ADVERTISEMENT

ಜಿಲ್ಲೆಯಲ್ಲಿ ಹೆಚ್ಚಿದ ಆನ್‌ಲೈನ್‌ ವಂಚನೆ; ಪೊಲೀಸ್‌ ಕಾನ್‌ಸ್ಟೆಬಲ್‌ ಅಮಾನತು

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2021, 8:51 IST
Last Updated 20 ನವೆಂಬರ್ 2021, 8:51 IST

ಹುಬ್ಬಳ್ಳಿ: ಠಾಣೆಯಲ್ಲಿ ಅಶಿಸ್ತಿನಿಂದ ನಡೆದುಕೊಂಡ ಆರೋಪದ ಮೇಲೆ ಕಸಬಾ ಪೊಲೀಸ್‌ ಠಾಣೆಯ ಕಾನ್‌ಸ್ಟೆಬಲ್ ಒಬ್ಬರನ್ನು ಅಮಾನತು ಮಾಡಲಾಗಿದೆ.

ನ. 8ರಂದು ಜನ್ನತ್‌ ನಗರದಲ್ಲಿ ಕೆಲವರು ತಲ್ವಾರ್‌ ಹಾಗೂ ಬಡಿಗೆ ಹಿಡಿದುಕೊಂಡು ಹೊಡೆದಾಡುತ್ತಿದ್ದಾರೆ ಎಂದು ಠಾಣೆಗೆ ಮಾಹಿತಿ ಬಂದಾಗ ಪೊಲೀಸ್‌ ಸಿಬ್ಬಂದಿ ಅಲ್ಲಿಗೆ ಹೋಗಿದ್ದಾರೆ. ಅದೇ ಸಮಯಕ್ಕೆ ಪೊಲೀಸ್ ಸಹಾಯವಾಣಿ 112 ಸಿಬ್ಬಂದಿ ಕೂಡ ಅಲ್ಲಿಗೆ ಹೋಗಿದ್ದು, ಪೊಲೀಸರ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ಪ್ರಕರಣದಲ್ಲಿ ಪೊಲೀಸ್‌ ಠಾಣೆಯಲ್ಲಿ ಅಶಿಸ್ತಿನಿಂದ ನಡೆದುಕೊಂಡಿದ್ದಾರೆ ಎಂದು ಕಾನ್‌ಸ್ಟೆಬಲ್‌ನನ್ನು ಅಮಾನತು ಮಾಡಲಾಗಿದೆ.

ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಕಮಿಷನರ್‌ ಲಾಬೂರಾಮ್‌ ಇದನ್ನು ಖಚಿತಪಡಿಸಿದ್ದಾರೆ.

ADVERTISEMENT

ನಾಲ್ವರ ವಿಚಾರಣೆ: ಗದಗ ರಸ್ತೆಯ ರೈಲ್ವೆ ಲೊಕೊ ಶೆಡ್‌ ಎದುರು ರೈಲ್ವೆ ಉದ್ಯೋಗಿ ಚಂದ್ರಶೇಖರ ನಾಯ್ಡು ಅವರಿಗೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಜನರನ್ನು ಬಂಧಿಸಿದ್ದು, ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಗುರುವಾರ ನಡೆದಿದ್ದ ಘಟನೆಯಲ್ಲಿ ಚಾಕು ಇರಿಯಲಾಗಿತ್ತು. ರೈಲ್ವೆ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು.

