ADVERTISEMENT

ಕುಂದಗೋಳ | ಭ್ರಷ್ಟಾಚಾರ ಆರೋಪ– ಅಧ್ಯಕ್ಷ, ಪಿಡಿಒ ವಿರುದ್ಧ ಪ್ರತಿಭಟನೆ

ಪಂಚಾಯ್ತಿಯಲ್ಲಿ ಸಾಕಷ್ಟು ಭ್ರಷ್ಟಾಚಾರ– ಆರೋಪ: ತನಿಖೆಗೆ ತಿಂಗಳ ಗಡುವು

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2022, 10:19 IST
Last Updated 9 ನವೆಂಬರ್ 2022, 10:19 IST
ಕುಂದಗೋಳ ತಾಲ್ಲೂಕಿನ ಯಲಿವಾಳ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಮತ್ತು ಪಿಡಿಒ ವಿರುದ್ಧ ತನಿಖೆಗೆ ಆಗ್ರಹಿಸಿ ಪ್ರತಿಭಟನಾಕಾರರು ತಾಲ್ಲೂಕು ಪಂಚಾಯ್ತಿ ಇಒ ಪರಮೇಶಕುಮಾರ ಟಿ ಅವರಿಗೆ ಮನವಿ ಸಲ್ಲಿಸಿದರು
ಕುಂದಗೋಳ ತಾಲ್ಲೂಕಿನ ಯಲಿವಾಳ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಮತ್ತು ಪಿಡಿಒ ವಿರುದ್ಧ ತನಿಖೆಗೆ ಆಗ್ರಹಿಸಿ ಪ್ರತಿಭಟನಾಕಾರರು ತಾಲ್ಲೂಕು ಪಂಚಾಯ್ತಿ ಇಒ ಪರಮೇಶಕುಮಾರ ಟಿ ಅವರಿಗೆ ಮನವಿ ಸಲ್ಲಿಸಿದರು   

ಕುಂದಗೋಳ: ‘ಗ್ರಾಮ ಪಂಚಾಯ್ತಿ ಯಲ್ಲಿ 2016ರಿಂದ 2022ರ ವರೆಗಿನ ಅವಧಿಯಲ್ಲಿ ಆಡಳಿತ ನಡೆಸಿರುವ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಹಾಗೂ ಪಿಡಿಒ ಸೇರಿಕೊಂಡು ಸಾಕಷ್ಟು ಭ್ರಷ್ಟಾಚಾರ ಮಾಡಿದ್ದಾರೆ’ ಎಂದು ಆರೋಪಿಸಿ ತಾಲ್ಲೂಕಿನ ಯಲಿವಾಳ ಗ್ರಾಮ ಪಂಚಾಯ್ತಿಯ 14 ಸದಸ್ಯರ ಪೈಕಿ ಎಂಟು ಸದಸ್ಯರು ಹಾಗೂ ಗ್ರಾಮಸ್ಥರು ಮಂಗಳವಾರ ಗ್ರಾಮ ಪಂಚಾಯ್ತಿ ಮುಂದೆ ಪ್ರತಿಭಟನೆ ನಡೆಸಿದರು.

‘ಪಂಚಾಯ್ತಿ ಅಧ್ಯಕ್ಷರು ಹಾಗೂ ಪಿಡಿಒ ಸೇರಿಕೊಂಡು ಅನೇಕ ಕಾಮಗಾರಿ ನಡೆಸದೇ ಬಿಲ್‌ ತೆಗೆದು ಹಣ ಎತ್ತಿದ್ದಾರೆ. 15ನೇ ಹಣಕಾಸು ಯೋಜನೆ ಯಲ್ಲೂ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಅಂದಾಜು ₹60 ಲಕ್ಷ ಹಣ ದುರುಪಯೋಗವಾಗಿದೆ. ಅವರ ವಿರುದ್ಧ ಸಮಗ್ರ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ತಾಲ್ಲೂಕು ಪಂಚಾಯ್ತಿ ಇಒ ಪರಮೇಶಕುಮಾರ ಟಿ, ಪ್ರತಿಭಟನಾಕಾರರೊಂದಿಗೆ ಚರ್ಚಿಸಿ
ದರು. ‘ಒಂದು ತಿಂಗಳಲ್ಲಿ ತನಿಖೆ ನಡೆಸಿ ನಿಮಗೆ ವರದಿ ನೀಡಲಾಗುವುದು. ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ತನಿಖೆಗೆ ಸಹಕಾರ ನೀಡಬೇಕು’ ಎಂದು ಕೋರಿದರು. ಆದರೆ, ಪ್ರತಿಭಟನಾಕಾರರು ತಮ್ಮಪಟ್ಟು ಸಡಿಲಿಸಲಿಲ್ಲ.

