ADVERTISEMENT

ಹುಬ್ಬಳ್ಳಿ | ಇ–ಕೆವೈಸಿ: ಶೇ 83ರಷ್ಟು ಸಾಧನೆ

ಪಿ.ಎಂ. ಕಿಸಾನ್ ಸಮ್ಮಾನ್ ಯೋಜನೆ: ರೈತರಿಗೆ ಇನ್ನೂ ಇದೆ ಅವಕಾಶ

​ಪ್ರಜಾವಾಣಿ ವಾರ್ತೆ
Published 13 ಜುಲೈ 2023, 5:31 IST
Last Updated 13 ಜುಲೈ 2023, 5:31 IST
ಡಾ.ಎಂ. ಕಿರಣ್‌ಕುಮಾರ್
ಡಾ.ಎಂ. ಕಿರಣ್‌ಕುಮಾರ್   

ಗಣೇಶ ವೈದ್ಯ

ಹುಬ್ಬಳ್ಳಿ: ರೈತರಿಗೆ ಆರ್ಥಿಕ ನೆರವು ನೀಡುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 14ನೇ ಕಂತಿನ ಹಣ ಪಡೆಯಲು ನೋಂದಾಯಿಸಿಕೊಂಡ ರೈತರು ಇ–ಕೆವೈಸಿ ಮಾಡುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಧಾರವಾಡ ಜಿಲ್ಲೆಯಲ್ಲಿ ಈವರೆಗೆ ಶೇ 83ರಷ್ಟು ರೈತರು ಮಾತ್ರ ಇ–ಕೆವೈಸಿ ಪೂರೈಸಿದ್ದಾರೆ.

ಈ ಮೊದಲು, ಜೂನ್ 30ರ ಒಳಗಾಗಿ ರೈತರು ಇ–ಕೆವೈಸಿ ಮಾಡಿಸುವುದು ಕಡ್ಡಾಯ ಎಂದು ಸರ್ಕಾರ ತಿಳಿಸಿತ್ತು. ಆದರೆ ಜುಲೈ 10 ಕಳೆದರೂ ಜಿಲ್ಲೆಯಲ್ಲಿ ಇ–ಕೆವೈಸಿ ಮಾಡಿಸಬೇಕಿರುವ ರೈತರ ಪ್ರಮಾಣ ಇನ್ನೂ ಶೇ 17ರಷ್ಟು ಇದೆ. ಸಾಕಷ್ಟು ಜಾಗೃತಿ ಮೂಡಿಸುವ, ತಿಳಿವಳಿಕೆ ನೀಡುವ ಕಾರ್ಯದ ಹೊರತಾಗಿಯೂ ಶೇ 100ರಷ್ಟು ಸಾಧನೆ ಮಾಡುವಲ್ಲಿ ಜಿಲ್ಲೆ ವಿಫಲವಾಗಿದೆ.

ADVERTISEMENT

ಜಿಲ್ಲೆಯಲ್ಲಿ ಯೋಜನೆಗೆ 1.22 ಲಕ್ಷಕ್ಕೂ ಅಧಿಕ ರೈತರು ನೋಂದಣಿ ಮಾಡಿಸಿಕೊಂಡಿದ್ದು, ಇ–ಕೆವೈಸಿ ಮಾಡಿಸಿದ ರೈತರ ಸಂಖ್ಯೆ 1.01 ಲಕ್ಷ ಮಾತ್ರ. ಇನ್ನೂ 20,882 ರೈತರು ಇ–ಕೆವೈಸಿ ಮಾಡಿಸುವುದು ಬಾಕಿ ಇದೆ.