₹9.83 ಕೋಟಿ ವಂಚನೆ: ಭಾರತೀಯ ಸೇನೆಯಲ್ಲಿದ್ದು, ನಿಮ್ಮ ಆಸ್ಪತ್ರೆಯಲ್ಲಿ ನಮ್ಮ ಪರಿಚಯದವರಿಗೆ ಚಿಕಿತ್ಸೆ ನೀಡಬೇಕು. ಆಸ್ಪತ್ರೆಯ ಖರ್ಚನ್ನು ಆರ್ಮಿ ಬ್ಯಾಂಕ್‌ ಖಾತೆಯಿಂದ ಪಾವತಿಸುತ್ತೇನೆ ಎಂದು ನಂಬಿಸಿ ಪೇಟಿಎಂ ನಂಬರ್‌ ಪಡೆದು ವ್ಯಕ್ತಿಯೊಬ್ಬ ಡಾ. ಅಶೋಕ ಕಲಮದಾನಿ ಅವರ ಖಾತೆಯಿಂದ ತನ್ನ ಖಾತೆಗೆ ಒಟ್ಟು ₹2.37 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಸೈಬರ್‌ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್‌ನ ಕ್ರೆಡಿಟ್‌ ಕಾರ್ಡ್ ವಿಭಾಗದ ಸಿಬ್ಬಂದಿ ಎಂದು ಹೇಳಿಕೊಂಡು ಕರೆ ಮಾಡಿದ ವ್ಯಕ್ತಿಯೊಬ್ಬ ಹಳೇ ಹುಬ್ಬಳ್ಳಿಯ ಎಸ್‌.ಕೆ. ಕುಲಕರ್ಣಿ ಅವರನ್ನು ನಂಬಿಸಿ ₹2.79 ಲಕ್ಷ ವಂಚಿಸಿದ್ದಾನೆ. ನಿಮ್ಮ ಕ್ರೆಡಿಟ್‌ ಕಾರ್ಡ್‌ನ ಬಳಕೆ ಮೊತ್ತದ ಮಿತಿ ಹೆಚ್ಚಿಸುತ್ತೇನೆ ಎಂದು ನಂಬಿಸಿ ಕಾರ್ಡ್‌ನ ಸಿವಿವಿ ಸಂಖ್ಯೆ ಮತ್ತು ಒಟಿಪಿ ಪಡೆದು ಮೋಸ ಮಾಡಿದ್ದಾನೆ. ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಹಕರ ಸಹಾಯವಾಣಿ ಹೆಸರಲ್ಲಿ ಮೋಸ: ಎಸ್‌ಬಿಐ ಗ್ರಾಹಕರ ಸಹಾಯವಾಣಿಯ ಅಧಿಕಾರಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಧಾರವಾಡದ ಸೈದಾಪುರ ಗಲ್ಲಿಯ ದೀಪಾಲಿ ಎಂ. ಹೆಬ್ಬಳ್ಳಿ ಎಂಬುವರಿಗೆ ₹50 ಸಾವಿರ ವಂಚಿಸಿದ್ದಾನೆ.

ದೀಪಾಲಿ ಎಸ್‌ಬಿಐ ಬ್ಯಾಂಕ್‌ನಲ್ಲಿ ನೆಫ್ಟ್ ಮಾಡುವ ಬಗ್ಗೆ ಮಾಹಿತಿ ಕೇಳಲು ಹೋದಾಗ ಅಲ್ಲಿದ್ದ ವ್ಯಕ್ತಿಯೊಬ್ಬ ಯೊನೊ ಎಸ್‌ಬಿಐ ಆ್ಯಪ್‌ ಮೂಲಕ ಹಣ ವಿನಿಮಯ ಮಾಡಿದರೆ ಸುಲಭವಾಗುತ್ತದೆ ಎಂದಿದ್ದಾನೆ. ಅಲ್ಲಿ ಇಂಟರ್‌ನೆಟ್‌ ಪ್ರೊಫೈಲ್‌ ಪಾಸ್‌ವರ್ಡ್ ಹೊಂದಿಕೆಯಾಗದ ಕಾರಣ ಗ್ರಾಹಕರ ಸಹಾಯವಾಣಿ ಸಿಬ್ಬಂದಿ ಎಂದು ನಂಬಿಸಿ ಕರೆ ಮಾಡಿಸಿ, ಯೊನೊ ಆ್ಯಪ್‌ನ ಪಾಸ್‌ವರ್ಡ್‌ ಪಡೆದು ಹಣ ವಂಚಿಸಿದ್ದಾನೆ.

₹4.17 ಲಕ್ಷ ವಂಚನೆ: ವೆಂಚರ್‌ ಕ್ಯಾಪಿಟಲ್‌ ಕಂಪನಿಯ ಪಾಲುದಾರ ಎಂದು ಪರಿಚಯ ಮಾಡಿಕೊಂಡು, ಉದ್ಯಮಕ್ಕೆ ಹೊರದೇಶದ ಕಂಪನಿಗಳಿಂದ ಹೂಡಿಕೆ ಮಾಡಿಸುತ್ತೇನೆ ಎಂದು ನಂಬಿಸಿ ಹಣ ಪಡೆದ ವ್ಯಕ್ತಿಯೊಬ್ಬ ಧಾರವಾಡದಉದ್ಯಮಿ ಆರ್‌.ಆರ್‌. ವರ್ಣೇಕರ್‌ ಅವರಿಗೆ ₹4.17 ಲಕ್ಷ ವಂಚಿಸಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.