ADVERTISEMENT

ಹುಬ್ಬಳ್ಳಿಯಿಂದ ಶೀಘ್ರದಲ್ಲಿ ಕಾರ್ಗೊ ಸೇವೆ: ಜೋಶಿ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2019, 10:51 IST
Last Updated 7 ಸೆಪ್ಟೆಂಬರ್ 2019, 10:51 IST
   

ಹುಬ್ಬಳ್ಳಿ: ಇಲ್ಲಿನ ವಿಮಾನ ನಿಲ್ದಾಣದಿಂದ ಶೀಘ್ರದಲ್ಲಿಯೇ ಕಾರ್ಗೊ ಸೇವೆ ಪುನರಾರಂಭವಾಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.

ಸ್ಪೆಸ್‌ಜೆಟ್ ಸಂಸ್ಥೆ ಪ್ರಾಯೋಗಿಕವಾಗಿ ಪ್ರಯಾಣಿಕ ವಿಮಾನದ ಜೊತೆ ಕಾರ್ಗೊ ಸೌಲಭ್ಯ ಆರಂಭಿಸಿತ್ತು. ಆದರೆ, ಈ ಸಂಸ್ಥೆಯ ಎಲ್ಲ ವಿಮಾನಗಳು ವಾಣಿಜ್ಯನಗರಿಯಿಂದ ಹಾರಾಟ ರದ್ದು ಮಾಡಿರುವುದರಿಂದ ಕಾರ್ಗೊ ಸೇವೆ ಈಗ ಇಲ್ಲದಂತಾಗಿದೆ.

‘ವಿಮಾನ ನಿಲ್ದಾಣದ ಹಳೇ ಕಟ್ಟಡವನ್ನು ಕಾರ್ಗೊ ಕಚೇರಿ ಮಾಡುವ ಉದ್ದೇಶವಿದೆ. ಶೀಘ್ರದಲ್ಲಿಯೇ ಈ ಸೌಲಭ್ಯ ಆರಂಭವಾಗಲಿದೆ’ ಎಂದು ಇಲ್ಲಿನ ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದ ಠಾಕರೆ ‘ಪ್ರಜಾವಾಣಿ’ಗೆ ಖಚಿತಪಡಿಸಿದರು.

ADVERTISEMENT

‘ಹಿಂದೆ ಹುಬ್ಬಳ್ಳಿಯಿಂದ ರದ್ದಾಗಿದ್ದ ಚೆನ್ನೈ ಮತ್ತು ಅಹಮಬಾದ್‌ ನಡುವಿನ ವಿಮಾನಯಾನ ಪುನರಾರಂಭವಾಗಿದೆ. ಇಂಡಿಗೊ ಸಂಸ್ಥೆ ಮುಂಬೈಗೆ ಮತ್ತೊಂದು ವಿಮಾನ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸಿದೆ. ಅಕ್ಟೋಬರ್‌ನಲ್ಲಿ ಏರ್‌ ಇಂಡಿಯಾ ಹುಬ್ಬಳ್ಳಿಯಿಂದ–ಹೈದರಾಬಾದ್‌ಗೆ ಸಂಚಾರ ಆರಂಭಿಸಲಿದೆ’ ಎಂದು ಹೇಳಿದರು.

ಹುಬ್ಬಳ್ಳಿ–ಚೆನ್ನೈ ವಿಶೇಷ ರೈಲಿಗೆ 14ರಂದು ಚಾಲನೆ

ನೈರುತ್ಯ ರೈಲ್ವೆಯು ವಾಣಿಜ್ಯನಗರಿಯಿಂದ ಚೆನ್ನೈಗೆ ವಿಶೇಷ ರೈಲಿನ ಸಂಚಾರ ಆರಂಭಿಸಲಿದ್ದು, ಇದಕ್ಕೆ ಸೆ. 14ರಂದು ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಚಾಲನೆ ಸಿಗಲಿದೆ.

ಈಗ ಪ್ರತಿ ಗುರುವಾರ ವಾಸ್ಕೊ–ಚೆನ್ನೈ ಮತ್ತು ಪ್ರತಿ ಶನಿವಾರ ಹುಬ್ಬಳ್ಳಿ ಚೆನ್ನೈ ನಡುವೆ ರೈಲು ಸಂಚರಿಸುತ್ತಿದೆ. ಈ ರೈಲು ದಾವಣೆಗೆರೆ, ಅರಸೀಕೆರೆ, ತುಮಕೂರು, ಯಶವಂತಪುರ, ಬಂಗಾರಪೇಟೆ ಮಾರ್ಗದ ಮೂಲಕ 835 ಕಿ.ಮೀ. ದೂರ ಕ್ರಮಿಸಿ ಚೆನ್ನೈಗೆ ತಲುಪುತ್ತಿದೆ.

ಹೊಸದಾಗಿ ಆರಂಭವಾಗಲಿರುವ ರೈಲು ಹುಬ್ಬಳ್ಳಿಯಿಂದ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಗುಂತಕಲ್‌ ಮಾರ್ಗದ ಮೂಲಕ ಚೆನ್ನೈ ಮುಟ್ಟಲಿದೆ. ಈ ಮಾರ್ಗದ ಮೂಲಕ ಚೆನ್ನೈಗೆ ತಲುಪಲು ನಗರದಿಂದ 710 ಕಿ.ಮೀ. ಆಗುತ್ತದೆ. ಇದರಿಂದ 125 ಕಿ.ಮೀ. ಪ್ರಯಾಣದ ಅವಧಿ ಕಡಿಮೆಯಾಗಲಿದೆ. ಹೊಸ ರೈಲು ಆರಂಭವಾಗುವ ವಿಷಯವನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಖಚಿತಪಡಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.