ADVERTISEMENT

ಕೋಲ್ಕತ್ತದಲ್ಲಿ ಗಲಭೆ: ವಿದ್ಯಾಸಾಗರರ ಪ್ರತಿಮೆ ಉರುಳಿಸಿದ್ದಕ್ಕೆ ಖಂಡನೆ

​ಪ್ರಜಾವಾಣಿ ವಾರ್ತೆ
Published 15 ಮೇ 2019, 12:33 IST
Last Updated 15 ಮೇ 2019, 12:33 IST
ಧಾರವಾಡದ ವಿವೇಕಾನಂದ ವೃತ್ತದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿ ಘೋಷಣೆ ಕೂಗಿದರು
ಧಾರವಾಡದ ವಿವೇಕಾನಂದ ವೃತ್ತದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿ ಘೋಷಣೆ ಕೂಗಿದರು   

ಧಾರವಾಡ: ಕೋಲ್ಕತ್ತದಲ್ಲಿ ನಡೆದ ಬಿಜಪಿ ಹಾಗೂ ಟಿಎಂಸಿ ಕಾರ್ಯಕರ್ತರ ನಡುವಿನ ಗಲಭೆಯಲ್ಲಿ ನವೋದಯ ಹರಿಕಾರ ಈಶ್ವರಚಂದ್ರ ವಿದ್ಯಾಸಾಗರ ಅವರ ಪ್ರತಿಮೆಯನ್ನು ಬಿಜೆಪಿ ಕಾರ್ಯಕರ್ತರು ಉರುಳಿಸಿದ್ದನ್ನು ಖಂಡಿಸಿ ಎಐಡಿಎಸ್‌ಒ ಮತ್ತು ಎಐಎಂಎಸ್‌ಎಸ್ ಸಂಘಟನೆಗಳು ಬುಧವಾರ ಇಲ್ಲಿ ಪ್ರತಿಭಟನೆ ನಡೆಸಿದರು.

ಎಐಎಂಎಸ್‌ಎಸ್‌ ಜಿಲ್ಲಾಧ್ಯಕ್ಷೆ ಮಧುಲತಾ ಗೌಡರ ಮಾತನಾಡಿ, ‘ಕೇವಲ ಮೇಲ್ಜಾತಿಯವರಿಗೆ ಸೀಮಿತವಾಗಿದ್ದ ಶಿಕ್ಷಣವನ್ನು ವಿದ್ಯಾಸಾಗರ ಅವರು ಎಲ್ಲಾ ವರ್ಗದವರಿಗೂ ದೊರೆಯುವಂತೆ ಮಾಡಲು ಹೋರಾಡಿದರು. ಎಲ್ಲಾ ಅಪಮಾನಗಳನ್ನೂ ಸಹಿಸಿ ಅವರು ನಡೆಸಿದ ಹೋರಾಟದ ಫಲವಾಗಿ ಹೆಣ್ಣುಮಕ್ಕಳಿಗೂ ಶಿಕ್ಷಣ ದೊರೆಯುವಂತಾಯಿತು. ಬಾಲ್ಯವಿವಾಹ ಹಾಗೂ ಬಹುಪತ್ನಿತ್ವದ ವಿರುದ್ಧವೂ ಅವರು ಧನಿ ಎತ್ತಿದ್ದರು. ಅವರ ಪ್ರಗತಿಪರ ವಿಚಾರಗಳನ್ನು ಸಹಿಸದ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಮನಸ್ಥಿತಿ, ವಿದ್ಯಾಸಾಗರ ಅವರ ಪ್ರತಿಮೆ ಉರುಳಿಸಲು ಕಾರಣವಾಗಿವೆ. ಇಂಥ ಕೃತ್ಯಕ್ಕೆ ಕಾರಣರಾದವರನ್ನು ಉಗ್ರಶಿಕ್ಷೆಗೆ ಗುರಿಪಡಿಸಬೇಕು’ ಎಂದು ಆಗ್ರಹಿಸಿದರು.

