ಧಾರವಾಡ: ‘ಜಿಲ್ಲೆಯಲ್ಲಿ ಕೆಎಸ್‌ಎಫ್‌ಸಿ ಗೋದಾಮುಗಳಲ್ಲಿ ಸ್ವಚ್ಛತೆ ಮತ್ತು ಸೌಕರ್ಯಗಳ ಕೊರತೆ ಇದೆ. ಗೋದಾಮುಗಳ ನಿರ್ವಹಣೆ ಸಮರ್ಪಕವಾಗಿಲ್ಲ’ ಎಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಗೋದಾಮುಗಳಲ್ಲಿ ಪಕ್ಷಿ ತಡೆಗೆ ವ್ಯವಸ್ಥೆ ಮಾಡಿಲ್ಲ. ಅಗ್ನಿಶಾಮಕ ಪರಿಕರಗಳು ಇಲ್ಲ. ಧೂಮೀಕರಣ ಮಾಡಿಲ್ಲ. ಧಾನ್ಯಗಳ ಚೀಲಗಳನ್ನು ವ್ಯವಸ್ಥಿತವಾಗಿ ಜೋಡಿಸಿಲ್ಲ. ಗೋದಾಮಿಗೆ ಪೂರೈಕೆಯಾಗುವ ಪದಾರ್ಥಗಳ ತೂಕ, ಇತ್ಯಾದಿ ಪರಿಶೀಲನೆಗೆ ವ್ಯವಸ್ಥೆ ಮಾಡಿಲ್ಲ. ದಾಸ್ತಾನು ಟ್ರಕ್ ಶೀಟ್ ಮತ್ತು ಎಫ್‌ಸಿಐ ಶೀಟ್ ತಾಳೆ ಮಾಡಿದಾಗ ವ್ಯತ್ಯಾಸಗಳು ಕಂಡುಬಂದಿವೆ’ ಎಂದರು.
‘ಕೆಲವು ನ್ಯಾಯಬೆಲೆ ಅಂಗಡಿಗಳವರು ಮಾರ್ಗಸೂಚಿ, ಮಾನದಂಡಗಳನ್ನು ಪಾಲಿಸುತ್ತಿಲ್ಲ. ಕಲಘಟಗಿಯ ನ್ಯಾಯ ಬೆಲೆ ಅಂಗಡಿಯೊಂದರಲ್ಲಿ ತಪಾಸಣೆ ವೇಳೆ ₹20 ವಸೂಲಿ ಮಾಡುತ್ತಾರೆ, ಒಂದು ಕೆ.ಜಿ ಅಕ್ಕಿ ಕಡಿಮೆ ನೀಡುತ್ತಾರೆ ಎಂದು ಜನರು ತಿಳಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಲಘಟಗಿಯ ಅಕ್ಕಿ ಓಣಿ ಮಳಿಗೆಯಲ್ಲಿ ದಾಸ್ತಾನು ಮಾಡಿದ್ದ 18 ಕ್ವಿಂಟಲ್ ಪಡಿತರ ಅಕ್ಕಿ ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗಿದೆ’ ಎಂದು ತಿಳಿಸಿದರು.
ರಾಜಶೆಟ್ಟಿ ಮತ್ತು ಕುರಟ್ಟಿ ಎಂಬವರು ಜನರಿಂದ ಪಡಿತರ ಅಕ್ಕಿ ಅಕ್ರಮವಾಗಿ ಪಡೆದು ದಾಸ್ತಾನು ಮಾಡುತ್ತಾರೆ ಎಂದು ದೂರುಗಳಿವೆ. ಕೆಲವು ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ, ಪಾಲಿಶ್ ಮಾಡಿಸಿ ‘ಬಿ–ಟೆಲ್’ ಬ್ರಾಂಡ್ ಎಂದು ಹೆಸರಿನಲ್ಲಿ ಕೆ.ಜಿ. ₹ 42 ದರದಲ್ಲಿ ಮಾರಾಟ ಮಾಡುತ್ತಾರೆ ಎಂಬ ದೂರುಗಳು ಇವೆ. ಈ ಬಗ್ಗೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
‘ಶಾಲೆಗಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ಇಸ್ಕಾನ್‌ನವರು ಪೂರೈಸುತ್ತಾರೆ. ಈ ವಾಹನಗಳಲ್ಲಿ ಇಸ್ಕಾನ್ ಫಲಕ ಎದ್ದು ಕಾಣುವಂತೆ ಇದೆ. ಇದು ಸರ್ಕಾರದ ಯೋಜನೆ ಹೀಗಾಗಿ ಸರ್ಕಾರದ ಯೋಜನೆ ಹೆಸರು ದಪ್ಪ ಅಕ್ಷರಗಳಲ್ಲಿ ದೊಡ್ಡದಾಗಿ ಹಾಕುವಂತೆ ತಿಳಿಸಲಾಗಿದೆ’ ಎಂದರು.
ಅಲ್ಲದೇ ಆಹಾರಕ್ಕೆ ಬೆಳ್ಳುಳ್ಳಿ– ಈರುಳ್ಳಿ ಬಳಸುವಂತೆ ತಿಳಿಸಲಾಗಿದೆ. ಮೊಟ್ಟೆ ವಿತರಣೆಗೆ ಪ್ರತ್ಯೇಕ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಗೋಪಾಲ ಎಂ. ಬ್ಯಾಕೋಡ, ಆಯೋಗದ ಸದಸ್ಯರಾದ ಲಿಂಗರಾಜ ಕೋಟೆ, ಸುಮಂತ ರಾವ್, ಮಾರುತಿ ಎಂ. ದೊಡ್ಡಲಿಂಗಣ್ಣವರ, ರೋಹಿಣಿ ಪ್ರಿಯಾ, ವಿಜಯಲಕ್ಷ್ಮಿ ಇದ್ದರು.
