ADVERTISEMENT

ಎಸ್‌ಡಿಪಿಐನ 32 ಕಾರ್ಯಕರ್ತರು ವಶಕ್ಕೆ

ಅನುಮತಿ ಇಲ್ಲದೆ ರ‍್ಯಾಲಿ ನಡೆಸಲು ಮುಂದಾದ ಆರೋಪ; ಮಧ್ಯಾಹ್ನ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2019, 11:13 IST
Last Updated 9 ಅಕ್ಟೋಬರ್ 2019, 11:13 IST
ಎಸ್‌ಡಿಪಿಐ ಕಾರ್ಯಕರ್ತರನ್ನು ಮಧ್ಯಾಹ್ನದವರೆಗೆ ಸಿಎಎಆರ್‌ ಮೈದಾನದಲ್ಲಿ ಇರಿಸಲಾಯಿತು
ಎಸ್‌ಡಿಪಿಐ ಕಾರ್ಯಕರ್ತರನ್ನು ಮಧ್ಯಾಹ್ನದವರೆಗೆ ಸಿಎಎಆರ್‌ ಮೈದಾನದಲ್ಲಿ ಇರಿಸಲಾಯಿತು   

ಹುಬ್ಬಳ್ಳಿ: ಅನುಮತಿ ಪಡೆಯದೆ ಪ್ರತಿಭಟನಾ ರ‍್ಯಾಲಿ ನಡೆಸಲು ಮುಂದಾದ ಎಸ್‌ಡಿಪಿಐನ (ಸೋಷಿಯಲಿಸ್ಟ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ) 32 ಕಾರ್ಯಕರ್ತರನ್ನು ಕಸಬಾಪೇಟೆ ಪೊಲೀಸರು ಬುಧವಾರ ವಶಕ್ಕೆ ಪಡೆದು, ಆನಂತರ ಬಿಡುಗಡೆ ಮಾಡಿದರು.

ನೆರೆ ಸಂತ್ರಸ್ತರಿಗೆ ಪರಿಹಾರ ವಿಳಂಬ ಖಂಡಿಸಿ, ಹಳೇ ಹುಬ್ಬಳ್ಳಿಯ ಕಸಬಾಪೇಟೆಯಲ್ಲಿರುವ ಪಕ್ಷದ ಕಚೇರಿಯಿಂದ ರ‍್ಯಾಲಿ ಹಮ್ಮಿಕೊಳ್ಳಲಾಗಿತ್ತು. 11 ಗಂಟೆ ಹೊತ್ತಿಗೆ ಪಕ್ಷದ ಕಾರ್ಯಕರ್ತರು ಕಚೇರಿಯತ್ತ ಜಮಾಯಿಸಿ, ರ‍್ಯಾಲಿಗೆ ಸಿದ್ಧತೆ ನಡೆಸುತ್ತಿದ್ದರು.

ಆಗ ಸ್ಥಳಕ್ಕೆ ಬಂದ ಇನ್‌ಸ್ಪೆಕ್ಟರ್ ಶ್ಯಾಮರಾಜ ಸಜ್ಜನ, ‘ಪೂರ್ವಾನುಮತಿ ಪಡೆಯದಿರುವುದರಿಂದ ರ‍್ಯಾಲಿಗೆ ಅವಕಾಶ ನೀಡುವುದಿಲ್ಲ. ಬೇಕಿದ್ದರೆ, ಮಿನಿ ವಿಧಾನಸೌಧಕ್ಕೆ ಹೋಗಿ ಮನವಿ ಕೊಡಿ’ ಎಂದು ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರತಿಭಟನಾಕಾರರು, ‘ನೆರೆ ಪರಿಹಾರ ವಿಳಂಬ ಖಂಡಿಸಿ ರ‍್ಯಾಲಿ ಹಮ್ಮಿಕೊಂಡಿದ್ದೆವೆಯೇ ಹೊರತು, ಬೇರೆ ಯಾವುದೇ ಉದ್ದೇಶವಿಲ್ಲ. ಹಾಗಾಗಿ, ನಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ’ ಎಂದರು.