ಎಐಡಿಎಸ್‌ಓನ ಜಿಲ್ಲಾ ಸಂಘಟನಾಕಾರರಾದ ರಣಜೀತ ಧೂಪದ ಮಾತನಾಡಿ, ‘ಮಹಾನ್ ವ್ಯಕ್ತಿಗಳ ಪ್ರತಿಮೆಗಳನ್ನು ಉರುಳಿಸುವ ಬಿಜೆಪಿ- ಆರ್‌ಎಸ್‌ಎಸ್‌ನ ಕೆಲಸ ಇದು ಮೊದಲೇನಲ್ಲ. ಈ ಹಿಂದೆಯೂ ಪೆರಿಯಾರ್, ಅಂಬೇಡ್ಕರ್, ಲೆನಿನ್, ಟ್ಯಾಗೋರ್‌ ಅವರ ಪ್ರತಿಮೆಗಳನ್ನು ಉರುಳಿಸಿದ್ದಾರೆ. ಪ್ರಪಂಚದಲ್ಲಿ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ನಮ್ಮದು ಎಂದು ಬಡಾಯಿ ಕೊಚ್ಚಿಕೊಳ್ಳುವ ಬಿಜೆಪಿಯು, ಅದರ ವಿಚಾರಗಳಿಗೆ ವಿರುದ್ಧವಾದ ವ್ಯಕ್ತಿಗಳು ದೇಶದಲ್ಲಿರುವುದನ್ನು ಒಪ್ಪುವದಿಲ್ಲ. ಇದು ಆ ಪಕ್ಷದ ಅತ್ಯಂತ ಅಪ್ರಜಾತಾಂತ್ರಿಕ ನಡೆಯಾಗಿದೆ.ದೇಶಭಕ್ತಿಯ ಬಗ್ಗೆ ಮಾತನಾಡುವ ಬಿಜೆಪಿಯು, ದೇಶದ ಮಹಾನ್ ಮಾನವತಾವಾದಿಯ ಪ್ರತಿಮೆ ಉರುಳಿಸಿರುವುದು ಡೊಂಗೀ ದೇಶಭಕ್ತಿಯ ಪ್ರತೀಕವಾಗಿದೆ’ ಎಂದು ಆರೋಪಿಸಿದರು.

ADVERTISEMENT

‘ವಿದ್ಯಾಸಾಗರ ಅವರು ವೇದಗಳನ್ನು ಸುಳ್ಳು ತತ್ವಶಾಸ್ತ್ರಗಳೆಂದು ಪರಿಗಣಿಸಿದ್ದರು ಮತ್ತು ಸಂಪ್ರದಾಯದ ವಿರೋಧಿಯೂ ಆಗಿದ್ದರು. ಜನರಿಗೆ ವೈಜ್ಞಾನಿಕ, ಧರ್ಮನಿರಪೇಕ್ಷ ಹಾಗೂ ಸಾರ್ವತ್ರಿಕ ಶಿಕ್ಷಣ ಸಿಗಬೇಕೆಂದು ಹೋರಾಡಿದರು. ವಿದ್ಯಾಸಾಗರ ಅವರ ಸಾವಿರ ಮೂರ್ತಿಗಳನ್ನು ಉರುಳಿಸಬಹುದು ಆದರೆ ಅವರು ಕೇವಲ ಮೂರ್ತಿಗೆ ಸೀಮಿತರಾಗಿಲ್ಲ. ಅವರ ವಿಚಾರಗಳು ಈ ದೇಶದ ಜನಗಳ ಹೃದಯದಲ್ಲಿ ಬೇರೂರಿವೆ. ಅವುಗಳನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ಕೂಡಲೇ ಅಪರಾಧಿಗಳನ್ನು ಬಂಧಿಸಿ ಉಗ್ರಶಿಕ್ಷೆ ನೀಡಬೇಕು’ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಎರಡೂ ಸಂಘಟನೆಗಳ ಮುಖಂಡರಾದ ವಿಜಯಲಕ್ಷ್ಮಿ ದೇವತ್ಕಲ್, ಗಂಗಾ ಕೋಕರೆ, ನಿಂಗಮ್ಮ ಹುಡೇದ, ದೇವಮ್ಮ ದೇವತ್ಕಲ್, ಸಿಂಧು ಕೌದಿ, ಶಶಿಕಲಾ ಮೇಟಿ ಇದ್ದರು. ಇವರಿಗೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸಾಥ್ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.