ಆಹಾರ ಗುಣಮಟ್ಟ ಕಳಪೆ;
ಪರಿಶೀಲನೆಗೆ ಸೂಚನೆ ‘ಜಿಲ್ಲಾಸ್ಪತ್ರೆಯಲ್ಲಿ ಆಹಾರ ಗುಣಮಟ್ಟ ಚೆನ್ನಾಗಿಲ್ಲದಿರುವುದು ಕಂಡುಬಂದಿದೆ. ಆಹಾರ ಪರೀಕ್ಷಿಸಿ ವರದಿ ನೀಡುವಂತೆ ಆಹಾರ ಸುರಕ್ಷತಾ ಅಧಿಕಾರಿಗೆ ಸೂಚನೆ ನೀಡಲಾಗಿದೆ. ಗುಣಮಟ್ಟ ಕಳಪೆಯಾಗಿದ್ದರೆ ಟೆಂಡರ್ ರದ್ದುಪಡಿಸಿ ಹೊಸ ಟೆಂಡರ್ ಆಹ್ವಾನಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ’ ಎಂದು ಕೃಷ್ಣ ತಿಳಿಸಿದರು. ‘ಶೌಚಾಲಯಗಳಲ್ಲಿ ಸ್ವಚ್ಛತೆ ಸಮಸ್ಯೆ ವಿಪರೀತ ಇದೆ. ಶೌಚಾಲಯಗಳಲ್ಲಿ ಮದ್ಯದ ಖಾಲಿ ಬಾಟಲಿಗಳು ಸಿಕ್ಕಿವೆ. ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದರು. ‘ಎಕ್ಸ್–ರೇ ಮತ್ತು ಸಿಟಿ ಸ್ಕ್ಯಾನ್ ಯಂತ್ರಗಳು ಒಂದೊಂದೆ ಇವೆ. ತೀವ್ರ ನಿಗಾ ಘಟಕದ (ಐಸಿಯು) ಇಂಟೆನ್ಸಿವಿಸ್ಟ್ ಹುದ್ದೆ ಭರ್ತಿಯಾಗಿಲ್ಲ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆದು ವ್ಯವಸ್ಥೆ ಮಾಡುವಂತೆ ತಿಳಿಸಲಾಗುವುದು’ ಎಂದು ತಿಳಿಸಿದರು.
‘ಮಧ್ಯಾಹ್ನ ಊಟಕ್ಕೆ ಕ್ಯಾರಿಯರ್‌ನಲ್ಲಿ ಆಹಾರ ಒಯ್ಯಲು ವ್ಯವಸ್ಥೆ’
ಘಂಟಿಕೇರಿಯ ಬಾಲಕರ ಸರ್ಕಾರಿ ವಿದ್ಯಾರ್ಥಿನಿಲಯದಲ್ಲಿ ಆಹಾರ ಗುಣಮಟ್ಟ ಸರಿ ಇಲ್ಲ. ಈ ಬಗ್ಗೆ ಪರಿಶೀಲನೆಗೆ ಸೂಚಿಸಲಾಗಿದೆ. ಮಧ್ಯಾಹ್ನದ ಊಟಕ್ಕೆ ಕ್ಯಾರಿಯರ್‌ನಲ್ಲಿ ವಿದ್ಯಾರ್ಥಿಗಳಿಗೆ ಕಟ್ಟಿಕೊಡುವ ವ್ಯವಸ್ಥೆ ಮಾಡಲಾಗಿದೆ ಎಂದು ಕೃಷ್ಣ ತಿಳಿಸಿದರು. ಹಾಸ್ಟೆಲ್‌ನಲ್ಲಿ ಕೊಠಡಿಗಳಲ್ಲಿ ಸ್ವಚ್ಛತೆ ನಿರ್ವಹಣೆ ಮಾಡಿಲ್ಲ. ಶೌಚಾಲಯ ಸಾಕಷ್ಟು ಇಲ್ಲ. ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಗ್ರಿ ನೀಡಿಲ್ಲ. ಗ್ರಂಥಾಲಯ ತೆರೆದಿಲ್ಲ. ಸೊಳ್ಳೆಪರದೆ ನೀಡಿಲ್ಲ. ಈ ಬಗ್ಗೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ದೂರು ತಿಳಿಸಲು ಸಂಪರ್ಕ ದೂರವಾಣಿ ಸಂಖ್ಯೆ
ಕೃಷ್ಣ 944466099 ಲಿಂಗರಾಜ ಕೋಟೆ 81056 12230 ಸುಮಂತ ರಾವ್ 98458 75109 ಮಾರುತಿ ಎಂ.ದೊಡ್ಡಲಿಂಗಣ್ಣವರ 99450 37681 ರೋಹಿಣಿ ಪ್ರಿಯ 98453 42323 ಕೆ.ಎಸ್.ವಿಜಯಲಕ್ಷ್ಮಿ 96639 61037 ಸುಜಾತಾ ಡಿ. ಹೊಸಮನಿ 94489 92005
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.