ಹುಬ್ಬಳ್ಳಿ: ‘ಬಿಹಾರದ ರಿತೇಶಕುಮಾರ್ ಐದು ವರ್ಷದ ಬಾಲಕಿಯ ಮೇಲೆ ದೌರ್ಜನ್ಯ ಎಸಗಿ ಕೊಲೆ ಮಾಡಿದ್ದು ಅಮಾನುಷ ಕೃತ್ಯವಾಗಿದೆ. ಬಾಲಕಿ ಕುಟುಂಬಕ್ಕೆ ಕೇಂದ್ರ ಸರ್ಕಾರ ₹50 ಲಕ್ಷ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿ ಕರ್ನಾಟಕ ಪ್ರದೇಶ ಕುರುಬ ಸಂಘದ ಸದಸ್ಯರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಮಾವೇಶಗೊಂಡ ಸದಸ್ಯರು, ಬಾಲಕಿ ಕೊಲೆ ಕೃತ್ಯವನ್ನು ಖಂಡಿಸಿದರು. ತಮ್ಮ ಆತ್ಮರಕ್ಷಣೆಗಾಗಿ ಆರೋಪಿ ರಿತೇಶಕುಮಾರ್‌ನನ್ನು ಎನ್‌ಕೌಂಟರ್ ಮಾಡಿದ ಪೊಲೀಸರ ಕಾರ್ಯ ಶ್ಲಾಘನೀಯ. ಇಂಥ ಪ್ರಕರಣವನ್ನು ಪೊಲೀಸರು ತ್ವರಿತಗತಿಯಲ್ಲಿ ತನಿಖೆ ನಡೆಸಬೇಕು ಹಾಗೂ ನ್ಯಾಯಾಲಯಗಳು ಅಪರಾಧಿಗೆ ಕಠಿಣ ಶಿಕ್ಷೆ ನೀಡುವಂತಾಗಬೇಕು ಎಂದು ಆಗ್ರಹಿಸಿದರು.
‘ಬಾಲಕಿಯ ಸಹೋದರಿ ಅಂಗವಿಕಲಳಾಗಿದ್ದು, ಕುಟುಂಬ ಸಹ ತೀರಾ ಬಡತನದ್ದಾಗಿದೆ. ಕೂಲಿ ಮಾಡಿ ಬದುಕು ಸಾಗಿಸುವ ಕುಟುಂಬ, ಪುಟ್ಟ ಮಗುವನ್ನು ಕಳೆದುಕೊಂಡು ಸಂಕಷ್ಟ ಸ್ಥಿತಿಯಲ್ಲಿದೆ. ಅಂಗವಿಕಲರ ನಿಧಿಯಿಂದ ಹೆಚ್ಚಿನ ಪರಿಹಾರ ನೀಡುವಂತೆ ಸಚಿವ ಪ್ರಲ್ಹಾದ ಜೋಶಿ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು’ ಎಂದು ತಹಶೀಲ್ದಾರ್‌ಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಶಿವಾನಂದ ಮುತ್ತಣ್ಣವರ, ರಾಜೇಶ್ವರ ಸಾಲಗಟ್ಟಿ, ಚಂದ್ರು ಮುಷಣ್ಣವರ, ಮಲ್ಲಿಕಾರ್ಜುನ ಟಿ., ಸಿದ್ದು ತೇಜಿ, ಹನುಮಂತಪ್ಪ ಕಂಬಳಿ, ವೀರೇಶ ಕಂಬಳಿ, ಬಸವರಾಜ ಕುರಿ, ಶಿವಾನಂದ ಕರಿಗಾರ, ಬಾಳಮ್ಮ ಜಕ್ಕಣ್ಣವರ, ರೇಣುಕಾ ಬೀಳಗಿ, ವಿಜಯಲಕ್ಷ್ಮಿ ಪಾಟೀಲ, ವಿನಾಯಕ ಕಲ್ಲಣ್ಣವರ, ಸಂಗಣ್ಣ ಗುರಿಕಾರ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.