನ್ನು ತೆಗೆದುಕೊಂಡು ಸಮಸ್ಯೆ ಸರಿಪಡಿಸುತ್ತಿವೆ. ಸರ್ವರ್ ಸಿಗದ ಕಾರಣ ಕೆಲಸ ನಿಧಾನವಾಗುತ್ತಿದೆ. ಸಾರ್ವಜನಿಕರು ಸಹಕರಿಸಬೇಕು.
ಮಹೇಶ ಶಾನಬಾಳ, ಶಿರಸ್ತೇದಾರ್ ತಹಶೀಲ್ದಾರ್

ಹಣ ಸರ್ಕಾರದಿಂದ ಪಿಂಚಣಿದಾರರಿಗೆ ಡಿಬಿಟಿ ಮೂಲಕ ವರ್ಗಾವಣೆಯಾಗುತ್ತಿದೆ. ಬಹುತೇಕರು ಆಧಾರ್ ನಂಬರನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸಿಲ್ಲ. ಕೆಲವರು ಎನ್‍ಪಿಸಿಐ ಮಾಡಿಸಿಲ್ಲ. 2000ಕ್ಕೂ ಹೆಚ್ಚು ಪಿಂಚಣಿ ಪಡೆಯುವವರ ದಾಖಲೆಗಳಲ್ಲಿನ ಹೆಸರು ಹೊಂದಾಣಿಕೆಯಾಗಿಲ್ಲದ ಕಾರಣ ಪಿಂಚಣಿ ತಡೆಹಿಡಿಯಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಇನ್ನು ಹಲವರು ಎರಡು ಬ್ಯಾಂಕ್ ಖಾತೆ ಹೊಂದಿದ್ದು ಹಣ ಎನ್‍ಪಿಸಿಐ ಮಾಡಿಸಿದ ಒಂದು ಖಾತೆಗೆ ಬಂದಿರುತ್ತದೆ. ಸಾರ್ವಜನಿಕರು ತಮ್ಮ ಬ್ಯಾಂಕ್ ಖಾತೆಗಳಲ್ಲಿರುವ ಹಣ ಎಷ್ಟಿದೆ? ಪಿಂಚಣಿ ಬಂದಿದೆಯೋ ಇಲ್ಲವೋ? ಎಂದು ತಿಳಿದುಕೊಳ್ಳದೆ ಗಾಬರಿಯಾಗಿ ಪಿಂಚಣಿ ಬಂದಿಲ್ಲವೆನ್ನುತ್ತಾರೆ. ರಾಜ್ಯದಾದ್ಯಂತ ಈ ಸಮಸ್ಯೆಯಿದೆ. ದಾಖಲೆಗಳನ್ನು ತೆಗೆದುಕೊಂಡು ಸಮಸ್ಯೆ ಸರಿಪಡಿಸುತ್ತಿವೆ. ಸರ್ವರ್ ಸಿಗದ ಕಾರಣ ಕೆಲಸ ನಿಧಾನವಾಗುತ್ತಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.