ADVERTISEMENT

ಕಸ ಚೆಲ್ಲಿದರೆ ಬೀಳುತ್ತೆ ದಂಡ: ಸುರೇಶ್ ಇಟ್ನಾಳ್ ಎಚ್ಚರಿಕೆ

‘ಫೋನ್‌ ಇನ್‌ ಕಾರ್ಯಕ್ರಮ’

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2019, 19:45 IST
Last Updated 13 ಸೆಪ್ಟೆಂಬರ್ 2019, 19:45 IST
   

‘ಸ್ವಚ್ಛತೆ ಕಾಪಾಡುವುದು ಎಲ್ಲರ ಜವಾಬ್ದಾರಿ. ಜಾಗೃತಿ ಮೂಡಿಸುವ ಕೆಲಸವೂ ಆಗುತ್ತಿದೆ.. ಆದರೂ, ಕೆಲವರು ಅಲ್ಲಲ್ಲಿ ಕಸ ಹಾಕಿ, ಸ್ವಚ್ಛತೆ ಹಾಳು ಮಾಡುತ್ತಿದ್ದಾರೆ. ಅಂತಹವರಿಗೆ ದಂಡ ವಿಧಿಸುವ ನಿಯಮವೊಂದನ್ನು ಜಾರಿಗೊಳಿಸುತ್ತಿದ್ದೇವೆ...

ಹೀಗೆ ಎಚ್ಚರಿಕೆ ನೀಡಿದ್ದು ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ.

‘ಪ್ರಜಾವಾಣಿ’ ಕಚೇರಿಯಲ್ಲಿ ಶುಕ್ರವಾರ ನಡೆದ ‘ಫೋನ್‌ ಇನ್‌ ಕಾರ್ಯಕ್ರಮ’ದಲ್ಲಿ ಮಾತನಾಡಿದ ಅವರು, ‘ಮನೆ ಮನೆಯಿಂದ ಕಸ ಸಂಗ್ರಹಿಸಲು ಆರಂಭಿಸಿದ ಮೇಲೆ ಸ್ವಚ್ಛತೆಯಲ್ಲಿ ಸುಧಾರಣೆ ಕಂಡು ಬಂದಿದೆ. ಆದರೆ, ಕೆಲವರು ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುತ್ತಿದ್ದಾರೆ. ಅದಕ್ಕೂ ಕಡಿವಾಣ ಹಾಕಲಾಗುವುದು’ ಎಂದರು.

ADVERTISEMENT

‘ಕಸ ತೆಗೆದುಕೊಂಡು ಹೋಗಲು 176 ಆಟೊ ಟಿಪ್ಪರ್‌ಗಳಿವೆ. ಆಟೊಗಳು ಕಸ ವಿಲೇವಾರಿ ಮಾಡುವ ಕಾಂಪ್ಯಾಕ್ಟರ್ ಸ್ಟೇಷನ್‌ ಬೆಂಗೇರಿಯಲ್ಲಿ ಆರಂಭವಾಗಬೇಕಿದೆ. ಅದಾದರೆ ಮನೆಗಳಿಂದ ಸಂಗ್ರಹಣೆ ನಿತ್ಯವೂ ನಡೆಯಲಿದೆ’ ಎಂದು ತಿಳಿಸಿದರು.

ಒಂದು ವಾರದಲ್ಲಿ ಐದು ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುವುದು.ನೀರಸಾಗರದಲ್ಲಿ ನೀರಿರುವುದರಿಂದ ಈ ಬಾರಿ ಅನುಕೂಲವಾಗಿದೆ. ಈಗಾಗಲೇ ನೀರು ಪೂರೈಕೆ ಅವಧಿಯನ್ನು ಆರರಿಂದ ಏಳು ದಿನಕ್ಕೆ ಇಳಿಸಲಾಗಿದೆ. ಅದು ಐದು ದಿನಕ್ಕೊಮ್ಮೆ ಆಗಲಿದೆ ಎಂದರು.

ಆಯುಕ್ತರೊಂದಿಗಿನ ಪ್ರಶ್ನೋತ್ತರಗಳು ಹೀಗಿವೆ.

*ಶಂಕರ್‌, ಜವಳಿ ಗಾರ್ಡನ್‌: ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡದ ಕಾರಣ ಗಬ್ಬು ನಾರುತ್ತಿದೆ. ಕೇಳಿದರೆ ಸಿಬ್ಬಂದಿ ಕೊರತೆ ಎಂದು ಗುತ್ತಿಗೆದಾರರು ಸಬೂಬು ಹೇಳುತ್ತಾರೆ. ಜತೆಗೆ ಫೋರ್ಟಿಸ್‌ ಆಸ್ಪತ್ರೆಯಿಂದ ಗಾರ್ಡನ್‌ವರೆಗಿನ ರಸ್ತೆ ಹಾಳಾಗಿದ್ದು, ಯಾವಾಗ ದುರಸ್ತಿ ಮಾಡಿಸುತ್ತೀರಿ?

ನಮ್ಮಲ್ಲಿ ಸಿಬ್ಬಂದಿ ಕೊರತೆ ಇಲ್ಲ. 18 ಆಟೊ ಟಿಪ್ಪರ್‌ಗಳಿವೆ. ಇವುಗಳಿಗೆ ಜಿಪಿಎಸ್‌ ಅಳವಡಿಸಲಾಗಿದೆ. ಅದರಲ್ಲಿ ಎಲ್ಲ ಪ್ರದೇಶಗಳಿಗೂ ಆಟೊಗಳು ನಿಯಮಿತವಾಗಿ ಹೋಗುತ್ತಿವೆ ಎಂದು ವರದಿ ಬರುತ್ತಿದೆ. ಮತ್ತೊಮ್ಮೆ ಪರಿಶೀಲನೆ ಮಾಡಿ, ಎರಡು ದಿನಕ್ಕೊಮ್ಮೆ ಕಸ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುತ್ತೇನೆ. ಈಗ ಮಳೆ ಇರೋದ್ರಿಂದ ರಸ್ತೆ ದುರಸ್ತಿ ಕಷ್ಟ. ಬಿಸಿಲು ಬಂದ ನಂತರ ಮಾಡಿಸುತ್ತೇನೆ.

*ಎಚ್‌.ಎಸ್‌.ನದಾಫ್‌, ನಾಗಶೆಟ್ಟಿಕೊಪ್ಪ: ಕಸ ವಿಲೇವಾರಿ ಮಾಡುವವರು, ಗಟಾರ ಬಳಿಯುವವರು ನಾಲ್ಕೈದು ತಿಂಗಳಿಂದ ಬಂದಿಲ್ಲ. ಕಂಟ್ರೋಲ್‌ ರೂಮ್‌ಗೆ ಫೋನ್‌ ಮಾಡಿದ್ದರೂ ಪ್ರಯೋಜನವಾಗಿಲ್ಲ?

ನಾಳೆಯೇ ಗಟಾರ ಸ್ವಚ್ಛ ಮಾಡಿಸುತ್ತೇನೆ. ಈ ತಿಂಗಳ ಅಂತ್ಯಕ್ಕೆ ಎಲ್ಲ ಚರಂಡಿಗಳ ಸ್ವಚ್ಛತೆ ಮಾಡಲು ಕ್ರಮ ಕೈಗೊಳ್ಳುತ್ತೇವೆ.

*ಶಿವಶಂಕರಪ್ಪ, ಆನಂದನಗರ: ನಮ್ಮ ಬಡಾವಣೆಯಲ್ಲಿ ನೀರಿನ ಟ್ಯಾಂಕ್‌ ಇದ್ದು, ಅದಕ್ಕೆ ಒಂದೇ ಒಂದು ನಳ ಇದೆ. ಹಾಗಾಗಿ ಹೆಚ್ಚುವರಿ ನಳ ಅಳವಡಿಸಿ...

