ADVERTISEMENT

‘ಬಸವಣ್ಣ ಲಿಂಗಾಯತರಿಗೆ ಸೀಮಿತವಲ್ಲ’

​ಪ್ರಜಾವಾಣಿ ವಾರ್ತೆ
Published 8 ಮೇ 2025, 15:09 IST
Last Updated 8 ಮೇ 2025, 15:09 IST
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣಮಹೋತ್ಸವದ ಸಭಾಂಗಣದಲ್ಲಿ ಏರ್ಪಡಿಸಿದ್ದ ಬಸವೇಶ್ವರ ಜಯಂತ್ಯುತ್ಸವದಲ್ಲಿ ಪ್ರಭಾಕರ ಕೋರೆ, ಚಂದ್ರಕಾಂತ ಬೆಲ್ಲದ, ಪ್ರೊ.ಜಯಶ್ರೀ ಎಸ್‌ ಪಾಲ್ಗೊಂಡಿದ್ದರು
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣಮಹೋತ್ಸವದ ಸಭಾಂಗಣದಲ್ಲಿ ಏರ್ಪಡಿಸಿದ್ದ ಬಸವೇಶ್ವರ ಜಯಂತ್ಯುತ್ಸವದಲ್ಲಿ ಪ್ರಭಾಕರ ಕೋರೆ, ಚಂದ್ರಕಾಂತ ಬೆಲ್ಲದ, ಪ್ರೊ.ಜಯಶ್ರೀ ಎಸ್‌ ಪಾಲ್ಗೊಂಡಿದ್ದರು   

ಧಾರವಾಡ: ‘ಬಸವಣ್ಣನವರು  ಲಿಂಗಾಯತರಿಗೆ ಮಾತ್ರ ಸೀಮಿತವಲ್ಲ. ಅವರು ಎಲ್ಲ ಸಮಾಜ ಮತ್ತು ಸಮುದಾಯಗಳ ಪ್ರತಿನಿಧಿ’ ಎಂದು ಬೆಳಗಾವಿ ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ವಿಶ್ವವಿದ್ಯಾಲಯದ ಬಸವೇಶ್ವರ ಅಧ್ಯಯನ ಪೀಠವು ಸುವರ್ಣಮಹೋತ್ಸವ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಬಸವೇಶ್ವರ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

‘ಬಸವಣ್ಣ ಅವರ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ. ಅವರು 12ನೇ ಶತಮಾನದಲ್ಲಿಯೇ ತಳ ಸಮುದಾಯ ಮತ್ತು ಮಹಿಳೆಯರಿಗೆ ಸಮಾನತೆ ತರಲು ಶ್ರಮಿಸಿದ ಮಹನೀಯ’ ಎಂದರು.

ADVERTISEMENT

‘ಬಸವಣ್ಣ ಅವರ ವಚನಗಳನ್ನು ಮತ್ತು ತತ್ವಗಳನ್ನು ಎಲ್ಲ ಭಾಷೆಗಳಿಗೆ ಅನುವಾದಿಸಿ ಎಲ್ಲ ಜನರಿಗೆ ತಲುಪಿಸುವ ಕಾರ್ಯ ಆಗಬೇಕಿದೆ. ಆ ನಿಟ್ಟಿನಲ್ಲಿ ವಿಶ್ವವಿದ್ಯಾಲಯದ ಬಸವೇಶ್ವರ ಪೀಠ ಕಾರ್ಯಪ್ರವೃತ್ತವಾಗಬೇಕು’ ಎಂದರು.

ಮೈಸೂರಿನ ಕುಂದೂರಮಠದ ಶರತ್ ಚಂದ್ರ ಸ್ವಾಮೀಜಿ ಮಾತನಾಡಿ, ‘ಬಸವಣ್ಣ ಅವರು ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವವನ್ನು ಪ್ರತಿಪಾದಿಸಿದರು. ಅವರ ವಿಚಾರ ಮತ್ತು ತತ್ವಗಳು ಎಲ್ಲರಿಗೂ ಮಾದರಿಯಾಗಿವೆ’ ಎಂದರು.

ಪ್ರಭಾರ ಕುಲಪತಿ ಪ್ರೊ.ಜಯಶ್ರೀ. ಎಸ್‌, ನಿವೃತ್ತ ಕುಲಪತಿ ಪ್ರೊ.ಕೆ.ಬಿ.ಗುಡಸಿ ಮಾತನಾಡಿದರು. ಉಜ್ವಲಾ ಹಿರೇಮಠ ರಚಿಸಿದ ‘ವಚನ ಸಾಹಿತ್ಯದ ಸಂರಕ್ಷಕ: ಡಾ.ಪಿ.ಜಿ.ಹಳಕಟ್ಟಿ’ ಪ್ರಸ್ತಕ ಬಿಡುಗಡೆಗೊಳಿಸಲಾಯಿತು. ಮೈಸೂರಿನ ನಿರಂತರ ಫೌಂಡೇಶನ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಬಸವಣ್ಣನವರ ಕೂಡಲಸಂಗಮ ದೃಶ್ಯರೂಪಕ ಪ್ರದರ್ಶಿಸಲಾಯಿತು.

ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಮೈಸೂರಿನ ಶಿಲ್ಪಿ ಶಿವಲಿಂಗಪ್ಪ.ಎಸ್, ಕುಲಸಚಿವ ಎ.ಚನ್ನಪ್ಪ, ಪರೀಕ್ಷಾಂಗ ಕುಲಸಚಿವ ಪ್ರೊ.ಎನ್.ವೈ.ಮಟ್ಟಿಹಾಳ, ಪ್ರೊ.ವೀರಣ್ಣ ರಾಜೂರ, ಹಣಕಾಸು ಅಧಿಕಾರಿ ಪ್ರೊ.ಸಿ.ಕೃಷ್ಣಮೂರ್ತಿ, ಬಸವೇಶ್ವರ ಪೀಠದ ಸಂಯೋಜಕ ಪ್ರೊ.ಸಿ.ಎಂ.ಕುಂದಗೋಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.