ಅಳ್ನಾವರ ನಂ.1: ಶೇ 97ರಷ್ಟು ಇ–ಕೆವೈಸಿ ಪೂರೈಸುವ ಮೂಲಕ ಜಿಲ್ಲೆಗೆ ಅಳ್ನಾವರ ತಾಲ್ಲೂಕು ಮೊದಲ ಸ್ಥಾನದಲ್ಲಿದೆ. ಅಣ್ಣಿಗೇರಿ ಮತ್ತು ಹುಬ್ಬಳ್ಳಿ ಶಹರ ತಾಲ್ಲೂಕುಗಳು ತಲಾ ಶೇ 91ರಷ್ಟು ಸಾಧನೆಯೊಂದಿಗೆ ಎರಡನೇ ಸ್ಥಾನದಲ್ಲಿವೆ. ನಂತರದ ಸ್ಥಾನಗಲ್ಲಿ ಕ್ರಮವಾಗಿ ಕಲಘಟಗಿ (ಶೇ 87), ಕುಂದಗೋಳ (ಶೇ 85), ಧಾರವಾಡ (ಶೇ 84), ಹುಬ್ಬಳ್ಳಿ (ಶೇ 83) ತಾಲ್ಲೂಕುಗಳಿವೆ. ಕೇವಲ ಶೇ 78ರಷ್ಟು ಸಾಧನೆಯೊಂದಿಗೆ ನವಲಗುಂದ ತಾಲ್ಲೂಕು ಕೊನೆಯ ಸ್ಥಾನದಲ್ಲಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಅಳ್ನಾವರದಲ್ಲಿ 303 ನೋಂದಾಯಿತ ರೈತರಿದ್ದರೆ, ಹುಬ್ಬಳ್ಳಿ ಶಹರದಲ್ಲಿ ಈ ಸಂಖ್ಯೆ ಕೇವಲ 79.

ಕೆಲವು ರೈತರು ಮಾಹಿತಿ ಕೊರತೆಯಿಂದಾಗಿ ಇ–ಕೆವೈಸಿ ಮಾಡಿಸದೇ ಇದ್ದರೆ, ಕೆಲವು ಕಡೆಗಳಲ್ಲಿ ರೈತರು ಕಂಪ್ಯೂಟರ್ ಸೇವಾ ಕೇಂದ್ರಕ್ಕೆ ತೆರಳಿದಾಗ ಸರ್ವರ್ ಸಮಸ್ಯೆ ಮುಂತಾದ ಕಾರಣಗಳಿಂದಲೂ ಇ–ಕೆವೈಸಿ ಮಾಡಿಸುವುದು ಸಾಧ್ಯವಾಗಿಲ್ಲ.

‘ಕೆಲವು ರೈತರು ಮರಣ ಹೊಂದಿರುತ್ತಾರೆ. ಅಂಥ ಪ್ರಕರಣಗಳಲ್ಲಿ ಮರಣ ಪ್ರಮಾಣಪತ್ರಗಳನ್ನು ಲಗತ್ತಿಸಿ ನಾವು ವರದಿ ಸಲ್ಲಿಸಬೇಕು. ಅಂಥ ರೈತರ ಹೆಸರುಗಳನ್ನು ಫಲಾನುಭವಿಗಳ ಪಟ್ಟಿಯಿಂದ ಕೈಬಿಡಲಾಗುತ್ತದೆ. ಹೀಗಾಗಿ ಕಳೆದ ಕಂತು ಪಡೆದ ರೈತರ ಸಂಖ್ಯೆಗೂ ಈ ಬಾರಿ ಇ–ಕೆವೈಸಿ ಮಾಡಿಸಬೇಕಿರುವ ರೈತರ ಸಂಖ್ಯೆಗೂ ಕೊಂಚ ವ್ಯತ್ಯಾಸ ಆಗುವ ಸಾಧ್ಯತೆ ಇರುತ್ತದೆ’ ಎಂದು ಜಿಲ್ಲೆಯ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಎಂ. ಕಿರಣ್‌ಕುಮಾರ್ ತಿಳಿಸಿದರು.

ಜೂನ್ 30 ಕೊನೇ ದಿನ ಆಗಿದ್ದರೂ ಈ ಪ್ರಕ್ರಿಯೆ ನಿರಂತರ. ಈಗಲೂ ಇ–ಕೆವೈಸಿ ಮಾಡಿಸಲು ಅವಕಾಶವಿದೆ. ಈಗ ಮಾಡಿಸಿದ ರೈತರಿಗೂ ಹಿಂದಿನ ಅವಧಿಯ ಮೊತ್ತವು ಖಾತೆಗೆ ಜಮೆಯಾಗುತ್ತದೆ.
ಡಾ.ಎಂ. ಕಿರಣ್‌ಕುಮಾರ್ ಜಂಟಿ ನಿರ್ದೇಶಕ ಕೃಷಿ ಇಲಾಖೆ ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.