ಹುಬ್ಬಳ್ಳಿ: ‘ಮಹದಾಯಿ ಮತ್ತು ಕಳಸಾ ಬಂಡೂರಿ ಯೋಜನೆ ಅನುಷ್ಠಾನದಲ್ಲಿ ಸಮಸ್ಯೆಯಾಗಿದ್ದೆಲ್ಲ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ. ನಾವು ಆಡಳಿತಕ್ಕೆ ಬಂದ ನಂತರ ಶೇ 95ರಷ್ಟು ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದೇವೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಳಸಾ ಬಂಡೂರಿ ಹೋರಾಟ ಸಮಿತಿ ಸದಸ್ಯರ ಜೊತೆ ಶನಿವಾರ ರಾತ್ರಿ ನಗರದಲ್ಲಿ ಸಭೆ ನಡೆಸಿ ಚರ್ಚಿಸಿದ್ದೇನೆ. ಯೋಜನೆ ಅನುಷ್ಠಾನ ಕುರಿತು ಯಾವೆಲ್ಲ ತಾಂತ್ರಿಕ ಸಮಸ್ಯೆಗಳಿವೆ, ಅವುಗಳಿಗೆ ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು ಎನ್ನುವ ಕುರಿತು ತಿಳಿಸಿದ್ದೇನೆ. ನಿಯೋಗದೊಂದಿಗೆ ದೆಹಲಿಗೆ ಬರುವುದಾಗಿ ತಿಳಿಸಿದ್ದಾರೆ. ಬಂದರೆ, ಸಂಬಂಧಪಟ್ಟವರನ್ನು ಭೇಟಿ ಮಾಡಿಸುತ್ತೇನೆ’ ಎಂದರು.
‘ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕ ರಾಜ್ಯಗಳಿಗೆ ಸಂಬಂಧಿಸಿದ ನೀರಾವರಿ ಸಮಸ್ಯೆ ಇದಾಗಿದ್ದು, ನ್ಯಾಯಾಧೀಕರಣದಲ್ಲಿ ವಿಚಾರಣಾ ಹಂತದಲ್ಲಿದೆ. ಯಾವೆಲ್ಲ ಕ್ರಮ ಕೈಗೊಳ್ಳಬಹುದು ಎನ್ನುವ ಕುರಿತು ರಾಜ್ಯ ಸರ್ಕಾರದ ಜೊತೆಯೂ ಚರ್ಚಿಸಿದ್ದೇನೆ. ಕೋರ್ಟ್‌ನಲ್ಲಿ ಪ್ರಕರಣ ಇರುವುದರಿಂದ, ಮಾಧ್ಯಮದ ಎದುರು ಕೈಗೊಂಡ ಕ್ರಮಗಳನ್ನು ಹೇಳಲು ಸಾಧ್ಯವಿಲ್ಲ’ ಎಂದು ಹೇಳಿದರು.
‘ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಹಿಂದೂ ವಿರೋಧಿ ಶಕ್ತಿಗಳ ಹಸ್ತಕ್ಷೇಪ ಜೋರಾಗಿವೆ. ಪ್ರಕರಣದ ತನಿಖೆ ಎಸ್‌ಐಟಿ ನಡೆಸುತ್ತಿದ್ದು, ಸತ್ಯಾಂಶ ಏನೆಂಬುದು ಹೊರಬರಲಿ. ತನಿಖೆ ನಡೆಯುತ್ತಿರುವಾಗಲೇ ಅಪರಾಧ ನಡೆದು ಹೋಗಿದೆ ಎನ್ನುವಂತೆ ಮಾತನಾಡುವುದು ಸರಿಯಲ್ಲ. ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರೇ ತನಿಖೆಯನ್ನು ಸ್ವಾಗತಿಸಿದ್ದಾರೆ’ ಎಂದ ಸಚಿವ ಜೋಶಿ, ‘ಕೇರಳ ಸರ್ಕಾರಕ್ಕೂ ಈ ಪ್ರಕರಣಕ್ಕೂ ಏನು ಸಂಬಂಧ’ ಎಂದು ಪ್ರಶ್ನಿಸಿದರು.
‘ಮಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್ ಏಳು ಮಂದಿ ಹಿಂದೂ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಪ್ರಕರಣದ ಆರಂಭದ ದಿನಗಳಲ್ಲಿ ಕಾಂಗ್ರೆಸ್, ಹಿಂದೂ ಭಯೋತ್ಪಾದಕರು ಎಂದು ಪಾಕಿಸ್ತಾನದ ಭಯೋತ್ಪಾದಕರನ್ನು ರಕ್ಷಿಸುವ ಕೆಲಸ ಮಾಡಿತ್ತು. ದೇಶದ ಹಿತ ಮರೆತು ಪಾಕಿಸ್ತಾನದ ಪರವಾಗಿ ಮೃದುಧೋರಣೆ ಹೊಂದಿದ್ದರು. ದೇಶದಲ್ಲಿ ಹಿರೋ ಆಗುವುದನ್ನು ಬಿಟ್ಟು, ಪಾಕಿಸ್ತಾನದಲ್ಲಿ ಹೀರೊ ಆಗಲು ಯತ್ನಿಸಿದ್ದರು. ಕಾಂಗ್ರೆಸ್ ವರ್ತನೆ ದುರ್ದೈವದ ಸಂಗತಿಯಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಸಮರ್ಪಕವಾಗಿ ಗೊಬ್ಬರ ಪೂರೈಸಿ’
‘ಪ್ರಸ್ತುತ ವರ್ಷ ಮಳೆ ಉತ್ತಮವಾಗಿದ್ದು ಬಿತ್ತನೆಯೂ ಹೆಚ್ಚಳವಾಗಿದೆ. ಹೀಗಾಗಿ ಯೂರಿಯಾ ಗೊಬ್ಬರದ ಅಗತ್ಯತೆ ಹೆಚ್ಚಾಗಿದೆ. ಲಭ್ಯವಿದ್ದಷ್ಟು ಪ್ರಮಾಣದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಗೊಬ್ಬರ ಪೂರೈಕೆ ಮಾಡಿದ್ದು ರೈತರಿಗೆ ಸರಿಯಾಗಿ ಪೂರೈಸಲು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಕೇಂದ್ರ ಸಚಿವ ಜೋಶಿ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.