ಜಲಮಂಡಳಿ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ರಾಜಗೋಪಾಲ್‌ಗೆ ತಿಳಿಸಿ. ಕೂಡಲೇ ಹೆಚ್ಚುವರಿ ನಳ ಅಳವಡಿಸಲಾಗುತ್ತದೆ.

*ಕಿಶನ್‌ಸಿಂಗ್‌, ಮಯೂರ ನಗರ: ನಮ್ಮ ಬಡಾವಣೆಯಲ್ಲಿ ಬೀದಿದೀಪಗಳು ಹಾಳಾಗಿದ್ದು, ರಾತ್ರಿ ವೇಳೆ ಹೆಣ್ಣು ಮಕ್ಕಳು ಓಡಾಡೋದೇ ಕಷ್ಟವಾಗಿದೆ. ಪುಂಡ ಪೋಕರಿಗಳ ಕಾಟ ಜಾಸ್ತಿಯಾಗಿದೆ. 6 ಮತ್ತು 7ನೇ ಅಡ್ಡರಸ್ತೆಯಲ್ಲಿ ಹಂದಿಗಳ ಹಾವಳಿ ಮಿತಿಮೀರಿದೆ. ದಯವಿಟ್ಟು ಕ್ರಮ ಕೈಗೊಳ್ಳಿ.

–ಎರಡು ದಿನಗಳಲ್ಲಿ ಬೀದಿದೀಪ ಸರಿಪಡಿಸಲಾಗುತ್ತದೆ. ಅದೇ ರೀತಿ ಹಂದಿಗಳನ್ನು ಹಿಡಿಯಲು ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ನಮ್ಮ ಸಿಬ್ಬಂದಿ ಎರಡು ದಿನಗಳಲ್ಲಿ ಬಾರದಿದ್ದರೆ, ದಯವಿಟ್ಟು ನನಗೆ ಕರೆ ಮಾಡಿ ತಿಳಿಸಿ.

*ಮಹೇಶ್‌ ಹಿರೇಮಠ, ನವನಗರ: ಶಾಂತನಗರ ಬಡಾವಣೆಯಾಗಿ 25 ವರ್ಷಗಳಾಗಿವೆ. ರಸ್ತೆಗಳು ಹದಗೆಟ್ಟಿವೆ. ರಸ್ತೆ ದುರಸ್ತಿ ಮಾಡಿಸುವಂತೆ ಐದು ವರ್ಷಗಳಿಂದ ಪಾಲಿಕೆಗೆ ಪತ್ರ ಬರೆಯಲಾಗಿದೆ. ಬೀದಿ ದೀಪ ಇಲ್ಲ. ಪಾಲಿಕೆ ಸದಸ್ಯರು, ಆಯುಕ್ತರ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿದಿಲ್ಲ.

–ಬಡಾವಣೆಯ ಸಮಸ್ಯೆಗಳಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ಆದ್ಯತೆ ಮೇಲೆ ಬಗೆಹರಿಸಲಾಗುವುದು. ಸದ್ಯ ಅವಳಿ ನಗರದಲ್ಲಿ ಸರ್ಕಾರಿ–ಖಾಸಗಿ ಸಹಭಾಗಿತ್ವದಲ್ಲಿ(ಪಿಪಿಪಿ) ಬೀದಿ ದೀಪ ಅಳವಡಿಸುವ ಯೋಜನೆ ಅನುಷ್ಠಾನದ ಹಂತದಲ್ಲಿದೆ. ಹಾಗಾಗಿ ಎಲ್ಲೂ ಹೊಸದಾಗಿ ಬೀದಿದೀಪ ಅಳವಡಿಸುತ್ತಿಲ್ಲ. ರಸ್ತೆ, ಉದ್ಯಾನ ನಿರ್ವಹಣೆ ಮಾಡಿಸಲಾಗುವುದು.

*ಎಸ್‌.ಎಸ್‌.ಸವಣೂರ, ಭಾರತೀನಗರ: ಹನುಮಾನ್‌ ಟೆಂಪಲ್‌ನಿಂದ ಜೈ ಹನುಮಾನ್‌ ನಗರದವರೆಗೂ ಬೀದಿ ದೀಪಗಳು ಬಂದ್‌ ಆಗಿವೆ. ಕತ್ತಲಲ್ಲಿ ಓಡಾಡಲು ಸಾಧ್ಯವಾಗದಂತಾಗಿದೆ.

–ಪಾಲಿಕೆಯ ಎಲೆಕ್ಟ್ರಿಕಲ್‌ ಎಂಜಿನಿಯರ್‌ ಬಂದು ಪರಿಶೀಲಿಸಿ, ದುರಸ್ತಿಗೆ ಕ್ರಮ ಕೈಗೊಳ್ಳಲಿದ್ದಾರೆ.

*ಪುಂಡಲಿಕ ಯಂಕಂಚಿ, ತೇಜಸ್ವಿನಗರ: ಬಡಾವಣೆಯಲ್ಲಿ ಬೀದಿ ದೀಪಗಳಿಲ್ಲ. ಉತ್ತಮ ಸಿಮೆಂಟ್‌ ರಸ್ತೆ ಇರುವುದರಿಂದ ಬೈಕ್‌ಗಳು ಜೋರಾಗಿ ಸಾಗುತ್ತವೆ. ಎಲ್ಲೂ ಹಂಪ್‌ಗಳಿಲ್ಲ. ಮಕ್ಕಳು, ವೃದ್ಧರು ಓಡಾಡದಂತಾಗಿದೆ. ಗಟಾರಗಳಲ್ಲಿ ಹೆಗ್ಗಣಗಳು ಬಿಲ ತೋಡಿರುವುದರಿಂದ ಮನೆಗಳ ಗೋಡೆ ಬೀಳುವ ಸ್ಥಿತಿಯಲ್ಲಿವೆ. ಹೊಸ ಗಟಾರ ನಿರ್ಮಿಸಿಕೊಡಿ.

ಹಂಪ್‌ ನಿರ್ಮಾಣ, ಸೈಲೆನ್ಸರ್‌ ಇಲ್ಲದ/ ಅತಿ ಶಬ್ದ ಮಾಡುವ ವಾಹನಗಳ ಓಡಾಟ ನಿಯಂತ್ರಿಸುವ ಬಗ್ಗೆ ಸಂಚಾರ ಪೊಲೀಸರ ಜತೆ ಚರ್ಚಿಸಲಾಗುವುದು. ಹೊಸ ಗಟಾರ ನಿರ್ಮಾಣಕ್ಕೆ ಅಂದಾಜು ಪಟ್ಟಿ ತಯಾರಿಸಿ, ಯಾವುದಾದರೂ ಯೋಜನೆಯಲ್ಲಿ ಕಾಮಗಾರಿ ಕೈಗೊಳ್ಳುತ್ತೇವೆ.

*ಸರೋಜಿನಿ ಮುಷಣ್ಣನವರ, ಹುಡ್ಕೊ ಕಾಲೊನಿ: ವಾರ್ಡ್‌ನಲ್ಲಿ 2–3 ವರ್ಷದ ಹಿಂದೆ ನಿರ್ಮಿಸಿರುವ ಕುಡಿಯುವ ನೀರಿನ ಟ್ಯಾಂಕ್‌ಗೆ ಚಾವಣಿ ಇಲ್ಲ. ಮರದ ಎಲೆಗಳು ಬಿದ್ದು, ನೀರಿನಲ್ಲಿ ಹುಳುಗಳಾಗಿವೆ. ಸ್ವಚ್ಛ ಮಾಡಿಸಿ.