ADVERTISEMENT

ಕಾರ್ಯಕರ್ತರು ಮನವೊಲಿಕೆಗೆ ಬಗ್ಗದಿದ್ದಾಗ ಮತ್ತಷ್ಟು ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಯಿಸಿಕೊಂಡ ಇನ್‌ಸ್ಪೆಕ್ಟರ್, ಕಾರ್ಯಕರ್ತರನ್ನು ಬಂಧಿಸಿ ವಾಹನದಲ್ಲಿ ಸಿಎಎಆರ್ ಮೈದಾನಕ್ಕೆ ಕರೆ ತಂದರು. ಬಳಿಕ, ಎಲ್ಲರಿಗೂ ಎಚ್ಚರಿಕೆ ನೀಡಿ ಮಧ್ಯಾಹ್ನ 3ರ ಹೊತ್ತಿಗೆ ಬಿಡುಗಡೆ ಮಾಡಿದರು.

‘ಅನುಮತಿ ಪಡೆಯದೆ ರ‍್ಯಾಲಿ ನಡೆಸಲು ಎಸ್‌ಡಿಪಿಐ ಕಾರ್ಯಕರ್ತರು ಮುಂದಾಗಿದ್ದರು. ಹಾಗಾಗಿ, ಮುನ್ನೆಚ್ಚರಿಕೆ ಕ್ರಮವಾಗಿ ಪ್ರತಿಭಟನಾಕಾರರನ್ನು ಬಂಧಿಸಿ, ಬಳಿಕ ಬಿಟ್ಟು ಕಳಿಸಲಾಯಿತು’ ಎಂದು ಇನ್‌ಸ್ಪೆಕ್ಟರ್ ಶ್ಯಾಮರಾಜ ಸಜ್ಜನ ‘ಪ್ರಜಾವಾಣಿ’ಗೆ ತಿಳಿಸಿದರು.

ಅನುಮತಿ ಕೊಟ್ಟು ನಿರಾಕರಣೆ

‘ಪ್ರತಿಭಟನಾ ರ‍್ಯಾಲಿಗೆ ನಾಲ್ಕು ದಿನದ ಹಿಂದೆ ಅನುಮತಿ ಕೊಟ್ಟಿದ್ದ ಪೊಲೀಸರು, ಮಂಗಳವಾರ ಕರೆ ಮಾಡಿ ರ‍್ಯಾಲಿಯಲ್ಲಿ ಭಾಗವಹಿಸುವವರ ಮಾಹಿತಿ ಕೇಳಿದರು. ಇದು ಸಾರ್ವಜನಿಕ ರ‍್ಯಾಲಿಯಾಗಿರುವುದರಿಂದ ಪದಾಧಿಕಾರಿಗಳನ್ನು ಹೊರತುಪಡಿಸಿ, ಉಳಿದವರ ಮಾಹಿತಿ ಸಿಗುವುದಿಲ್ಲ ಎಂದೆವು. ಹಾಗಾದರೆ, ನಿಮಗೆ ಅನುಮತಿ ನೀಡುವುದಿಲ್ಲ ಎಂದರು. ಬೆಳಿಗ್ಗೆ ರ‍್ಯಾಲಿ ಆರಂಭವಾಗಬೇಕೆನ್ನುವಷ್ಟರಲ್ಲಿ ಪೊಲೀಸರು ಸ್ಥಳಕ್ಕೆ ಬಂದು ಎಲ್ಲರನ್ನೂ ವಶಕ್ಕೆ ಪಡೆದು, ಬಳಿಕ ಬಿಟ್ಟು ಕಳಿಸಿದರು. ನ್ಯಾಯ ರೀತಿಯಲ್ಲಿ ರ‍್ಯಾಲಿ ನಡೆಸಲು ಬಿಡದ ಪೊಲೀಸರ ಕ್ರಮವನ್ನು ಪಕ್ಷದ ತೀವ್ರವಾಗಿ ಖಂಡಿಸುತ್ತದೆ’ ಎಂದು ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಇರ್ಷಾದ ಅಹಮದ್ ರಿತ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.