ADVERTISEMENT

ಸಂಬಳ ಕೇಳಿದ್ದಕ್ಕೆ ಪೌರ ಕಾರ್ಮಿಕನ ಮೇಲೆ ಹಲ್ಲೆ

ಗುತ್ತಿಗೆದಾರನ ಕಡೆಯವರ ದರ್ಪ; ಹಲ್ಲೆಗೊಳಗಾದವನ ವಿರುದ್ಧವೂ ಪ್ರಕರಣ!

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 14:27 IST
Last Updated 7 ಏಪ್ರಿಲ್ 2020, 14:27 IST

ಹುಬ್ಬಳ್ಳಿ: ಬಾಕಿ ಸಂಬಳ ಕೇಳಿದ ಪಾಲಿಕೆಯ ಗುತ್ತಿಗೆ ಪೌರ ಕಾರ್ಮಿಕನ ಮೇಲೆ, ಮೇಲ್ವಿಚಾರಕ ಹಾಗೂ ಆತನ ಸಹಚರರು ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ವಲಯ 11ರಲ್ಲಿ ಕೆಲಸ ಮಾಡುತ್ತಿರುವ ವೆಂಕಟೇಶ ಸೋಮಪ್ಪ ಟಗರಗುಂಟಿ ಹಲ್ಲೆಗೊಳಗಾಗಿದ್ದು, ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆದು ಸದ್ಯ ಚೇತರಿಸಿಕೊಂಡಿದ್ದಾರೆ.

‘ಗುತ್ತಿಗೆದಾರ ಶ್ರೀನಿವಾಸ ಟಗರಗುಂಟಿ ಅವರ ಬಳಿ ಕೆಲಸ ಮಾಡುತ್ತಿರುವ ನಾನು, ಬಾಕಿ ಸಂಬಳ ಕೇಳಲು ಮಾರ್ಚ್ 29ರಂದು ಪೌರ ಕಾರ್ಮಿಕರ ಯೂನಿಯನ್ ಕಚೇರಿಗೆ ಹೋಗಿದ್ದೆ. ಅಲ್ಲಿದ್ದ ಮೇಲ್ವಿಚಾರಕ ಶಿವು ಹರಿಜನ, ಕೇವಲ 2 ತಿಂಗಳ ಸಂಬಳ ನೀಡುವುದಾಗಿ ಹೇಳಿದ. ಲಾಕ್‌ಡೌನ್ ಇರುವುದರಿಂದ 8 ತಿಂಗಳ ಸಂಬಳ ನೀಡುವಂತೆ ಕೋರಿದೆ’ ಎಂದು ಹಲ್ಲೆಗೊಳಗಾದ ವೆಂಕಟೇಶ ಟಗರಗುಂಟಿ ಆರೋಪಿಸಿದರು.

‘ಬಾಕಿ ಸಂಬಳ ನೀಡದೆ, ನನ್ನನ್ನು ಅವಾಚ್ಯವಾಗಿ ನಿಂದಿಸಿದ ಶಿವು, ತನ್ನ ಸಹಚರರಾದ ಆನಂದ ಹರಿಜನ ಮತ್ತು ಮಂಜು ಬೂದೂರು ಜತೆ ಸೇರಿಕೊಂಡು ಮನಬಂದಂತೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ. ಘಟನೆ ಬಳಿಕ, ಉಪನಗರ ಠಾಣೆಗೆ ಹೋಗಿ ದೂರು ಕೊಟ್ಟು, ಕಿಮ್ಸ್‌ಗೆ ಹೋಗಿ ಚಿಕಿತ್ಸೆ ಪಡೆದೆ. ಆದರೂ ಇದುವರೆಗೆ, ನನ್ನ ಬ್ಯಾಂಕ್ ಖಾತೆಗೆ ವೇತನ ಪಾವತಿಸಿಲ್ಲ’ ಎಂದರು.