ಟ್ಯಾಂಕ್ ಸ್ವಚ್ಛಗೊಳಿಸಿ, ಚಾವಣಿ ನಿರ್ಮಿಸಲು ಕೂಡಲೇ ಅಧಿಕಾರಿಗಳಿಗೆ ಸೂಚಿಸುತ್ತೇನೆ.

*ವಿ.ಆರ್‌.ನಾಯಕ್‌, ನಿವೃತ್ತ ಡಿಎಫ್‌ಒ, ಫಾರೆಸ್ಟ್‌ ಕಾಲೊನಿ: ರಸ್ತೆಯ ಗಟಾರದ ಮೇಲೆ ಮಣ್ಣು ಸುರಿದಿದ್ದು, ಗಟಾರ ಕಟ್ಟಿಕೊಂಡು ಕೊಳಚೆ ನೀರು ಮನೆಗಳಿಗೆ ನುಗ್ಗುತ್ತಿದೆ. ಈ ಬಗ್ಗೆ ಹಲವು ಬಾರಿ ದೂರು ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ.

ಗಟಾರದ ಮೇಲೆ ಹಾಕಿರುವ ಮಣ್ಣು ತೆರವು ಮಾಡಲು ಸೂಚಿಸಲಾಗುವುದು. ಪರಿಶೀಲಿಸಿದ ಬಳಿಕ ಅದನ್ನು ಎತ್ತರಿಸಲು ಕ್ರಮ ಕೈಗೊಳ್ಳಲಾಗುವುದು.

*ಮಂಜುಳಾ ದೇಸಾಯಿ, ರಾಹುಲ್‌ಗಾಂಧಿನಗರ, ಕೌಲಗೇರಿ ಕ್ರಾಸ್‌: ಬಡಾವಣೆಯಲ್ಲಿ ರಸ್ತೆ ಸಂಪರ್ಕವಿಲ್ಲ. ಓಡಾಡಲು ಕಷ್ಟಕರವಾಗಿದೆ.

ರಾಹುಲ್ ಗಾಂಧಿನಗರ ಇನ್ನೂ ಪಾಲಿಕೆಗೆ ಹಸ್ತಾಂತರವಾಗಿಲ್ಲ. ನಿಮ್ಮ ಸಮಸ್ಯೆ ಕುರಿತು ಹುಡಾ ಗಮನಕ್ಕೆ ತಂದು ಪರಿಹರಿಸಲು ಪ್ರಯತ್ನಿಸುವೆ.

*ಎಚ್‌.ಎಚ್‌.ತರಳಘಟ್‌, ಮಾಳಾಪುರ: ಮಾಳಾಪುರದ 4–5 ನೇ ವಾರ್ಡ್‌ ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ಸಾರ್ವಜನಿಕರು, ವಾಹನ ಸವಾರರಿಗೆ ತೊಂದರೆಯಾಗಿದೆ.

ರಸ್ತೆಯಲ್ಲಿನ ಗುಂಡಿ ಮುಚ್ಚಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು.

*ಸಂಜೀವ್‌ ಧುಮಕಿನಾಳ, ಚೈತನ್ಯ ಕಾಲೊನಿ: ಸ್ವಚ್ಛತೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಭಗೀರಥ ಎಂಬ ಸಂಸ್ಥೆಗೆ ಪಾಲಿಕೆ ವತಿಯಿಂದ ₹40 ಲಕ್ಷ ಹಣ ನೀಡಲಾಗಿದೆ. ಆದರೆ, ಎಲ್ಲಿಯೂ ಅರಿವು ಮೂಡಿಸಿಲ್ಲ. ಈ ಬಗ್ಗೆ ತನಿಖೆ ನಡೆಸಿ, ಹಣ ವಾಪಸ್‌ ಪಡೆಯಬೇಕು.

–ಭಗೀರಥ ಸಂಸ್ಥೆ ಎಷ್ಟು ಕೆಲಸ ಮಾಡಿದೆಯೊ ಅಷ್ಟು ಹಣ ಪಾವತಿಸಿ, ಉಳಿದದ್ದನ್ನು ಮರಳಿ ಪಡೆಯಲು ಕ್ರಮ ಕೈಗೊಳ್ಳುವೆ.

*ಸಿಕಂದರ್‌, ಲೂತಿಮಠ ಲೇಔಟ್‌: ಬಡಾವಣೆಯೊಳಗೆ ಒಂದು ಬದಿ ಡಾಂಬರು ಹಾಕಿ, ಇನ್ನೊಂದು ಬದಿಗೆ ಹಾಕಿಲ್ಲ. ಮಾರುತಿನಗರ ಜನ ಬಯಲು ಶೌಚಕ್ಕಾಗಿ ನಮ್ಮ ಬಡಾವಣೆಗೆ ಬರುತ್ತಾರೆ. ಅಲ್ಲಿ ಸಾಮೂಹಿಕ ಶೌಚಾಲಯ ನಿರ್ಮಿಸಿಕೊಡಿ.

ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಪಾಲಿಕೆ ಪ್ರೋತ್ಸಾಹಧನ ನೀಡುತ್ತದೆ. ಮಾರುತಿನಗರದ ಜನರಿಗೆ ಬಯಲು ಶೌಚದ ಬಗ್ಗೆ ಅರಿವು ಮೂಡಿಸಿ, ಸಾಮೂಹಿಕ ಶೌಚಾಲಯ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.

*ಲಕ್ಷ್ಮಿ, ವಿಜಯನಗರ: 14 ತಿಂಗಳಿಂದ ಪೌರ ಕಾರ್ಮಿಕರಿಗೆ ಉಪಾಹಾರ ಭತ್ಯೆ ನೀಡಿಲ್ಲ. ಬೆಳಗಿನ ಉಪಾಹಾರ ವಿತರಿಸುವ ಯೋಜನೆಯೂ ಅನುಷ್ಠಾನವಾಗಿಲ್ಲ.

ಪೌರಕಾರ್ಮಿಕರಿಗೆ ಬೆಳಗಿನ ಉಪಾಹಾರ ನೀಡಲು ಟೆಂಡರ್‌ ಕರೆಯುವ ಪ್ರಕ್ರಿಯೆ ಆರಂಭಿಸಲಾಗಿದೆ. ಭತ್ಯೆ ಪಾವತಿ ಬಗ್ಗೆಯೂ ಪರಿಶೀಲಿಸುತ್ತೇನೆ.

*ಸುರೇಶ ಕೊರಮಶೆಟ್ಟಿ, ಅಶ್ವಮೇಧ ಪಾರ್ಕ್‌: ಬಡಾವಣೆಯಲ್ಲಿ ಉದ್ಯಾನವನ ಹಾಗೂ ಸಿ.ಎ. ನಿವೇಶನಗಳ ಪ್ರದೇಶ ಅತಿಕ್ರಮಣವಾಗಿದ್ದು, ತೆರವಿಗೆ ಮುಂದಾಗಿ.

ಉದ್ಯಾನ ಹಾಗೂ ಸಿ.ಎ.ಲ್ಯಾಂಡ್‌ ಸರ್ವೆ ಮಾಡಿಸಿ, ಅತಿಕ್ರಮಣ ತೆರವಿಗೆ ಕ್ರಮ ಕೈಗೊಳ್ಳಲಾಗುವುದು.

*ಶಿವಯ್ಯ ಹಿರೇಮಠ, ನೇಕಾರ ಕಾಲೊನಿ: ಬಡಾವಣೆಯಲ್ಲಿ ಸಾರ್ವಜನಿಕ ಶೌಚಾಲಯವಿಲ್ಲ. ಹೊರಗಿನಿಂದ ಬಂದವರು ಹಾಗೂ ಸಂತೆ ವ್ಯಾಪಾರಿಗಳು ಬಯಲನ್ನೇ ಆಶ್ರಯಿಸಬೇಕಿದೆ. ಸಮರ್ಪಕ ರಸ್ತೆಗಳಿಲ್ಲ.

ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ರೋಟರಿ ಸಂಸ್ಥೆ ಮುಂದೆ ಬಂದಿದೆ. ಜತೆಗೆ ಪಾಲಿಕೆ ವತಿಯಿಂದಲೂ ನಿರ್ಮಿಸಲಾಗುವುದು. ಜಾಗ ಗುರುತಿಸಿದ ಬಳಿಕ ಶೌಚಾಲಯ ನಿರ್ಮಿಸಲಾಗುವುದು. ಕೊಳಚೆ ನಿರ್ಮೂಲನಾ ಮಂಡಳಿಯಿಂದ ಅಂತಿಮ ಅಧಿಸೂಚನೆ ಬಂದ ಬಳಿಕ ರಸ್ತೆ ಅಭಿವೃದ್ಧಿ ಮಾಡಲಾಗುವುದು. ಸದ್ಯ ಸಹಾನುಭೂತಿಯಿಂದ ಕ್ರಮ ವಹಿಸಲಾಗುವುದು.

* ದಿನಕರ, ಗಂಗಾಧರ ಕಾಲೊನಿ, ವಾರ್ಡ್‌ ನಂ 30: ನಮ್ಮ ಬಡಾವಣೆಯಲ್ಲಿ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಉದ್ಯಾನಗಳೂ ಹಾಳಾಗಿವೆ.

ಸಂಬಂಧಪಟ್ಟ ಉಪ ಆಯುಕ್ತರ ಜತೆ ಚರ್ಚಿಸಿ, ಚರಂಡಿ ನಿರ್ಮಿಸಲು, ಇರುವ ಚರಂಡಿಗಳನ್ನು ಸಮರ್ಪಕವಾಗಿ ನಿರ್ವಹಿಸಲು ಕ್ರಮವಹಿಸಲಾಗುವುದು. ಉದ್ಯಾನ ನಿರ್ವಹಣೆಗೆ ಸ್ಥಳೀಯರನ್ನು ಒಳಗೊಂಡ ‘ನೆರೆ–ಹೊರೆ ಸಮಿತಿ’ ರಚಿಸಿ, ದೇಣಿಗೆ ಸಂಗ್ರಹಿಸಿ, ಉದ್ಯಾನ ಅಭಿವೃದ್ಧಿಪಡಿಸಲು ಮುಂದೆ ಬಂದರೆ ಅಗತ್ಯ ಸಹಕಾರ ನೀಡಲಾಗುವುದು.

*ಶಿವಶಂಕರಪ್ಪ ಕಾಳೆ, ಆನಂದನಗರ: ಬಡಾವಣೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಬಳಿ ಇರುವ ಬೀದಿದೀಪಗಳು ಹಾಳಾಗಿವೆ. ಇದೇ ಪ್ರದೇಶದಲ್ಲಿರುವ ಚರಂಡಿಗಳು ಹೂಳಿನಿಂದ ತುಂಬಿವೆ.

ಸಂಬಂಧಪಟ್ಟ ಎಲೆಕ್ಟ್ರಿಕಲ್ ಎಂಜಿನಿಯರ್ ಜತೆ ಚರ್ಚಿಸಿ, ಬೀದಿದೀಪ ಅಳವಡಿಸಲು ಕ್ರಮವಹಿಸಲಾಗುವುದು. ಚರಂಡಿಗಳಲ್ಲಿನ ಹೂಳು ಎತ್ತಿಸಲಾಗುವುದು. ಇಷ್ಟಾದರೂ ಸಮಸ್ಯೆ ಪರಿಹಾರವಾಗದಿದ್ದರೆ, ಸೋಮವಾರ ಅಥವಾ ಗುರುವಾರ ಪಾಲಿಕೆಗೆ ಬಂದು ನನ್ನನ್ನು ವೈಯಕ್ತಿಕವಾಗಿ ಭೇಟಿಯಾಗಿ ದೂರು ಸಲ್ಲಿಸಬಹುದು.

* ಸಚಿನ ಕಟ್ಟಿಮನಿ, ಸಾಯಿನಗರ: ಬಡಾವಣೆಯ ಹಳೇ ಸಿದ್ದಪ್ಪಜನ ಗುಡಿಯ ಬಳಿ ಇರುವ ಬೀದಿದೀಪಗಳು ಉರಿಯುತ್ತಿಲ್ಲ. ಇಲ್ಲಿ ಅಳವಡಿಸಿರುವ ಹೈಮಾಸ್ಟ್‌ ದೀಪಸ್ತಂಭದಲ್ಲಿ ಸೋಡಿಯಂ ಬಲ್ಬ್, ಎಲ್‌ಇಡಿ ಬಲ್ಬ್ ಎರಡನ್ನೂ ಬಳಸಿದ್ದು, ಕಣ್ಣಿಗೆ ತೊಂದರೆಯಾಗುವಂತಿದೆ. ರಸ್ತೆಗಳ ನಿರ್ಮಾಣವೂ ಪೂರ್ಣಗೊಂಡಿಲ್ಲ.

ಬೀದಿದೀಪ ಹಾಗೂ ಒಂದೇ ಬಗೆಯ ಹೈಮಾಸ್ಟ್‌ ದೀಪಗಳನ್ನು ಅಳವಡಿಸಲು ಕ್ರಮವಹಿಸಲಾಗುವುದು. ಸಾಯಿನಗರದಲ್ಲಿ ಭೂಸ್ವಾಧೀನಕ್ಕೆ ಸಂಬಂಧಿತ ಪ್ರಕ್ರಿಯೆ ಬಾಕಿ ಇದೆ. ಈಗಾಗಲೇ ಸರ್ವೆ ಕಾರ್ಯ ಮುಗಿದಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಅನುಮತಿ ದೊರೆತ ನಂತರ ಭೂಸ್ವಾಧೀನ ಮಾಡಿಕೊಂಡು ರಸ್ತೆ ನಿರ್ಮಾಣ ಮಾಡಲಾಗುವುದು.

* ಅಶೋಕ ಕಡೇಮನಿ, ವಾರ್ಡ್‌ ನಂ.35, ಭಾರತಿ ಕಾಲೊನಿ: ಬಡಾವಣೆಯಲ್ಲಿ ರಸ್ತೆ ಪಕ್ಕ ಚರಂಡಿ ನಿರ್ಮಿಸಿಲ್ಲ. ಖಾಲಿ ನಿವೇಶನಗಳು ಕಸ ಎಸೆಯುವ ತಾಣಗಳಾಗಿವೆ. ಉದ್ಯಾನ ಹಾಗೂ ಅಲ್ಲಿ ನಿರ್ಮಿಸಿರುವ ಕಿರು ನೀರಿನ ತೊಟ್ಟಿಯ ನಿರ್ವಹಣೆ ಸಮರ್ಪಕವಾಗಿಲ್ಲ.

ರಸ್ತೆ ಪಕ್ಕ ಚರಂಡಿ ನಿರ್ಮಾಣಕ್ಕೆ ಶೀಘ್ರವೇ ಕ್ರಮವಹಿಸಲಾಗುವುದು. ಖಾಲಿ ನಿವೇಶನಗಳ ಮಾಲೀಕರಿಗೆ ಕಸ ತೆರವಿಗೆ ಸಂಬಂಧಿಸಿ, ನೋಟಿಸ್ ನೀಡಿ, ದಂಡ ವಿಧಿಸಲಾಗುವುದು. ಉದ್ಯಾನ ನಿರ್ವಹಣೆಗೆ ಸಂಬಂಧಪಟ್ಟ ಗುತ್ತಿಗೆದಾರರ ಬಿಲ್ ತಡೆಹಿಡಿದು, ಸಮರ್ಪಕವಾಗಿ ನಿರ್ವಹಣೆ ಮಾಡುವಂತೆ ಸೂಚಿಸಲಾಗುವುದು.

