ADVERTISEMENT

ನಟ ಕಮಲ್ ಹಾಸನ್ ಹೇಳಿಕೆ ಖಂಡಿಸಿ ಧಾರವಾಡದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2025, 12:56 IST
Last Updated 9 ಜೂನ್ 2025, 12:56 IST
ಧಾರವಾಡದದಲ್ಲಿ ಸೋಮವಾರ ಕರ್ನಾಟಕ ವಿದ್ಯಾವರ್ಧಕ ಸಂಘದವರು ಪ್ರತಿಭಟನೆ ನಡೆಸಿದರು
ಧಾರವಾಡದದಲ್ಲಿ ಸೋಮವಾರ ಕರ್ನಾಟಕ ವಿದ್ಯಾವರ್ಧಕ ಸಂಘದವರು ಪ್ರತಿಭಟನೆ ನಡೆಸಿದರು   

ಧಾರವಾಡ: ‘ಕನ್ನಡವು ತಮಿಳು ಭಾಷೆಯಿಂದ ಹುಟ್ಟಿದ್ದು’ ಎಂದು ನಟ ಕಮಲ್‌ಹಾಸನ್‌ ಹೇಳಿರುವುದನ್ನು ಖಂಡಿಸಿ ಮತ್ತು ಅವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೂ ವಿವಿಧ ಸಂಘಟನೆಯವರು ಸೋಮವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸಮಾವೇಶಗೊಂಡ ಪ್ರತಿಭಟನಕಾರರು ಕಮಲ್‌ಹಾಸನ್‌ ವಿರುದ್ಧ ಘೋಷಣೆ ಕೂಗಿದರು. ‘ಕನ್ನಡ ಭಾಷೆಗೆ ಅವಮಾನಿಸಿದರೆ ಸಹಿಸುವುದಿಲ್ಲ’, ‘ಕಮಲ್ ಹಾಸನ್ ಕನ್ನಡಿಗರ ಕ್ಷಮೆಯಾಚಸಲಿ’, ‘ಕನ್ನಡ ಭಾಷೆ ಪ್ರಾಚೀನ ಭಾಷೆ’, ‘ಕನ್ನಡವೇ ಸತ್ಯ ಕನ್ನಡವೇ ನಿತ್ಯ’,  ‘ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ’ ಭಿತ್ತಿಫಲಕಗಳನ್ನು ಹಿಡಿದಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

ಸಾಹಿತಿ ಪ್ರೊ.ವೀರಣ್ಣ ರಾಜೂರ ಮಾತನಾಡಿ, ‘ಕನ್ನಡ, ತೆಲುಗು, ಮಲಯಾಳಂ, ತುಳು, ತಮಿಳು (ಪಂಚ ದ್ರಾವಿಡ) ಸಹೋದರ ಭಾಷೆಗಳಾಗಿವೆ. ಕಮಲ್‌ಹಾಸ್‌ನ ಅವರು ಭಾಷಾ ತಜ್ಞರಲ್ಲ, ಸಂಶೋಧಕರಲ್ಲ. ಕನ್ನಡ ಭಾಷೆಯ ಬಗ್ಗೆ ಹಗುರವಾಗಿ ಮಾತನಾಡಿ ಕ್ಷಮೆ ಕೇಳಲು ಹಿಂಜರಿಯುತ್ತಿರುವುದು ಖಂಡನೀಯ’ ಎಂದರು.

ADVERTISEMENT

ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿ, ‘ಕನ್ನಡ ಭಾಷೆಯ ಇತಿಹಾಸ ತಿಳಿಯದೆ ಕನ್ನಡದ ಬಗ್ಗೆ ಕಮಲ್ ಆಡಿರುವ ಮಾತು ಬೇಜವಾಬ್ದಾರಿಯಿಂದ ಕೂಡಿದೆ. ಇಂಥ ಹೇಳಿಕೆ ನೀಡಬಾರದು. ಕ್ಷಮೆ ಕೇಳಬೇಕು’ ಎಂದು ಒತ್ತಾಯಿಸಿದರು.

ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಮಾತನಾಡಿ, ‘ಕಮಲ್ ಹಾಸನ್ ಹೇಳಿಕೆಯನ್ನು ಹೈಕೋರ್ಟ್ ಖಾರವಾಗಿ ಪ್ರಶ್ನಿಸಿ, ಕನ್ನಡಿಗರ ಕ್ಷಮೆ ಕೇಳಲು ಸೂಚಿಸಿದರೂ ಅವರು ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತಿದ್ದಾರೆ’ ಎಂದು ದೂರಿದರು.

ಸಂಘದ ಉಪಾಧ್ಯಕ್ಷ ಡಾ.ಸಂಜೀವ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಪಿ.ಎಚ್.ನೀರಲಕೇರಿ, ಎಂ.ಎಂ ಚಿಕ್ಕಮಠ, ರಾಮು ಮೂಲಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗರಾಜ ಅಂಗಡಿ, ಸತೀಶ ತುರುಮರಿ, ಜಿನದತ್ತ ಹಡಗಲಿ, ಶಿವಾನಂದ ಭಾವಿಕಟ್ಟಿ, ವೀರಣ್ಣ ಒಡ್ಡೀನ, ಮನೋಜ ಪಾಟೀಲ, ರಾಜೇಶ್ವರಿ ಮಹೇಶ್ವರಯ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.