ADVERTISEMENT

ಶೆಟ್ಟರ್‌, ಅಬ್ಬಯ್ಯ ಮನೆಗೆ ನಿವೇಶನ ರಹಿತರ ಮುತ್ತಿಗೆ

ಕರ್ನಾಟಕ ರಾಜ್ಯ ನಿವೇಶನ ರಹಿತರ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2020, 14:01 IST
Last Updated 15 ಫೆಬ್ರುವರಿ 2020, 14:01 IST
ಸಚಿವ ಜಗದೀಶ ಶೆಟ್ಟರ್ ತಮ್ಮ ಮನೆ ಎದುರು ಧರಣಿ ನಡೆಸಿದ ನಿವೇಶನ ರಹಿತರು ಹಾಗೂ ಮುಖಂಡರನ್ನು ಭೇಟಿ ಮಾಡಿ ಮನವಿ ಸ್ವೀಕರಿಸಿದರು–ಪ್ರಜಾವಾಣಿ ಚಿತ್ರ
ಸಚಿವ ಜಗದೀಶ ಶೆಟ್ಟರ್ ತಮ್ಮ ಮನೆ ಎದುರು ಧರಣಿ ನಡೆಸಿದ ನಿವೇಶನ ರಹಿತರು ಹಾಗೂ ಮುಖಂಡರನ್ನು ಭೇಟಿ ಮಾಡಿ ಮನವಿ ಸ್ವೀಕರಿಸಿದರು–ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ರಾಜ್ಯದಲ್ಲಿ ಸೂರಿಲ್ಲದವರಿಗೆ ನಿವೇಶನ ಒದಗಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಸಚಿವ ಜಗದೀಶ ಶೆಟ್ಟರ್‌ ಮತ್ತು ಶಾಸಕ ಪ್ರಸಾದ ಅಬ್ಬಯ್ಯ ಅವರ ಮನೆಗಳಿಗೆ ನಿವೇಶನ ರಹಿತ ಸಾವಿರಾರು ಮಹಿಳೆಯರು ಶನಿವಾರ ಮುತ್ತಿಗೆ ಹಾಕಿ, ಮನವಿ ಸಲ್ಲಿಸಿದರು.

ಕರ್ನಾಟಕ ರಾಜ್ಯ ನಿವೇಶನ ರಹಿತರ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಪಾಲ್ಗೊಂಡಿದ್ದ ಮುಖಂಡರು, ರಾಜ್ಯದಲ್ಲಿ ಸೂರಿಲ್ಲದವರನ್ನು ಗುರುತಿಸುವ ಸಂಬಂಧ ಸರ್ವೇ ಕೈಗೊಳ್ಳಬೇಕು ಹಾಗೂ ಖಾಸಗಿ ಜಮೀನನ್ನು ಸರ್ಕಾರ ಖರೀದಿಸಿ ನಿವೇಶನ ಹಂಚಲು ಬಜೆಟ್‌ ಅಧಿವೇಶನದಲ್ಲಿ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

‘ಎಲ್ಲ ಜಿಲ್ಲೆಯಲ್ಲಿರುವ ಸರ್ಕಾರಿ ಪಡಾ ಭೂಮಿಯನ್ನು ಗುರುತಿಸಿ ನಿವೇಶನ ರಹಿತರಿಗಾಗಿಯೇ ಮೀಸಲಿಡಬೇಕು’ ಎಂದು ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆದೇಶಿಸಿದ್ದರು. ಆದರೆ, ಇದುವರೆಗೂ ಈ ಕುರಿತು ಯಾವುದೇ ಪ್ರಕ್ರಿಯೆ ನಡೆದಿಲ್ಲ. ಈ ಸಂಬಂಧ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ADVERTISEMENT

ಹುಬ್ಬಳ್ಳಿ–ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ಹಾಗೂ ಗೃಹ ನಿರ್ಮಾಣ ಮಂಡಳಿಗಳ ಮೂಲಕ ಹಂಚುವ ನಿವೇಶನಗಳಲ್ಲಿ ಶೇ 50ರಷ್ಟು ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಿಡಬೇಕು. ಪಾಲಿಕೆ ವ್ಯಾಪ್ತಿಯಲ್ಲಿ ಲೀಸ್‌ ಮುಗಿದಿರುವ ಭೂಮಿಯನ್ನು ಹಿಂಪಡೆದು, ಆರ್ಥಿಕವಾಗಿ ಹಿಂದುಳಿದವರಿಗೆ ನಿವೇಶನಕ್ಕೆಂದು ಮೀಸಲಿಡಬೇಕು ಎಂದು ಒತ್ತಾಯಿಸಿದರು.