*ಗುರುಸಿದ್ದಪ್ಪ ಉಪರೆ, ಸಹಸ್ರಾರ್ಜುನ ನಗರ, ಆರ್‌.ಎನ್‌.ಶೆಟ್ಟಿ ರಸ್ತೆ: ಬಡಾವಣೆಯ ಒಳ ರಸ್ತೆಗಳಲ್ಲಿ ಬೃಹತ್ ಗುಂಡಿಗಳು ಬಿದ್ದಿದ್ದು, ಮಳೆ ಬಂದಾಗ ಕೆರೆಯಂತಾಗುತ್ತವೆ. ಕುಡಿಯುವ ನೀರು ಪ್ರತಿ 10 ದಿನಕ್ಕೊಮ್ಮೆ ಬರುತ್ತದೆ.

ರಸ್ತೆಗಳಲ್ಲಿನ ಗುಂಡಿ ಮುಚ್ಚಲು ಶೀಘ್ರವೇ ಕ್ರಮವಹಿಸಲಾಗುವುದು. ಕುಡಿಯುವ ನೀರನ್ನು ಪ್ರತಿ 5 ದಿನಕ್ಕೊಮ್ಮೆ ಪೂರೈಸುವಂತೆ ಸಚಿವರು ಸೂಚಿಸಿದ್ದು, ಅದರಂತೆ ಶೀಘ್ರವೇ ಕ್ರಮವಹಿಸಲಾಗುವುದು.

* ದಯಾನಂದ ಮುಂಡರಗಿ, ವಸಂತನಗರ, ವಾರ್ಡ್‌ ನಂ–47: ಮನೆವರೆಗೆ ತಲುಪಲು ರಸ್ತೆಗಳೇ ಇಲ್ಲದಂತಾಗಿದೆ. ಬಡಾವಣೆಯಲ್ಲಿ ಬರೀ ಕೆಸರು ತುಂಬಿಕೊಂಡಿದ್ದು, ಆಟೊದವರು, ಕ್ಯಾಬ್‌ನವರೂ ಬರುತ್ತಿಲ್ಲ. ಇದರಿಂದ ಹಿರಿಯ ನಾಗರಿಕರು, ಮಹಿಳೆಯರು, ಮಕ್ಕಳಿಗೆ ತೊಂದರೆಯಾಗುತ್ತಿದೆ.

ಮಳೆಯಿಂದಾಗಿ ರಸ್ತೆಗಳು ಹಾಳಾಗಿದ್ದು, ಶೀಘ್ರವೇ ಕೆಸರು ತೆರವುಗೊಳಿಸಿ, ರಸ್ತೆ ಮರು ನಿರ್ಮಾಣಕ್ಕೆ ಕ್ರಮವಹಿಸಲಾಗುವುದು.

* ವಿಜಯ ಮಿಸ್ಕಿನ್, ಬೊಮ್ಮಾಪುರ ಓಣಿ: ನಮ್ಮ ಬಡಾವಣೆ ತಲುಪಲು ಮುಲ್ಲಾ ಓಣಿಯ ಮೂಲಕ ಸಾಗಬೇಕಾಗುತ್ತದೆ. ಈ ಓಣಿಯಲ್ಲಿ ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ನಿರ್ಮಿಸಲಾಗಿದೆ. ಅವುಗಳನ್ನು ತೆರವುಗೊಳಿಸಬೇಕು. ಅಲ್ಲದೇ, ಚರಂಡಿ ರಸ್ತೆಗಿಂತ ಒಂದು ಅಡಿ ಎತ್ತರದಲ್ಲಿದೆ. ಈ ಹಿಂದೆ ಮಾಡಿದ್ದ ಸಿಸಿ ರಸ್ತೆಯನ್ನು ಯುಜಿಡಿಗಾಗಿ ಮತ್ತೆ ಹಾಳುಗೆಡವಲಾಗಿದೆ.

ಪಾಲಿಕೆ ಎಂಜಿನಿಯರ್‌ ಅವರನ್ನು ಕಳುಹಿಸಿ ಪರಿಶೀಲನೆ ನಡೆಸಿ, ರಸ್ತೆ ಉಬ್ಬುಗಳು ಅವೈಜ್ಞಾನಿಕವಾಗಿದ್ದರೆ ಅವುಗಳ ತೆರವಿಗೆ ಕ್ರಮವಹಿಸಲಾಗುವುದು. ಚರಂಡಿಗಳನ್ನು ರಸ್ತೆಮಟ್ಟದಲ್ಲಿ ನಿರ್ಮಿಸಲಾಗುವುದು. ಯುಜಿಡಿಗಾಗಿ ರಸ್ತೆ ಅಗೆದವರಿಂದ ಹಣ ವಸೂಲಿ ಮಾಡಿ ಸಿಸಿ ರಸ್ತೆ ಪುನರ್‌ ನಿರ್ಮಿಸಲಾಗುವುದು.

* ದಿನೇಶ ಅಗರವಾಲ, ಕೇಶ್ವಾಪುರ ರಸ್ತೆ, ಮುದಗಲ್ ಲೇಔಟ್: ನಮ್ಮ ಬಡಾವಣೆಯ ಮನೆಮನೆಗೆ ಕಸ ಸಂಗ್ರಹಿಸುವ ವಾಹನಗಳು ಬರುತ್ತಿಲ್ಲ.

ಪ್ರತಿ ಮನೆ ಬಾಗಿಲಿಗೆ ಕಸಸಂಗ್ರಹ ವಾಹನ ತಲುಪುವಂತೆ ಕ್ರಮವಹಿಸಲು ಆ ವಿಭಾಗದ ಉಪ ಆಯುಕ್ತರಿಗೆ ಸೂಚಿಸಲಾಗುವುದು.

*ರಂಜಿತಾ ರಾಮಾಪುರ, ಭೈರಿದೇವರಕೊಪ್ಪ: ಇಲ್ಲಿನ ಮಲ್ಲಿಕಾರ್ಜುನ ನಗರ, ರೇಣುಕಾನಗರ ಬಡಾವಣೆಯಲ್ಲಿ ರಸ್ತೆ ಹಾಳಾಗಿದೆ. ಒಂದು ವರ್ಷದ ಹಿಂದೆ ದುರಸ್ತಿಗೆ ಅನುಮತಿ ದೊರೆತಿತ್ತು. ಆದರೆ ಯಾವುದೋ ಕಾರಣಕ್ಕೆ ಕೆಲಸ ನಿಂತುಹೋಗಿದೆ. ಬೀದಿ ದೀಪಗಳೂ ಸರಿಯಾಗಿ ಬೆಳಗುತ್ತಿಲ್ಲ.

ಬೀದಿ ದೀಪಗಳನ್ನು ತಕ್ಷಣವೇ ಸರಿಪಡಿಸಲಾಗುವುದು. ರಸ್ತೆ ದುರಸ್ತಿ ಕೆಲಸ ಯಾಕೆ ಸ್ಥಗಿತಗೊಂಡಿದೆ ಎಂದು ತಿಳಿದುಕೊಂಡು ಆದಷ್ಟು ಬೇಗ ತಾತ್ಕಾಲಿಕ ದುರಸ್ತಿಗಾದರೂ ಕ್ರಮ ಕೈಗೊಳ್ಳುತ್ತೇನೆ. ಜತೆಗೆ ಅನುದಾನದ ಲಭ್ಯತೆ ನೋಡಿಕೊಂಡು ಪಕ್ಕಾ ರಸ್ತೆ ನಿರ್ಮಿಸಲಾಗುವುದು.