ADVERTISEMENT

‘ಘಟನೆ ಕುರಿತು ಪಾಲಿಕೆ ಆಯುಕ್ತರು ಮತ್ತು ಪೊಲೀಸ್ ಕಮಿಷನರ್‌ಗೂ ದೂರು ಕೊಟ್ಟಿದ್ದೇನೆ. ಆದರೆ, ಇದುವರೆಗೆ ಯಾರೂ ಕ್ರಮ ಕೈಗೊಂಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ನಾಲ್ವರ ವಿರುದ್ಧವೂ ಕ್ರಮ’:‘ಗುತ್ತಿಗೆ ಪೌರ ಕಾರ್ಮಿಕರ ಎಂಟು ತಿಂಗಳ ಸಂಬಳ ಬಾಕಿ ಇರುವುದು ನಿಜ. ಪಾಲಿಕೆಯಿಂದ ನಮಗೆ 4 ತಿಂಗಳು ವೇತನವಷ್ಟೇ ಬಿಡುಗಡೆಯಾಗಿದೆ. ವೆಂಕಟೇಶ ಟಗರಗುಂಟಿ ಅನಾರೋಗ್ಯದ ನಿಮಿತ್ತ ಎರಡು ತಿಂಗಳು ಕೆಲಸಕ್ಕೆ ಬಂದಿರಲಿಲ್ಲ. ಮುಂಗಡವಾಗಿ ₹15 ಸಾವಿರ ಕೂಡ ಪಡೆದಿದ್ದರು. ಹಾಗಾಗಿ, 2 ತಿಂಗಳ ಸಂಬಳ ನೀಡುವುದಾಗಿ ಮೇಲ್ವಿಚಾರಕ ಹೇಳಿದ್ದ. ವೆಂಕಟೇಶ ಮೇಲಿನ ಹಲ್ಲೆ ಮಾಡಿದ್ದು ತಪ್ಪು. ಲಾಕ್‌ಡೌನ್ ಮುಗಿದ ಬಳಿಕ, ನಾಲ್ವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಪೌರ ಕಾರ್ಮಿಕರ ಗುತ್ತಿಗೆದಾರ ಶ್ರೀನಿವಾಸ ಟಗರಗುಂಟಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪರಸ್ಪರ ಪ್ರಕರಣ:‘ಘಟನೆಗೆ ಸಂಬಂಧಿಸಿದಂತೆ ವೆಂಕಟೇಶ ಟಗರಗುಂಟಿ ನೀಡಿರುವ ದೂರಿಗೆ ಪ್ರತಿಯಾಗಿ, ವೆಂಕಟೇಶ ವಿರುದ್ದ ಶಿವು ಹರಿಜನ ಕೂಡ ದೂರು ಕೊಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ’ ಎಂದು ಉಪನಗರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಎಸ್‌.ಕೆ. ಹೊಳೆಯಣ್ಣವರ ಪ್ರತಿಕ್ರಿಸಿದರು.

ಗಮನಕ್ಕೆ ಬಂದಿಲ್ಲ:‘ಗುತ್ತಿಗೆ ಪೌರ ಕಾರ್ಮಿಕನ ಮೇಲಿನ ಹಲ್ಲೆ ಘಟನೆ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಮಾಹಿತಿ ಪಡೆದು, ಸಂಬಂಧಪಟ್ಟವರ ಜತೆ ಮಾತನಾಡುತ್ತೇನೆ’ ಎಂದು ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ತಿಳಿಸಿದರು.

ಸುಳ್ಳು ಸಂದೇಶ ಹಂಚಿಕೆ: ಮಹಿಳೆ ವಿರುದ್ಧ ಪ್ರಕರಣ
ಹುಬ್ಬಳ್ಳಿ:
ಕೋವಿಡ್–19 ರೋಗಕ್ಕೆ ಸಂಬಂಧಿಸಿದಂತೆ, ಸುಳ್ಳು ಸುದ್ದಿಯನ್ನು ವಾಟ್ಸ್‌ಆ್ಯಪ್‌ನಲ್ಲಿ ಹಂಚಿಕೊಂಡ ಮಹಿಳೆಯೊಬ್ಬರ ವಿರುದ್ಧ ಇಲ್ಲಿನ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5ರವರೆಗೆ ಮನೆಯ ಹೊರಗೆ ಯಾರೂ ಬರಬಾರದು. ಕೋವಿಡ್– 19 ಕೊಲ್ಲುವ ಸಲುವಾಗಿ ಗಾಳಿಯಲ್ಲಿ ಮೆಡಿಸಿನ್ ಸಿಂಪಡಿಸಲಿದ್ದಾರೆ. ಈ ಮಾಹಿತಿಯನ್ನು ನಿಮ್ಮ ಕುಟುಂಬದವರು, ಸಂಬಂಧಿಕರು ಹಾಗೂ ಕುಟುಂಬದವರೊಂದಿಗೆ ಹಂಚಿಕೊಳ್ಳಿ’ ಎಂಬ ಸುಳ್ಳು ಸಂದೇಶವನ್ನು ಮಹಿಳೆ ವಾಟ್ಸ್‌ಆ್ಯಪ್‌ನಲ್ಲಿ ಹಂಚಿಕೊಂಡಿದ್ದರು.

