ಹುಬ್ಬಳ್ಳಿ: ಸಾಕು ಪ್ರಾಣಿಗಳು ಸೇರಿ ಇನ್ನಿತರ ಪ್ರಾಣಿಗಳು ಮೃತಪಟ್ಟಾಗ ಅವುಗಳ ಕಳೇಬರಗಳನ್ನು ಗೌರವಯುತವಾಗಿ ಅಂತ್ಯಕ್ರಿಯೆ ಮಾಡಲು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಎರಡು ಚಿತಾಗಾರಗಳನ್ನು ನಿರ್ಮಿಸಲಾಗಿದ್ದು, ಶೀಘ್ರ ಕಾರ್ಯಾರಂಭ ಮಾಡಲಿವೆ.
₹1.6 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದ್ದು, ಹುಬ್ಬಳ್ಳಿಯ ಕಾರವಾರ ರಸ್ತೆ ಮತ್ತು ಧಾರವಾಡದ ಹೊಸ ಯಲ್ಲಾಪುರದಲ್ಲಿ ಇರುವ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಚಿಮಣಿ ಸೇರಿ ಇನ್ನಿತರ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ.
‘ಚಿತಾಗಾರ ಒಂದು ಗಂಟೆಗೆ 80 ರಿಂದ 100 ಕೆಜಿ ತೂಕದ ಕಳೇಬರ ದಹಿಸುವ ಸಾಮರ್ಥ್ಯ ಹೊಂದಿದೆ. ಎಲ್‌ಪಿಜಿ ಗ್ಯಾಸ್‌ನಿಂದ ಇದು ಕಾರ್ಯನಿರ್ವಹಿಸಲಿದೆ. ಕೆಲ ಉಪಕರಣಗಳನ್ನು ಪುಣೆಯಿಂದ ತರಿಸಬೇಕಿದ್ದು, ಶೀಘ್ರ ದಹನ ಕ್ರಿಯೆ ಆರಂಭವಾಗಲಿದೆ’ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದರು.
‘ಈ ಹಿಂದೆ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ತಿಂಗಳು ಪ್ರಾಣಿಗಳ ಕಳೇಬರಗಳ ವಿಲೇವಾರಿಗೆ ಸಂಬಂಧಿಸಿದಂತೆ 250 ರಿಂದ 300 ದೂರು ಬರುತ್ತಿದ್ದವು. ಪಾಲಿಕೆ ಸಿಬ್ಬಂದಿ ಅವುಗಳನ್ನು ಸಂಗ್ರಹಿಸಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ವಿಲೇವಾರಿ ಮಾಡುತ್ತಿದ್ದರು’ ಎಂದು ಪಾಲಿಕೆ ಉಪ ಆಯುಕ್ತ (ಅಭಿವೃದ್ಧಿ) ವಿಜಯಕುಮಾರ್ ತಿಳಿಸಿದರು.
‘ಕೆಲವರು ಎಲ್ಲೆಂದರಲ್ಲಿ ಕಳೇಬರಗಳನ್ನು ಎಸೆದು ಹೋಗುತ್ತಿದ್ದರು. ಇದರಿಂದ ದುರ್ವಾಸನೆ ಹರಡುತ್ತಿತ್ತು. ರೋಗ ಹರಡುವ ಆತಂಕವೂ ಇತ್ತು. ಅದನ್ನು ತಪ್ಪಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ನಿಯಮಾವಳಿ ಅನ್ವಯ ಈ ಚಿತಾಗಾರಗಳನ್ನು ನಿರ್ಮಿಸಲಾಗಿದೆ’ ಎಂದರು.
‘ಬೀದಿ ನಾಯಿ ಅಥವಾ ಸಾಕು ನಾಯಿ, ಹಸು, ಬೆಕ್ಕು, ಎಮ್ಮೆ ಸೇರಿ ಯಾವುದೇ ಪ್ರಾಣಿಗಳು ಸಾವನ್ನಪ್ಪಿದರೆ ಪಾಲಿಕೆಯ ಸಹಾಯವಾಣಿಗೆ ದೂರು ನೀಡಿದರೆ ಸಿಬ್ಬಂದಿ ಹೋಗಿ ಕಳೇಬರಗಳನ್ನು ತಂದು ಅಂತ್ಯಕ್ರಿಯೆ ಮಾಡುತ್ತಾರೆ. ಜನರು ನೇರವಾಗಿ ಕಳೇಬರಗಳನ್ನು ಚಿತಾಗಾರಗಳಿಗೆ ತಲುಪಿಸಬಹುದು. ಇದಕ್ಕೆ ಯಾವುದೇ ಶುಲ್ಕ ಇಲ್ಲ’ ಎಂದರು.
ಪ್ರಾಣಿಗಳ ಚಿತಾಗಾರ ಬಹು ದಿನಗಳ ಬೇಡಿಕೆಯಾಗಿತ್ತು. ಮನುಷ್ಯರ ರೀತಿ ಪ್ರಾಣಿಗಳಿಗೂ ಗೌರವದ ವಿದಾಯ ಸಿಗಬೇಕೆಂಬ ದೃಷ್ಟಿಯಿಂದ ಚಿತಾಗಾರ ನಿರ್ಮಿಸಲಾಗಿದೆ..-ಈಶ್ವರ ಉಳ್ಳಾಗಡ್ಡಿ ಆಯುಕ್ತ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.