ADVERTISEMENT

ನವಲಗುಂದ | 'ಜನತಾ ಅದಾಲತ್ ಸದುಪಯೋಗ ಪಡೆಯಿರಿ'

ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ದೊಡ್ಡಮನಿ ಕರೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 4:13 IST
Last Updated 13 ಆಗಸ್ಟ್ 2025, 4:13 IST
ನವಲಗುಂದ ಕಾಯಂ ಲೋಕ ಆದಾಲತ್ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ದೊಡ್ಡಮನಿ ಅವರನ್ನು ಸನ್ಮಾನಿಸಲಾಯಿತು
ನವಲಗುಂದ ಕಾಯಂ ಲೋಕ ಆದಾಲತ್ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ದೊಡ್ಡಮನಿ ಅವರನ್ನು ಸನ್ಮಾನಿಸಲಾಯಿತು   

ನವಲಗುಂದ: ಸರಳ ನ್ಯಾಯದಾನದ ಮೂಲಕ ವ್ಯಾಜ್ಯಗಳನ್ನು ಇತ್ಯರ್ಥ ಮಾಡಿಕೊಳ್ಳುವ ಒಂದು ವ್ಯವಸ್ಥೆ ಕಾಯಂ‌ ಜನತಾ ಅದಾಲತ್ ಆಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ದೊಡ್ಡಮನಿ ಕರೆ ನೀಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಮಂಗಳವಾರ ನ್ಯಾಯಲಯ ಅವರಣದಲ್ಲಿರುವ ವಕೀಲರ ಸಂಘದಲ್ಲಿ ಆಯೋಜಿಸಲಾಗಿದ್ದ ಕಾಯಂ ಲೋಕ ಆದಾಲತ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನ್ಯಾಯಾಂಗ ವ್ಯವಸ್ಥೆ ಎಲ್ಲರಿಗೂ ಅಗತ್ಯವಾಗಿದೆ. ಇಂದು ಪ್ರತಿ ವಿಚಾರಕ್ಕೂ ಸಾರ್ವಜನಿಕರು ನ್ಯಾಯಾಲಯಕ್ಕೆ ಬರುತ್ತಾರೆ. ಜನರ ಕ್ಲಿಷ್ಟಕರ ಸಮಸ್ಯೆಗಳನ್ನು ಇತ್ಯರ್ಥಪಡಿಸುವುದು, ಸುಲಭ ಪ್ರಕ್ರಿಯೆಗಳ ಮೂಲಕ ದಾವೆಗಳನ್ನು ಇತ್ಯರ್ಥಪಡಿಸುವುದು ನ್ಯಾಯಾಂಗದ ಉದ್ದೇಶವಾಗಿದೆ.‌ ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಕಾನೂನು ಪ್ರತಿಯೊಬ್ಬರಿಗೂ ಮುಟ್ಟಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ADVERTISEMENT

ಹಿರಿಯ ವಕೀಲ ವಿ.ಪಿ.ಪಾಟೀಲ ಅವರು ಕಾಯಂ ಜನತಾ ನ್ಯಾಯಲಯ ಮತ್ತು ಮಧ್ಯಸ್ತಿಕೆ ಕುರಿತು ಉಪನ್ಯಾಸ ನೀಡಿದರು.

ನವಲಗುಂದ ಹಿರಿಯ ದಿವಾಣಿ ನ್ಯಾಯಾಧೀಶ ಮಂಜುನಾಥ ಪಾನಗಂಟಿ, ಸಹಾಯಕ ಸರ್ಕಾರಿ ಅಭಿಯೋಜಕ ಆನಂದ ಮುರಾಳ, ಸೇರಿ ವಕೀಲರ ಸಂಘ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಎಲ್ಲ ವಕೀಲರು, ಸಾರ್ವಜನಿಕರು ಭಾಗವಹಿಸಿದ್ದರು.

‘ಉಭಯ ಪಕ್ಷದವರು ಒಪ್ಪಿದರೆ ಪ್ರಕರಣ ಇತ್ಯರ್ಥ’ ‘

ಎಷ್ಟೋ ಬಾರಿ ವಿದ್ಯಾವಂತರಲ್ಲೂ ಕಾನೂನು ಅರಿವು ಇರುವುದಿಲ್ಲ. ಎಲ್ಲರೂ ಕಾನೂನು ತಿಳಿಯುವುದು ಅವಶ್ಯಕವಾಗಿದೆ. ಲೋಕ ಅದಾಲತ್ ಇರುವುದು ಸಾರ್ವಜನಿಕರಿಗಾಗಿ. ಸಾರ್ವಜನಿಕ ಸೇವೆಗಳಿಗೆ ಸಂಬಂಧಿಸಿದ ವಿಷಯಗಳನ್ನು ಇಲ್ಲಿ ಕಾಣಬಹುದಾಗಿದೆ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ದೊಡ್ಡಮನಿ ಹೇಳಿದರು. ‘ಇಲ್ಲಿ ಇತ್ಯರ್ಥವಾದ ಕೇಸುಗಳಿಗೆ ಮೇಲ್ಮನವಿಗೆ ಅವಕಾಶ ಇರುವುದಿಲ್ಲ. ಇಲ್ಲಿ ಇತ್ಯರ್ಥಪಡಿಸಿಕೊಳ್ಳಲು ಒಪ್ಪದೆ ಇದ್ದಾಗ ಮಾತ್ರ ಮೇಲಿನ ಕೋರ್ಟ್‌ಗಳಿಗೆ ಹೋಗಬಹುದು ಇಲ್ಲಿ ತೀರ್ಮಾನವಾದ ನಂತರ ಮುಂದೆ ಹೋಗಲು ಅವಕಾಶ ಇರುವುದಿಲ್ಲ. ಉಭಯ ಪಕ್ಷಗಳವರು ಒಪ್ಪಿ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಳ್ಳುವ ವ್ಯವಸ್ಥೆ ಇದಾಗಿದೆ. ಸಾರ್ವಜನಿಕರು ಕಾಯಂ ಜನತಾ ನ್ಯಾಯಾಲಯದ ಉಪಯೋಗ ಮಾಡಿಕೊಳ್ಳಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.