ಮಹಿಳೆ ಹಂಚಿಕೊಂಡ ಸುಳ್ಳು ಸುದ್ದಿ ವಿರುದ್ಧ ಸೈಬರ್ ಕ್ರೈಂ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ನೀಡಿದ ದೂರಿನ ಮೇರೆಗೆ, ಐಪಿಸಿ 505 (1)ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಉಪನಗರ ಠಾಣೆ ಪೊಲೀಸರು ತಿಳಿಸಿದರು.

ಮದ್ಯ ಸಿಗದೆ ಆತ್ಮಹತ್ಯೆ: ಲಾಕ್‌ಡೌನ್‌ನಿಂದಾಗಿ ಮದ್ಯ ಸಿಗದೆ ಬೇಸತ್ತ ಕೆ.ಕೆ. ನಗರದ‌ ಶಾನ ನವಾಜ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದ್ಯವ್ಯಸನಿಯಾಗಿದ್ದ ಅವರು, ಮನೆಯಲ್ಲಿ ಎಲ್ಲರೂ ಮಲಗಿದ್ದಾಗ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಬೆಂಡಿಗೇರಿ ಠಾಣೆ ಪೊಲೀಸರು ತಿಳಿಸಿದ್ದಾರೆ.

₹40 ಸಾವಿರ ವಂಚನೆ: ಫೋನ್‌ ಪೇ ಕಸ್ಟಮರ್ ಕೇರ್ ಹೆಸರಿನಲ್ಲಿ ಕರೆ ಮಾಡಿದ ಅಪರಿಚಿತನೊಬ್ಬ, ಧಾರವಾಡದ ವ್ಯಕ್ತಿಯೊಬ್ಬರ ಬ್ಯಾಂಕ್‌ ಖಾತೆಯಿಂದ ₹40 ಸಾವಿರ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.

ಗ್ರಾಹಕ ಪ್ರತಿನಿಧಿ ಹೆಸರಿನಲ್ಲಿ ಕರೆ ಮಾಡಿದ ಅಪರಿಚಿತನ ನಿರ್ದೇಶನದಂತೆ, ವ್ಯಕ್ತಿ ಫೋನ್‌ ಪೇ ಆ್ಯಪ್‌ ಅನ್ನು ಆಪರೇಟ್ ಮಾಡಿದ್ದಾರೆ. ಈ ವೇಳೆ ಅವರ ಖಾತೆಯಿಂದ ಹಣ ವರ್ಗಾವಣೆಯಾಗಿದೆ. ಈ ಕುರಿತು ವಿಚಾರಿಸಲು ಮತ್ತೆ ಕರೆ ಮಾಡಿದಾಗ, ಅಪರಿಚಿತ ಮೊಬೈಲ್ ಸಂಖ್ಯೆ ಸ್ವಿಚ್‌ ಆಫ್ ಮಾಡಿಕೊಂಡಿದ್ದ ಎಂದು ಹುಬ್ಬಳ್ಳಿಯ ಸೈಬರ್ ಠಾಣೆ ಪೊಲೀಸರು ತಿಳಿಸಿದರು.

ದಂಡ ವಸೂಲಿ:ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಕಾರ್ಯಾಚರಣೆ ನಡೆಸಿರುವ ಅವಳಿನಗರದ ಪೊಲೀಸರು, 116 ಪ್ರಕರಣ ದಾಖಲಿಸಿ ₹55,700 ದಂಡ ವಸೂಲಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.