ಹುಬ್ಬಳ್ಳಿ: ‘ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿರುವುದು ಖಂಡನೀಯ. ಕೂಡಲೇ ಪಾಕಿಸ್ತಾನದ ಮೇಲೆ ಕೇಂದ್ರ ಸರ್ಕಾರ ಯುದ್ಧ ಸಾರಬೇಕು’ ಎಂದು ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ಥಳೀಯ ಮುಸ್ಲಿಮರ ಸಹಕಾರ ಇಲ್ಲದೆ ಈ ದಾಳಿ ನಡೆದಿರಲು ಸಾಧ್ಯವಿಲ್ಲ. ಇದು ಪೂರ್ವಯೋಜಿತ ಕೃತ್ಯ. ಇದಕ್ಕೆ ಜಮ್ಮು ಮತ್ತು ಕಾಶ್ಮೀರ, ಕೇಂದ್ರ ಸರ್ಕಾರದ ಗುಪ್ತಚರ ಇಲಾಖೆಯ ವೈಪಲ್ಯ ಕಾರಣ’ ಎಂದರು.
‘ಸಂವಿಧಾನದ 370ನೇ ವಿಧಿ ಅಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರ ಜಮ್ಮು –ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿವೆ. ನಾಲ್ಕು ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಿದ್ದು, ₹2 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆಯಾಗಿದೆ. ಮಕ್ಕಳು ನಿರ್ಭೀತಿಯಿಂದ ಶಾಲೆಗೆ ಹೋಗುತ್ತಿದ್ದಾರೆ. ಇದು ಅವರಿಗೆ ಬೇಕಿಲ್ಲ’ ಎಂದರು.
‘ಇಸ್ಲಾಮಿಕ್ ಭಯೋತ್ಪಾದನೆಗೆ ಈ ಘಟನೆ ಸ್ಪಷ್ಟ ಉದಾಹರಣೆ. ಅವರಿಗೆ ಶಾಂತಿ ಬೇಡ, ಇಸ್ಲಾಂ ಮಾತ್ರ ಬೇಕಾಗಿದೆ. ಅಲ್ಲಿನ ಮುಸ್ಲಿಮರು ಭಯೋತ್ಪಾದನೆಯ ವಿರುದ್ಧ ಸಿಡಿದೇಳಬೇಕು. ಇಲ್ಲದಿದ್ದರೆ ಇಡೀ ದೇಶ ಅವರ ವಿರುದ್ಧ ನಿಲ್ಲುತ್ತದೆ’ ಎಂದು ಎಚ್ಚರಿಸಿದರು.
‘ಅಮರನಾಥ, ವೈಷ್ಣೋದೇವಿ ಯಾತ್ರಾರ್ಥಿಗಳ ಮೇಲೆಯೂ ಗುಂಡಿನ ದಾಳಿ ನಡೆಸಿ, ಭಯದ ವಾತಾವರಣ ಸೃಷ್ಟಿಸಲಾಗಿತ್ತು. ಪಹಲ್ಗಾಮ್‌ನಲ್ಲಿಯೂ ಈಗ ಅದೇ ರೀತಿ ಮಾಡಲಾಗಿದೆ. ರಾಜ್ಯದಲ್ಲಿಯೂ ಮುಸ್ಲಿಂ ಭಯೋತ್ಪಾದಕರು ಇದ್ದಾರೆ. ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಘಟನೆ, ಹಳೆ ಹುಬ್ಬಳ್ಳಿ ಗಲಭೆ ಇದಕ್ಕೆ ಉದಾಹರಣೆ’ ಎಂದರು.
‘ಭಯೋತ್ಪಾದನೆ ವಿಷಯದಲ್ಲಿ ಯಾವುದೇ ಪಕ್ಷಗಳು ರಾಜಕಾರಣ ಮಾಡಬಾರದು. ರಾಜ್ಯ ಸರ್ಕಾರ ತಕ್ಷಣ ಸ್ಪಂದಿಸಿ ಕನ್ನಡಿಗರ ರಕ್ಷಣೆಗೆ ಸಚಿವ ಸಂತೋಷ ಲಾಡ್ ಅವರನ್ನು ಅಲ್ಲಿಗೆ ಕಳಿಸಿರುವುದು ಶ್ಲಾಘನೀಯ’ ಎಂದು ಹೇಳಿದರು.
ರಾಜ್ಯ ಸೇರಿದಂತೆ ನೆರೆಯ ಕೇರಳ, ತಮಿಳುನಾಡಿನಲ್ಲಿಯೂ ಹಿಂದೂ ಕಾರ್ಯಕರ್ತರ ಕೊಲೆಗಳಾಗಿವೆ. ಹಿಂದೂಗಳು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು ಎಂದರು.
ಮಂಜು ಕಾಟಕರ, ಮಹಾಂತೇಶ, ಗುಣಧರ ದಂಡೋತಿ, ಬಸವರಾಜ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.