ಸರ್ಕಾರಕ್ಕೆ ಪ್ರಸ್ತಾವ

ಮನವಿ ಸ್ವೀಕರಿಸಿ ಮಾತನಾಡಿದ ಸಚಿವ ಜಗದೀಶ ಶೆಟ್ಟರ್‌, ಸುಳ್ಳದಲ್ಲಿ 50 ಎಕರೆ ಭೂಮಿಯನ್ನು ಈಗಾಗಲೇ ಗುರುತಿಸಲಾಗಿದ್ದು, ರೈತರಿಂದ ಖರೀದಿಸಿ ನಿವೇಶನ ರಹಿತರಿಗೆ ಹಂಚಿಕೆ ಮಾಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಇದರ ಜೊತೆಗೆ ರಾಜೀವ್‌ಗಾಂಧಿ ವಸತಿ ಯೋಜನೆಯಡಿ ಹೆಚ್ಚುವರಿಯಾಗಿ 50 ಎಕರೆ ಖರೀದಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಹೇಳಿದರು.

ಎಚ್‌.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಕೇವಲ ತೋರಿಕೆಗೆ ಆದೇಶ ಹೊರಡಿಸಿದ್ದರು. ಆದರೆ, ನಿವೇಶನ ಹಂಚಿಕೆ ಮಾಡಲು ಪ್ರಾಯಾಣಿಕವಾಗಿ ಪ್ರಯತ್ನಿಸಿಲ್ಲ ಎಂದು ಆರೋಪಿಸಿದರು.

ಶೆಟ್ಟರ್‌ ಅಸಮಾಧಾನ

‘ಬೆಳಿಗ್ಗೆಯೇ ಮನೆ ಎದುರು ಸಾವಿರಾರರು ಮಹಿಳೆಯರೊಂದಿಗೆ ಧರಣಿ ಕೂರವ ಬದಲು ಈ ಕುರಿತು ಮೊದಲೇ ನನ್ನ ಗಮನಕ್ಕೆ ತಂದಿದ್ದರೆ ಚರ್ಚಿಸಬಹುದಿತ್ತು. ಬಿಸಿಲಲ್ಲಿ ಅನಗತ್ಯವಾಗಿ ಧರಣಿ ಕೂರುವ ಅಗತ್ಯವಿರಲಿಲ್ಲ’ ಎಂದು ಶೆಟ್ಟರ್‌ ಅಸಮಾಧಾನ ವ್ಯಕ್ತಪಡಿಸಿದರು.

ಪ್ರೀತಿಯಿಂದ ಬಂದಿದ್ದೇವೆ

‘ರಾಜ್ಯ ಸರ್ಕಾರದಲ್ಲಿ ಪ್ರಬಲ ಸಚಿವರಾಗಿರುವ ಶೆಟ್ಟರ್‌ ನಮ್ಮವರು ಎಂಬ ಪ್ರೀತಿಯಿಂದ ಮನೆ ಬಳಿಗೆ ಬಂದಿದ್ದೇವೆಯೇ ಹೊರತು ಮುಜುಗರ ಮಾಡಬೇಕು ಎಂಬ ಕಾರಣಕ್ಕಲ್ಲ’ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾಜಿ ಸಂಸದ ಪ್ರೊ.ಐ.ಜಿ.ಸನದಿ ಅವರು ಶೆಟ್ಟರ್‌ ಅವರನ್ನು ಸಮಾಧಾನಪಡಿಸಿದರು.

ರಾಜ್ಯ ನಿವೇಶನ ರಹಿತರ ಹೋರಾಟ ಸಮಿತಿ ಸಂಚಾಲಕ ನಾಗರಾಜ ಗುರಿಕಾರ, ಮುಖಂಡರಾದ ನೀಲಕಂಠ ಅಸೂಟಿ, ರಾಮಾಂಜನಪ್ಪ ಹಾಲದಳ್ಳಿ, ರಾಜು ಹಿರೇವಡೆಯರ, ಕೆ.ಸಿ.ರಜಪೂತ, ನಾಗರಾಜ ನಾಡಕರ್ಣಿ, ಸಚ್ಚಿದಾನಂದ ರಾಯ್ಕರ. ಹೇಮಲತಾ ಹೂಲಗೇರಿ, ಪದ್ಮಾ ಹಸಲಕರ್‌, ಬೀಬಿಜಾನ್‌ ಮುಲ್ಲಾ, ರೂಪಾ ಕಬಡಿ, ಗಂಗಮ್ಮ ಹುಬ್ಬಳ್ಳಿ, ಸ್ಮೀತಾ, ರೇಖಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.