*ಜಿ.ಎಂ. ಹುಬಳೆಪ್ಪನವರ, ಸಾಧನಕೇರಿ, ಹುಡ್ಕೊ ಕಾಲೊನಿ: ಕಳೆದ ತಿಂಗಳು ಮಳೆ ಬಂದಾಗ ಒಳಚರಂಡಿಯ ಒಂದು ಮ್ಯಾನ್‌ ಹೋಲ್‌ ಕಟ್ಟಿಕೊಂಡಿತ್ತು. ಅದನ್ನು ಸರಿಪಡಿಸಲು ನಮ್ಮ ಮನೆಯ ಬಳಿಯ ಮ್ಯಾನ್‌ ಹೋಲ್‌ ತೆರೆದು ಸರಿಪಡಿಸಿದ್ದಾರೆ. ಆದರೆ ಮುಚ್ಚಳ ಒಡೆದುಹೋಗಿದೆ.

ನಿಮ್ಮ ಸಮಸ್ಯೆಯನ್ನು ನಮ್ಮ ಅಧಿಕಾರಿಗಳು ಗಮನಕ್ಕೆ ತೆಗೆದುಕೊಂಡಿದ್ದಾರೆ. ಮ್ಯಾನ್‌ ಹೋಲ್‌ ಸರಿಪಡಿಸಲು ತಕ್ಷಣವೇ ಕ್ರಮ ವಹಿಸುತ್ತೇನೆ.

*ಸತೀಶ ತೋಟದ, ಆತ್ಮಾನಂದ ನಗರ, ಧಾರವಾಡ: ಈ ಭಾಗದಲ್ಲಿ ಹೊಸದಾಗಿ ಒಳಚರಂಡಿ ಕೆಲಸ ನಡೆದಿರುವುದರಿಂದ ಹಾಗೂ ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ರಸ್ತೆ ಹಾಳಾಗಿದೆ. ಜತೆಗೆ ಮೆಹಬೂಬ್ ನಗರ– ಹೊಸ ಬಸ್‌ ನಿಲ್ದಾಣದ ರಸ್ತೆಯ ಪಕ್ಕದ ಗಟಾರವನ್ನು ಸ್ವಚ್ಛಗೊಳಿಸಿ ಹೂಳನ್ನು ರಸ್ತೆಯ ಪಕ್ಕದಲ್ಲೇ ಬಿಡಲಾಗಿದೆ.

ನಮ್ಮ ಜತೆ ಒಳಚರಂಡಿ ಮಂಡಳಿಯ ಅಧಿಕಾರಿಗಳೂ ಇದ್ದಾರೆ. ರಸ್ತೆಯನ್ನು ಸರಿಪಡಿಸಲು ಅವಕಾಶವಿದ್ದು ಆದಷ್ಟು ಬೇಗ ದುರಸ್ತಿ ಮಾಡಲಾಗುವುದು. ಜತೆಗೆ ನೀವು ಹೇಳಿದ ಮೆಹಬೂಬನಗರ–ಹೊಸ ಬಸ್‌ ನಿಲ್ದಾಣ ರಸ್ತೆಯ ಪಕ್ಕದಲ್ಲಿ ಹಾಗೇ ಬಿಡಲಾಗಿರುವ ಹೂಳನ್ನು ತೆಗೆಸಿ ಹಾಕಿಸುತ್ತೇವೆ.

*ಚನ್ನಪ್ಪ ಯಳ್ಳಟ್ಟಿ, ಮುದುಗಲ್ ಲೇ ಔಟ್, ಕೇಶ್ವಾಪುರ: ವಾರ್ಡ್‌ ನಂಬರ್‌ 48ರ ಕೇಶ್ವಾಪುರದ ಮುಖ್ಯ ರಸ್ತೆ ಸಂಪೂರ್ಣ ಹಾಳಾಗಿದೆ. ನೀವು ಬಂದು ನೋಡಿ ಸರಿಪಡಿಸಿ.

ನಾಳೆ (ಶನಿವಾರ) ಬೆಳಿಗ್ಗೆ ಅಲ್ಲಿಗೆ ಬಂದು ರಸ್ತೆಯನ್ನು ವೀಕ್ಷಿಸಿ ದುರಸ್ತಿಗೆ ಶೀಘ್ರ ಕ್ರಮ ಕೈಗೊಳ್ಳುತ್ತೇನೆ.

*ರವಿ ಶೆಟ್ಟರ್, ವಿದ್ಯಾನಗರ, ಹುಬ್ಬಳ್ಳಿ: ಹೊಸೂರು ವೃತ್ತದಲ್ಲಿ ಆರ್ಯವೈಶ್ಯ ಬ್ಯಾಂಕ್‌ ಇರುವ ಕಟ್ಟಡವನ್ನು ಇಲ್ಲಿನ ಮುಖ್ಯ ರಾಜಕಾಲುವೆ ಮೇಲೆ ನಿರ್ಮಿಸಲಾಗಿದೆ. ಇದು ಅನಧಿಕೃತ ಕಟ್ಟಡ ಎಂದು ಈ ಹಿಂದೆ ‘ಪ್ರಜಾವಾಣಿ’ಯಲ್ಲೇ ವರದಿಯಾಗಿತ್ತು. ಇದನ್ನು ಲೀಸ್‌ ಆಧಾರದ ಮೇಲೆ ಕಟ್ಟಲಾಗಿತ್ತು. 16 ವರ್ಷಗಳ ಲೀಸ್‌ ಅವಧಿ ಕೂಡ ಮುಗಿದಿದೆ ಎಂದು ಸುದ್ದಿ ಬಂದಿತ್ತು. ಇದನ್ನು ಕೆಡವಿ ರಾಜಕಾಲುವೆಯಲ್ಲಿ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಿ.

ಈಗ ಉಣಕಲ್‌–ಗಬ್ಬೂರು ಕ್ರಾಸ್‌ ರಸ್ತೆಯ ಬಳಿ ಇರುವ ರಾಜಕಾಲುವೆ ಸಮೀಕ್ಷಾ ಕಾರ್ಯ ನಡೆದಿದೆ. ಅದು ಮುಗಿದ ಬಳಿಕ ನೀವು ಹೇಳಿದ ರಾಜಕಾಲುವೆಯನ್ನು ಸಮೀಕ್ಷೆ ಮಾಡಿ, ನೀವು ಹೇಳಿದ ಕಟ್ಟಡದ ಲೀಸ್‌ ಅವಧಿ ಮುಗಿದಿದ್ದರೆ ಹಾಗೂ ನೀವು ಹೇಳಿದಂತೆ ಅದು ಅನಧಿಕೃತ ಕಟ್ಟಡವಿದ್ದರೆ ಅದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು.

*ಗಂಗಾಧರಯ್ಯ ಹಿರೇಮಠ, ವನಸಿರಿ ನಗರ, ಎಸ್‌ಡಿಎಂ ಡೆಂಟಲ್‌ ಕಾಲೇಜಿನ ಹಿಂಭಾಗ: ನಮ್ಮ ಏರಿಯಾದಲ್ಲಿ ವಾರಕ್ಕೊಮ್ಮೆ ನೀರು ಬರುತ್ತದೆ. ಅಷ್ಟು ದಿನಗಳ ಕಾಲ ತುಂಬಿಕೊಂಡು ಇಟ್ಟುಕೊಳ್ಳಲು ಆಗದು. ಕುಡಿಯುವ ನೀರಿನ ಬೇರೆ ಮೂಲವೂ ಇಲ್ಲ. ಆದಷ್ಟು ಬೇಗ ನೀರು ಕೊಡಲು ವ್ಯವಸ್ಥೆ ಮಾಡಿ. ಜತೆಗೆ ರಸ್ತೆಗಳ ಅಕ್ಕ ಪಕ್ಕದಲ್ಲಿ ಮುಳ್ಳುಕಂಟಿಗಳು ಬೆಳೆದಿದ್ದು ಅವುಗಳನ್ನು ತೆರವುಗೊಳಿಸಿ.