ADVERTISEMENT

ಬಳಿಕ ಪರಮೇಶಕುಮಾರ ಅವರು ಕೆಲವು ಸದಸ್ಯರೊಂದಿಗೆ ಗೋಪ್ಯ ಸಭೆ ನಡೆಸಿದರು. ‘ತನಿಖೆಗೆ ಮಾಡಲು, ದಾಖಲಾತಿ ಪರಿಶೀಲಿಸಲು ಒಂದು ತಿಂಗಳು ಸಮಯಬೇಕಾಗುತ್ತದೆ. ಸಹಕಾರ ನೀಡಿ’ ಎಂದು ಧರಣಿ ನಿರತರ ಮನವೊಲಿಸಿದರು.

‘ತಿಂಗಳ ಒಳಗೆ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳದೆ ಇದ್ದರೆ ಮತ್ತೆ ಪ್ರತಿಭಟನೆ ಮಾಡಲಾಗುವುದು’ ಎಂದು ಧರಣಿ ಹಿಂಪಡೆದ ಪ್ರತಿಭಟನಾನಿರತರು ಎಚ್ಚರಿಸಿದರು.

ಪ್ರತಿಭಟನಾಕಾರರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪರಮೇಶಕುಮಾರ ಟಿ ಮನವಿ ಅರ್ಪಿಸಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆದರು.

ಧಿಕ್ಕಾರ ಕೂಗಿ ಆಕ್ರೋಶ: ಇದಕ್ಕೂ ಮುನ್ನ ಪಂಚಾಯ್ತಿ ಮುಂದೆ ಧರಣಿ ನಡೆಸಿದ ವೇಳೆ ಪ್ರತಿಭಟನಾಕಾರರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಹಾಗೂ ಪಿಡಿಒ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪಂಚಾಯ್ತಿ ಸದಸ್ಯರಾದ ಫಕೀರಗೌಡ ಚಿಕ್ಕನಗೌಡ್ರು, ಸುರೇಶ ದಾನಪ್ಪನವರು, ಆರ್.ಎಂ.ಶಿರುಗುಪ್ಪಿ, ಜುಬೇದ ನದಾಫ, ನೀಲವ್ವ ಅಂಗಡಿ, ಮಲ್ಲಪ್ಪ ಹರಿಜನ, ಶಾಬೀರ್‌ ಹೊರೆಕೇರಿ ಹಾಗೂ ಗಿರೀಶಗೌಡ ಮುದಿಗೌಡರ ಇದ್ದರು.

ಅಭಿವೃದ್ಧಿ ಸಹಿಸದೇ ಆರೋಪ’

ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಗ್ರಾಮ ಪಂಚಾಯ್ತಿ ಅಧ್ಯಕ್ಷ ನಿಂಗಪ್ಪ ನವಲೂರು ಹಾಗೂ ಗ್ರಾಮ ಪಂಚಾಯ್ತಿ ಸದಸ್ಯ ಚನ್ನಪ್ಪ ಹರಕುಣಿ, ‘ ಪ್ರತಿಭಟನಾಕಾರರು, ಗ್ರಾಮ ಪಂಚಾಯ್ತಿಯ ಅಭಿವೃದ್ಧಿ ಕಾಮಗಾರಿ ಸಹಿಸದೇ, ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಪಂಚಾಯಿತಿಯಲ್ಲಿ ಭ್ರಷ್ಟಾಚಾರ ನಡೆದಿಲ್ಲ. ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತಿದ್ದೇವೆ. ಗ್ರಾಮದಲ್ಲಿ ರಾಜಕೀಯ ಮೇಲಾಟ ಇರುವುದರಿಂದ ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಪಿಡಿಒ ಕೂಡ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.