ಧಾರವಾಡ: ‘ಅತ್ಯಾಧುನಿಕ ತಂತ್ರಜ್ಞಾನದ ಸ್ಟೀಲ್ ಪೈಪ್ ಉತ್ಪಾದನಾ ಘಟಕವನ್ನು ಧಾರವಾಡದಲ್ಲಿ ಆರಂಭಿಸಲಾಗಿದೆ. ಕೈಗಾರಿಕೆ, ನೀರು ಪೂರೈಕೆ ಮತ್ತು ನೀರಾವರಿ ಯೋಜನೆಗಳಿಗೆ ಪೈಪುಗಳನ್ನು ಒದಗಿಸುವ ಉದ್ದೇಶದಿಂದ ಇಲ್ಲಿ ಘಟಕ ಸ್ಥಾಪಿಸಲಾಗಿದೆ’ ಎಂದು ಕಮಲ್ ಗ್ರೂಪ್‌ನ ಸಂಸ್ಥಾಪಕ ಕಮಲ್‌ನಯನ್ ಹೇಳಿದರು.
ಕಮಲ್‌ಟೆಕ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ನಗರದಲ್ಲಿ ಈಚೆಗೆ ನಡೆದ ಎಂಎಸ್ ಸ್ಪೈರಲ್ ಪೈಪ್ ಉತ್ಪಾದನಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಘಟಕವನ್ನು ಸ್ಥಾಪಿಸಲಾಗಿದೆ. ಈ ಪ್ರದೇಶವು ಕರ್ನಾಟಕ, ಗೋವಾ, ದಕ್ಷಿಣ ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತೆಲಂಗಾಣ ಭಾಗಗಳಿಗೆ ಸನಿಹದಲ್ಲಿದೆ. ಈ ಭಾಗಗಳ ಜಲ ಯೋಜನೆಗಳಿಗೆ ಈ ಘಟಕದ ಪೈಪುಗಳನ್ನು ಉಪಯೋಗಿಸಿಕೊಳ್ಳಬಹುದು’ ಎಂದರು.
‘1972ರಲ್ಲಿ ಕಮಲ್ ಗ್ರೂಪ್ ಸ್ಥಾಪನೆಯಾಗಿದೆ. ಜೆಎಸ್‌ಡಬ್ಲ್ಯು ಸ್ಟೀಲ್ ಲಿಮಿಟೆಡ್‌ನ ಅಧಿಕೃತ ವಿತರಕರಾಗಿ ಉಕ್ಕು ಮತ್ತು ಸಿಮೆಂಟ್ ವ್ಯಾಪಾರದಲ್ಲಿ ತೊಡಗಿಕೊಂಡಿದೆ. ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ವಿವಿಧ ಶಾಖೆಗಳ ಮೂಲಕ ಉಕ್ಕಿನ ಬೇಡಿಕೆಗೆ ಸ್ಪಂದಿಸುತ್ತಿದೆ’ ಎಂದರು.
ಜೆಎಸ್‌ಡಬ್ಲ್ಯು ಸಿಮೆಂಟ್ ಮತ್ತು ಪೇಂಟ್ಸ್ ವ್ಯವಸ್ಥಾಪಕ ನಿರ್ದೇಶಕ ಪಾರ್ಥ್ ಜಿಂದಾಲ್ ಅವರು ಉದ್ಘಾಟನೆ ನೆರವೇರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.