ಈಗ ಐದು ದಿನಕ್ಕೊಮ್ಮೆ ನೀರು ಕೊಡಲು ಪಾಲಿಕೆ ಯೋಜಿಸಿದೆ. ಇನ್ನೊಂದು ವಾರದಲ್ಲಿ ಎಲ್ಲ ಕಡೆ ಐದು ದಿನಕ್ಕೊಮ್ಮೆ ನೀರು ಕೊಡಲಾಗುತ್ತಿದೆ. ರಸ್ತೆ ಪಕ್ಕದ ಮುಳ್ಳು ಕಂಟಿಗಳನ್ನು ತೆಗೆಸಲು ತಕ್ಷಣ ಕ್ರಮ ಕೈಗೊಳ್ಳಲಾಗುವುದು.

*ಪುಂಡಲೀಕ ಜಿ. ಭಟ್‌, ಮುದುಗಲ್‌ ಲೇ ಔಟ್, ಕೇಶ್ವಾಪುರ: ಮುದುಗಲ್‌ ಲೇಔಟ್‌ನ ಒಂದು ಮತ್ತು ಎರಡನೇ ಕ್ರಾಸ್‌ನಲ್ಲಿ ರಸ್ತೆ ಹಾಳಾಗಿದೆ. ಬೀದಿ ದೀಪಗಳು ಸಹ ಉರಿಯುತ್ತಿಲ್ಲ. ಈ ಎರಡೂ ಸಮಸ್ಯೆಗಳ ಬಗ್ಗೆ ಪಾಲಿಕೆಗೆ ದೂರು ನೀಡಲಾಗಿದೆ. ಆದರೂ ಕ್ರಮ ಕೈಗೊಂಡಿಲ್ಲ.

ಬೀದಿ ದೀಪಗಳನ್ನು ಅಳವಡಿಸಲು ತಕ್ಷಣ ಅಧಿಕಾರಿಗಳಿಗೆ ಹೇಳುತ್ತೇನೆ. ರಸ್ತೆ ದುರಸ್ತಿಯನ್ನೂ ಆದಷ್ಟು ಶೀಘ್ರದಲ್ಲಿ ಮಾಡಿಸಲಾಗುವುದು.

*ಎಚ್‌.ಎಸ್‌. ನಾವಳ್ಳಿ, ಜವಾಹರ ಲೇಔಟ್‌, ವಿದ್ಯಾನಗರ: ವಾರಕ್ಕೊಮ್ಮೆ ನೀರು ಬರುತ್ತಿದೆ. ಸಾವಿರದಿಂದ 1,500 ಲೀಟರ್‌ವರೆಗೆ ನೀರು ಬರುತ್ತದೆ. ಇಷ್ಟು ನೀರು ಒಂದು ವಾರಕ್ಕೆ ಸಾಕಾಗುತ್ತದೆಯೇ, ನೀವೇ ಹೇಳಿ. ಜತೆಗೆ ನೀರು ಪ್ರೆಷರ್‌ ಕೂಡ ಇರುವುದಿಲ್ಲ.

ಇನ್ನೊಂದು ವಾರದಲ್ಲಿ ನೀರಿನ ಸಮಸ್ಯೆ ಬಗೆಹರಿಯುತ್ತದೆ. ನೀರಿನ ಪ್ರೆಷರ್ ಇರುವುದಿಲ್ಲ ಎಂದು ಹೇಳಿದ್ದೀರಿ. ಈ ಬಗ್ಗೆ ನಮ್ಮ ಎಂಜಿನಿಯರ್‌ಗಳು ಬಂದು ಪರಿಶೀಲಿಸಿ ಸರಿಪಡಿಸುತ್ತಾರೆ.

*ಸುಭಾಸ ತೆಗ್ಗಿ, ಗಿರಣಿ ಚಾಳ್‌: ನಮ್ಮ ಏರಿಯಾದಲ್ಲಿ ಸ್ವಚ್ಛತೆ ಇಲ್ಲದಂತಾಗಿದೆ. ಈ ಭಾಗದಲ್ಲಿ ಡೆಂಗಿ ಜ್ವರವೂ ಜೋರಾಗಿದೆ. ಇಂತಹ ಪರಿಸ್ಥಿತಿಗೆ ಸಾರ್ವಜನಿಕರೇ ಕಾರಣರು ಎಂಬುದು ನನ್ನ ಅಭಿಪ್ರಾಯ. ಎಲ್ಲೆಂದರಲ್ಲಿ ಕಸ ಚೆಲ್ಲುವವರಿಗೆ ಹೆಚ್ಚಿನ ದಂಡ ವಿಧಿಸಿದರೆ ಬಹುಷಃ ಕಡಿವಾಣ ಬೀಳಬಹುದು. ಪಾಲಿಕೆಯಿಂದ ದಂಡ ಹಾಕಲು ಸಾಧ್ಯವಿಲ್ಲವೆ?

ನಗರ ಹಾಗೂ ನಿಮ್ಮ ಸುತ್ತಲಿನ ಪರಿಸರದ ಸ್ವಚ್ಛತೆ ಕಾಯುವಲ್ಲಿ ಸಾರ್ವಜನಿಕರ ಸಹಭಾಗಿತ್ವವೂ ಮುಖ್ಯ. ಕಸ ಚೆಲ್ಲುವವರ ವಿರುದ್ಧ, ಕಸವನ್ನು ಸಮರ್ಪಕವಾಗಿ ವಿಂಗಡಣೆ ಮಾಡದವರಿಗೆ ದಂಡ ವಿಧಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ನಿಮ್ಮ ಪ್ರದೇಶದಲ್ಲಿ ಸೊಳ್ಳೆಗಳ ನಿಗ್ರಹಕ್ಕೆ ಫಾಗಿಂಗ್‌ ಮಾಡಿಸಲಾಗುವುದು.

*ನೇತ್ರಾವತಿ, ಲೈನ್ ಬಜಾರ್‌, ಕೊರವರ ಓಣಿ: ನಾವಿರುವ ಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಕ್ರಮ ಸಾಧ್ಯವೆ?

ಖಂಡಿತ. ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಜಾರಿಯಲ್ಲಿದೆ. ಬೀದಿ ನಾಯಿಗಳನ್ನು ಹಿಡಿದು, ಅವುಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯನ್ನು ಮಾಡಿಬಿಡಲಾಗುವುದು.

ನೆರೆ–ಹೊರೆ ಸಮಿತಿ

ಅವಳಿ ನಗರದಲ್ಲಿ 540ಕ್ಕೂ ಹೆಚ್ಚು ಉದ್ಯಾನಗಳಿವೆ. ಅವುಗಳ ನಿರ್ವಹಣೆಗೆ ಸ್ಥಳೀಯರನ್ನೊಳಗೊಂಡ ನೆರೆ–ಹೊರೆ ಸಮಿತಿ ರಚಿಸಲು ಉದ್ದೇಶಿಸಲಾಗಿದೆ ಎಂದು ಇಟ್ನಾಳ ಹೇಳಿದರು.

20ಕ್ಕೂ ಹೆಚ್ಚು ಉದ್ಯಾನಗಳ ನಿರ್ವಹಣೆಯನ್ನು ಸ್ಥಳೀಯ ಸಮಿತಿಗಳಿಗೆ ವಹಿಸಲಾಗಿದೆ. ಕೆಲವು ಕಡೆಗಳಲ್ಲಿ ರೋಟರಿ, ಲಯನ್ಸ್ ಹಾಗೂ ಸ್ಥಳೀಯರು ನಿರ್ವಹಣೆಗೆ ಆಸಕ್ತಿ ತೋರಿದ್ದಾರೆ. ಸಮಿತಿ ರಚಿಸಿ, ಪಾಲಿಕೆ ವತಿಯಿಂದ ಅನುದಾನ ನೀಡಲಾಗುವುದು. ಜೊತೆಗೆ ದಾನಿಗಳ ನೆರವು ಪಡೆದು ನಿರ್ವಹಣೆ ಮಾಡಲಾಗುವುದು. ಈ ಕುರಿತ ಪ್ರಸ್ತಾವವನ್ನು ಈಗಾಗಲೇ ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದೆ ಎಂದರು.

ಕಾರು ಬಿಟ್ಟು ಬೈಕ್‌ನಲ್ಲಿ ಅಡ್ಡಾಡಿ ಸಾಹೇಬ್ರೆ...

‘ನೀವು ಎ.ಸಿ.ಕಾರು ಬಿಟ್ಟು, ಬೈಕ್‌ನಲ್ಲಿ ಅಡ್ಡಾಡಿ ಸಾಹೇಬ್ರೆ... ಅವಳಿ ನಗರದ ಸಮಸ್ಯೆ ಏನು ಅಂತ ಅರ್ಥ ಆಗುತ್ತೆ. ರಸ್ತೆಗಳು ಗುಂಡಿಬಿದ್ದು ಹಾಳಾಗಿವೆ. ಬೈಕ್‌ ಸವಾರರು ದೂಳು ಕುಡಿದುಕೊಂಡು ಓಡಾಡುತ್ತಾ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಕಾರವಾರ ರಸ್ತೆ ಇಕ್ಕೆಲಗಳಲ್ಲಿ ಕೆಲವರು ಫುಟ್‌ಪಾತ್‌ ಅತಿಕ್ರಮಣ ಮಾಡಿ ಮಳಿಗೆಗಳನ್ನು ಹಾಕಿಕೊಂಡಿದ್ದಾರೆ. 20 ವರ್ಷಗಳಿಂದ ಪಾಲಿಕೆಯಲ್ಲಿ ಬೀಡುಬಿಟ್ಟ ಅಧಿಕಾರಿಗಳು ಭ್ರಷ್ಟಾಚಾರಿಗಳಾಗಿದ್ದಾರೆ. ಅಧಿಕಾರಿಗಳು ಜನಸೇವೆ ಮರೆತು ಬ್ಯುಸಿನೆಸ್‌ ಮಾಡುತ್ತಾ ಇದ್ದಾರೆ. ಬಸ್‌ ನಿಲ್ದಾಣ ಗಬ್ಬು ನಾರುತ್ತಿದೆ. ನೀವು ಪಾಲಿಕೆ ಕಮಿಷನರ್‌ ಆಗಿ ಎರಡು ತಿಂಗಳಾಯಿತು. ನಿಮಗೆ ಇದೆಲ್ಲ ತಿಳಿದಿಲ್ಲವೇನು? ಗಟ್ಟಿ ನಿರ್ಧಾರ ಮಾಡಿ, ಕಟ್ಟುನಿಟ್ಟಿನ ಆದೇಶ ನೀಡಿ. ಹಳಿ ತಪ್ಪಿರುವ ಪಾಲಿಕೆ ಆಡಳಿತವನ್ನು ಸರಿದಾರಿಗೆ ತನ್ನಿ. ಭ್ರಷ್ಟಾಚಾರದ ನಡೆದಿರುವ ಬಗ್ಗೆ ನನ್ನಲ್ಲಿ ಸೂಕ್ತ ದಾಖಲೆಗಳಿವೆ. ನಿಮಗೆ ಬೇಕು ಅಂದ್ರೆ ಎಲ್ಲವನ್ನೂ ಕೊಡುತ್ತೇನೆ. ಒಟ್ಟಿನಲ್ಲಿ ಭ್ರಷ್ಟರ ಮೇಲೆ ಒಂದು ಕಣ್ಣಿಡಿ ಸಾಹೇಬ್ರೆ...ಎಂದು ಕಮರಿಪೇಟೆ ನಿವಾಸಿ ರಮೇಶ ಬಾಂಢಗಿ ದೂರುಗಳ ಸುರಿಮಳೆ ಸುರಿಸಿದರು.

ಇದಕ್ಕೆಲ್ಲ ಪ್ರತಿಕ್ರಿಯಿಸಿದ ಇಟ್ನಾಳ, ‘ಈಗಾಗಲೇ ವಿದ್ಯಾನಗರ, ಓಲ್ಡ್‌ ಇನ್‌ಕಮ್‌ ಟ್ಯಾಕ್ಸ್‌ ರಸ್ತೆಯಲ್ಲಿ ರಸ್ತೆ ಅತಿಕ್ರಮಣ ತೆರವುಗೊಳಿಸಿದ್ದೇವೆ. ಕಾರವಾರ ರಸ್ತೆಯ ಪಾದಚಾರಿ ಮಾರ್ಗದ ಅತಿಕ್ರಮಣ ತೆರವುಗೊಳಿಸಲು ಕೂಡಲೇ ಕ್ರಮಕೈಗೊಳ್ಳುತ್ತೇನೆ. ದೂಳು ತೆಗೆಯಲು ಸ್ವೀಪಿಂಗ್‌ ಯಂತ್ರಗಳಿವೆ. ಆದರೆ, ವಾತಾವರಣದಲ್ಲಿ ತೇವಾಂಶ ಇದ್ದಾಗ ಇವು ವರ್ಕ್‌ ಮಾಡುವುದಿಲ್ಲ. ಹಾಗಾಗಿ ಬಿಸಿಲು ಬಂದ ನಂತರ ದೂಳು ತೆಗೆಸುತ್ತೇನೆ. ಪಾಲಿಕೆ ವ್ಯಾಪ್ತಿ ದೊಡ್ಡದಿದ್ದು, ಎಲ್ಲ ಕೆಲಸಗಳನ್ನು ಆದ್ಯತೆ ಮೇಲೆ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

ಉಣಕಲ್ ಕೆರೆ ಕಳೆ ತೆರವಿಗೆ ಕ್ರಮ

ಹುಬ್ಬಳ್ಳಿ ನಗರದ ಉಣಕಲ್ ಕೆರೆಯಲ್ಲಿ ಬೆಳೆದಿರುವ ‘ಪಾತಾಳಗಂಗೆ’ ಕಸ ತೆರವಿಗೆ ಶೀಘ್ರ ಕ್ರಮವಹಿಸಲಾಗುವುದು. ಈ ಕುರಿತು ಜಿಲ್ಲಾಧಿಕಾರಿ ಜತೆ ಚರ್ಚಿಸಿದ್ದು, ದೇಶಪಾಂಡೆ ಫೌಂಡೇಷನ್ ಸಹಯೋಗದಲ್ಲಿ ಕಳೆ ತೆರವುಗೊಳಿಸಿ ಕೆರೆಯನ್ನು ಅತ್ಯುತ್ತಮ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಇಟ್ನಾಳ್ ಹೇಳಿದರು.

ಬ್ರಿಜ್ ಶಾಶ್ವತ ನಿರ್ಮಾಣಕ್ಕೆ ಕ್ರಮ: ನಗರದ ವಿದ್ಯಾವನ ಬಡಾವಣೆಯಿಂದ ಬನಶಂಕರಿ ಬಡಾವಣೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಯ ಬ್ರಿಜ್ ಪ್ರವಾಹಕ್ಕೆ ಕೊಚ್ಚಿಹೋಗಿದ್ದು, ಅದನ್ನು ಶಾಶ್ವತವಾಗಿ, ಗಟ್ಟಿಮುಟ್ಟಾಗಿ ನಿರ್ಮಿಸಲು ಕ್ರಮವಹಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.